Advertisement

ಜೀತ ನಿರ್ಮೂಲನೆ ಜಾಗೃತಿಯಿಂದ ಸಾಧ್ಯ

04:49 PM Feb 12, 2020 | Naveen |

ದಾವಣಗೆರೆ: ಸಾಲ ತೀರುವಳಿ, ಸಂಪ್ರದಾಯ ಎನ್ನುವಂತೆ ಜೀತಪದ್ಧತಿಯನ್ನ ಜಾಗೃತಿ ಮೂಲಕ ನಿರ್ಮೂಲನೆ ಮಾಡಬೇಕು ಎಂದು ಜೀವಿಕ- ಜೀತ ವಿಮುಕ್ತಿ ಕರ್ನಾಟಕದ ಸಂಸ್ಥಾಪಕಿ ಕಿರಣ್‌ ಕಮಲ್‌ ಪ್ರಸಾದ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಜೀವಿಕ- ಜೀತ ವಿಮುಕ್ತಿ ಕರ್ನಾಟಕದ ವತಿಯಿಂದ ಬಿಟ್ಟಿ ಚಾಕರಿ ಮಾಡುವವರ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಟ್ಟಿ ಚಾಕರಿ ಪದ್ಧತಿಯನ್ನೇ ಜೀತ ಎಂದು ಪರಿಗಣಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಜೀವಿಕ- ಜೀತ ವಿಮುಕ್ತಿ ಕರ್ನಾಟಕ ಸಂಸ್ಥೆ ಪ್ರಾರಂಭಿಸಲಾಗಿದೆ.

ಮಾಹಿತಿಯಂತೆ ಉತ್ತರ ಕರ್ನಾಟಕದಲ್ಲಿ 15ಸಾವಿರ ಜನ ಈಗಲೂ ಹಣ, ಏನನ್ನೂ ಪಡೆಯದೆ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಜೀತ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಕೆಲಸ ಮಾಡುವಂತಹವರಿಗೆ ಯಾವುದೇ ಜಮೀನು, ಮನೆ ಇರುವುದಿಲ್ಲ. ಸಾಲಕ್ಕಾಗಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮುಂದುವರೆಯುತ್ತಿರುವ ಜೀತ ಪದ್ಧತಿಯನ್ನ ಒಗ್ಗಟ್ಟಿನಿಂದ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಜೀತ ಪದ್ಧತಿಯಲ್ಲಿ ಕೆಲಸ ಮಾಡುವಂತಹವರಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಟ ದಿನಗೂಲಿ ದೊರೆಯುವುದಿಲ್ಲ. ಅಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಸರ್ಕಾರದಿಂದ ಪುನರ್ವಸತಿ ಹಣ ಬರುತ್ತಾದರೂ, ಶೈಕ್ಷಣಿಕವಾಗಿ ಹಿಂದುಳಿದಂತಹವರು ದಬ್ಟಾಳಿಕೆಗೆ ಹೆದರಿ ದಾನದ ಕಾಳಿಗಾಗಿ ಬಿಟ್ಟಿ ಚಾಕರಿ ಮಾಡುವುದು ಇದೆ. ಒಗ್ಗಟ್ಟಿನಿಂದ ಪ್ರತಿರೋಧ ಒಡ್ಡಿದರೆ ಮಾತ್ರವೇ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಆವರಗೊಳ್ಳ ಗ್ರಾಮ ಪಂಚಾಯತಿ ಸದಸ್ಯ ದೊಡ್ಡಪ್ಪ ಮಾತನಾಡಿ, ದೊಡ್ಡವರ ಮನೆಕೆಲಸಗಳಿಗೆ, ಹಬ್ಬ-ಜಾತ್ರೆಗಳಲ್ಲಿ ಬಿಟ್ಟಿ ಚಾಕರಿ ಮಾಡಲು ಇಂದಿಗೂ ಬಳಸಿಕೊಳ್ಳುವುದು ಜನಾಂಗದ ಅಭಿವೃದ್ಧಿಗೆ ತಡೆಗೋಡೆಯಾಗಿದೆ. ಬಿಟ್ಟಿ ಚಾಕರಿ ಮಾಡುವಂತಹವರನ್ನ ಕೀಳಾಗಿ ಕಾಣುವಂತಹವರು ಮನೆಯಲ್ಲಿನ ದನ-ಕರು ಸತ್ತರೆ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ ಎಂದು ಅಳಲು ತೋಡಿಕೊಂಡರು.

Advertisement

ಹಳ್ಳಿಗಳಲ್ಲಿ ಇಂದಿಗೂ ಬಿಟ್ಟಿ ಚಾಕರಿ ಮಾಡುವುದು ಇದೆ. ಜೀತ ಪದ್ಧತಿಗಿಂತ ನಿಕೃಷ್ಟವಾಗಿದೆ. ಜಾತ್ರೆಯಲ್ಲಿ 5ರಿಂದ 6 ಜನ ಒಂದು ವಾರ ಕೆಲಸ ಮಾಡಿದರೂ 100 ರೂಪಾಯಿ ಸಿಗುವುದಿಲ್ಲ. 10-20 ರೂಪಾಯಿಗೆ ಶವದ ಕೆಲಸ ಮಾಡುತ್ತೇವೆ. ಸತ್ತ ಜಾನುವಾರುಗಳನ್ನು ಎಸೆಯಲು ಅಲೆಯಬೇಕು. ಭಯದ ವಾತಾವರಣ, ಬಡತನದಿಂದ ಚಕಾರವೆತ್ತದೆ ಎಲ್ಲವನ್ನೂ ಸಹಿಸಬೇಕಾಗಿದೆ ಎಂದರು.

ಮನವಿ ಪತ್ರ ಸ್ವೀಕರಿಸಿದ ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ಬಡತನದ ಕಾರಣಗಳಿಗಾಗಿ ಬಿಟ್ಟಿ ಚಾಕರಿ ಮಾಡುವುದು ವಿಷಾದನೀಯ. ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಸಂಧ್ಯಾ ಸುರಕ್ಷಾ, ವಿಧವಾ, ವೃದ್ಧಾಪ್ಯ ವೇತನ ಸೌಲಭ್ಯ ವಂಚಿತರಾದವರ ಪಟ್ಟಿ ನೀಡಿದರೆ ಸೌಲಭ್ಯ ದೊರಕಿಸುವುದಾಗಿ ಆಶ್ವಾಸನೆ ನೀಡಿದರು.

ಜೀವಿಕ ಜಿಲ್ಲಾ ಸಂಚಾಲಕ ಚಂದ್ರಪ್ಪ, ತಾಲೂಕು ಸಂಚಾಲಕ ಎನ್‌. ಮಂಜುನಾಥ್‌, ಬೇತೂರು ಮಂಜುನಾಥ್‌, ಬಾಬಣ್ಣ ಜಗಳೂರು, ಚಿಕ್ಕಮ್ಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next