ದಾವಣಗೆರೆ: ಕೋವಿಡ್ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದ ಮನೆ ವಾಸ ಅನುಭವಿಸಿದ್ದ ಜನರು, ಸೋಮವಾರ ಮುಕ್ತವಾಗಿ ನಗರದಲ್ಲಿ ಸಂಚರಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. 6.37 ಇದೆ. ಸೋಂಕಿನ ಪ್ರಮಾಣ ಕಡಿಮೆ ಆಗುವ ಲೆಕ್ಕಾಚಾರದೊಂದಿಗೆ ಸರ್ಕಾರ ಹಾಫ್ ಲಾಕ್‌ಡೌನ್ ಘೋಷಣೆ ಮಾಡಿದ್ದು, ಪ್ರತಿ ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳ ಖರೀದಿ ಜೊತೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದೆ.
ಸಂಪೂರ್ಣ ಲಾಕ್‌ಡೌನ್ ನಡುವೆ ವಾರದಲ್ಲಿ ಮೂರು ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬಹಳ ದಿನಗಳ ನಂತರ ದಿನಸಿ ಮಾರಾಟಕ್ಕೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಜನರ ಜಾತ್ರೆ ಕಂಡು ಬಂತು.
ವಾಹನಗಳ ದಟ್ಟಣೆ ಎಂದಿನಂತೆಯೇ ಇತ್ತು. ಪ್ರಮುಖ ವ್ಯಾಪಾರ-ವಹಿವಾಟಿನ ಸ್ಥಳಗಳಾದ ಮಂಡಿಪೇಟೆ, ಚಾಮರಾಜಪೇಟೆ, ಚೌಕಿಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರ ಕಂಬದ ರಸ್ತೆ, ಮಹಾರಾಜಪೇಟೆ, ದೊಡ್ಡಪೇಟೆ, ಎನ್.ಆರ್. ರಸ್ತೆ, ಕೆ.ಆರ್. ರಸ್ತೆ, ಬಂಬೂಬಜಾರ್, ಅಶೋಕ ರಸ್ತೆ, ವಿನೋಬ ನಗರ 2ನೇ ಮುಖ್ಯ ರಸ್ತೆ, ವಿದ್ಯಾನಗರ ಮುಖ್ಯ ರಸ್ತೆ ಹೀಗೆ ಎಲ್ಲಿ ನೋಡಿದರೂ ಹೆಚ್ಚಿನ ಜನಸಂದಣಿ ಸಾಮಾನ್ಯ ಎನ್ನುವಂತಿತ್ತು. ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ತರಕಾರಿ, ಹೂವು-ಹಣ್ಣು ಅಗತ್ಯ ವಸ್ತುಗಳನ್ನು ಜನರು ಮುಗಿ ಬಿದ್ದು ಖರೀದಿಸಿದರು. ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತ ಸಣ್ಣ ಜಾತ್ರೆ ನಡೆಯುತ್ತಿದೆಯೇನೋ ಎನ್ನುವಂತೆ ಜನರು ನೆರೆದಿದ್ದರು. ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರ ಎಂಬುದೇ ಕಾಣೆಯಾಗಿತ್ತು.
ಒಂದು ರೀತಿ ಬಹಳ ದಿನಗಳ ನಂತರ ಸ್ವಾತಂತ್ರ್ಯ ಸಿಕ್ಕವರಂತೆ ಜನರು ಸ್ವತ್ಛಂದವಾಗಿ ಓಡಾಡಿದರು. ಜನ, ವಾಹನ ಸಂಚಾರ ನಿರ್ಬಂಧಿಸುವ ಸಂಬಂಧ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಆಯಿತು. ಭಾರೀ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದ ಕಾರಣಕ್ಕೆ ಸವಾರರು ಏದುಸಿರು ಬಿಡುವಂತಾಗಿತ್ತು. ಸಾಕಷ್ಟು ಸಮಯದ ನಂತರ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಿತು.
ಬಟ್ಟೆ, ಬಂಗಾರದ ಅಂಗಡಿಗಳಿಗೆ ಅನುಮತಿ ಇಲ್ಲದ ಕಾರಣ ಮಂಡಿಪೇಟೆ ಇತರೆ ಭಾಗದಲ್ಲಿ ಕೆಲ ಅಂಗಡಿ ಮಾತ್ರ ತೆರೆದಿದ್ದವು. ಕೃಷಿ ಪರಿಕರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅನ್‌ಲಾಕ್ ನಡುವೆಯೂ ಕೆಲವು ಅಂಗಡಿಗಳಿಗೆ ಅನುಮತಿ ನೀಡದೇ ಇದ್ದರೂ ತೆರೆದಿದ್ದವು. ಮಧ್ಯಾಹ್ನ ಎರಡರ ನಂತರ ಎಲ್ಲ ಚಟುವಟಿಕೆ ಬಂದ್ ಆದವು. ನಿಗದಿತ ಸಮಯವಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗೆ ಇಳಿದರು.
ಕೊನೆಗೂ ರಸ್ತೆಗಿಳಿದ ಬಸ್‌ಗಳು :
ಆರನೇ ವೇತನ ಆಯೋಗದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ, ಕೊರೊನಾ, ಲಾಕ್ ಡೌನ್ ಕಾರಣಕ್ಕೆ ಹಲವಾರು ತಿಂಗಳನಿಂದ ರಸ್ತೆಗೆ ಇಳಿಯದಿದ್ದ ಸಾರಿಗೆ ಸಂಸ್ಥೆ ಬಸ್‌ಗಳು ಕೊರೊನಾ ಮಾರ್ಗಸೂಚಿ ಷರತ್ತಿಗೆ ಒಳಪಟ್ಟು ಬಹಳ ದಿನಗಳ ನಂತರ ಸಾರಿಗೆ ಸಂಸ್ಥೆಯ ಬಸ್ ಸಂಚರಿಸಿದವು. ನಗರ ಸಾರಿಗೆ ಬಸ್ ಸಹ ರಸ್ತೆಗೆ ಇಳಿದವು. ಆದರೆ ಖಾಸಗಿ ಬಸ್ ಸಂಚಾರ ಕಂಡು ಬರಲಿಲ್ಲ. ಆಟೋರಿಕ್ಷಾಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರವೇ ಅನುಮತಿ ನೀಡಲಾಗಿತ್ತು. ಆದರೂ ಕೆಲವು ಆಟೋಗಳಲ್ಲಿ ಎಂದಿನಂತೆ ಪ್ರಯಾಣಿಕರ ಸಂಚಾರ ಕಂಡು ಬಂತು.