Advertisement

ಸಮಸ್ಯೆಗಳಿದ್ದರೆ ಪ್ರಾಧಿಕಾರದ ಬಳಿ ಬನ್ನಿ

10:20 AM Jun 01, 2019 | Naveen |

ದಾವಣಗೆರೆ: ಮಹಿಳಾ ಕಾರ್ಮಿಕರು ಮುಕ್ತ ಮನಸ್ಸಿನಿಂದ ತಮ್ಮ ಸಮಸ್ಯೆಗಳನ್ನು ಕಾನೂನು ಸೇವಾ ಪ್ರಾಧಿಕಾರದ ಬಳಿ ಹೇಳಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್‌ ತಿಳಿಸಿದರು.

Advertisement

ನಗರದ ನಿಟ್ಟುವಳ್ಳಿಯ ಸಾಯಿ ಕ್ರಿಯೆಷನ್ಸ್‌ ಸಭಾಂಗಣದ‌ಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕರ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ಕಾನೂನುಗಳು ಹಾಗೂ ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಕಾರ್ಮಿಕರ ಶ್ರಮದ ಫಲವಾಗಿ ಇಂದು ಸಾಕಷ್ಟು ಸಣ್ಣ ಕೈಗಾರಿಕೆಗಳು, ಗಾರ್ಮೆಂಟ್ಸ್‌ಗಳು ಅಭಿವೃದ್ಧಿ ಹೊಂದುತ್ತಿವೆ. ಅವರ ಕೌಶಲ್ಯದಿಂದಾಗಿ ಎಲ್ಲರೂ ಉತ್ತಮ ಸಿದ್ಧ ಉಡುಪುಗಳನ್ನು ಧರಿಸುವಂತಾಗಿದೆ. ಅಂತಹ ಮಹಿಳಾ ಕಾರ್ಮಿಕರಿಗೆ ವಿಶೇಷ ಪ್ರಾಧಾನ್ಯತೆ, ಗೌರವ, ಸೌಲಭ್ಯ ದೊರಕಿಸುವುದು ಪ್ರತಿಯೊಬ್ಬ ಕಾರ್ಖಾನೆಗಳ ಮಾಲೀಕರ, ಇಲಾಖೆಗಳ ಜವಾಬ್ದಾರಿ ಎಂದರು.

ಮಹಿಳಾ ಕಾರ್ಮಿಕರಲ್ಲಿ ಕಾನೂನಿನ ಅರಿವು ಮೂಡಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಮಹಿಳಾ ಕಾರ್ಮಿಕರು ಯಾವುದೇ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಕೂಡ ಮುಕ್ತ ಮನಸ್ಸಿನಿಂದ ನಮ್ಮ ಪ್ರಾಧಿಕಾರ ನೆರವು ಪಡೆಯಿರಿ. ತಮಗೆ ನ್ಯಾಯ ದೊರಕಿಸಲು ಸದಾ ಪ್ರಾಧಿಕಾರ ಬದ್ಧವಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌ ಮಾತನಾಡಿ, ಪ್ರತಿಯೊಬ್ಬರು ಕೂಡ ಒಂದು ರೀತಿಯಲ್ಲಿ ಕಾರ್ಮಿಕರು. ಆದರೆ, ಕೆಲಸ ನಿರ್ವಹಿಸುತ್ತಿರುವ ವಿಸ್ತಾರದ ವ್ಯಾಪ್ತಿ ಬೇರೆ ಅಷ್ಟೇ. ಹಾಗಾಗಿ ಎಲ್ಲಾ ಶ್ರಮಿಕ ವಲಯದ ಕಾರ್ಮಿಕರಿಗೆ ಸಮಾನ ನ್ಯಾಯ ದೊರೆಯಬೇಕು ಎಂದರು.

Advertisement

ಸಣ್ಣ ಕೈಗಾರಿಕೆ, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರು ನಿತ್ಯ ಕೆಲಸಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಇರುವ ವಾಹನಗಳಲ್ಲಿ ಪ್ರಯಾಣಿಸಬೇಕು. ಸರಕು ವಾಹನಗಳಲ್ಲಿ ಪ್ರಯಾಣಿಸಬಾರದು. ಅದು ಕಾನೂನು ಬಾಹಿರ ಕೂಡ. ಜೊತೆಗೆ ಸರಕು ವಾಹನಗಳಲ್ಲಿ ಪ್ರಯಾಣಿಸುವ ಕಾರ್ಮಿಕರಿಗೆ ಆಗುವ ಅವಘಡ, ಅಪಘಾತಗಳಿಗೆ ಇನ್ಸೂರೆನ್ಸ್‌ ಕಂಪನಿಗಳಿಂದ ಕಾನೂನಿನ ಚೌಕಟ್ಟಿನಡಿ ಯಾವುದೇ ರೀತಿ ಪರಿಹಾರ ದೊರೆಯುವುದಿಲ್ಲ ಎಂದು ತಿಳಿಸಿದರು.

ಸ್ವಂತ ವಾಹನದಲ್ಲಿ ಪ್ರಯಾಣಿಸುವ ಕಾರ್ಮಿಕರ ವಾಹನ ಕೂಡ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಇನ್ಸೂರೆನ್ಸ್‌ ಚಾಲ್ತಿಯಲ್ಲಿರಬೇಕು, ವಾಹನ ಚಾಲನಾ ಪರವಾನಗಿ ಕಡ್ಡಾಯವಾಗಿರಬೇಕು. ಆಗ ಮಾತ್ರ ಅನಾಹುತ ಸಂಭವಿಸಿದಾಗ ಸೌಲಭ್ಯ ಪಡೆಯಲು ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಿರಬೇಕು. ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ತಮಗೆ ಬೇಕಾದ ಹಕ್ಕು, ಸೌಲಭ್ಯಗಳನ್ನು ಕಾನೂನಿನಡಿ ಪಡೆದುಕೊಳ್ಳಬೇಕು ಎಂದರು.

ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್‌ ಮಾತನಾಡಿ, ಮಹಿಳಾ ಕಾರ್ಮಿಕರು ಸರಕು ಸಾಗಾಣೆ ವಾಹನದಲ್ಲಿ ಸಂಚರಿಸಬಾರದು. ದೂರದ ಹಳ್ಳಿಗಳಿಂದ ತಮ್ಮ ಗಾರ್ಮೆಂಟ್ಸ್‌, ಕಾರ್ಖಾನೆಗೆ ಪ್ರತಿದಿನ 40 ಜನರಷ್ಟು ಕಾರ್ಮಿಕರು ಪ್ರಯಾಣ ಮಾಡುವುದಾದರೆ ನಮ್ಮ ಗಮನಕ್ಕೆ ತನ್ನಿ. ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಮಿಕರಿಗೆ ವರ್ಷದಲ್ಲಿ 5ರಾಷ್ಟ್ರೀಯ ಹಬ್ಬಗಳಿಗೆ ರಜೆ ನೀಡಬೇಕು. ಇತರೆ ಸ್ಥಳೀಯ ಮುಖ್ಯವಾದ ಹಬ್ಬಗಳಿಗೆ ರಜೆ ನೀಡಬೇಕು. ಐದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುವ ಕಾರ್ಮಿಕರಿಗೆ ಗ್ರಾಜ್ಯುಯಿಟಿಯನ್ನು ಕಾರ್ಖಾನೆ ಮಾಲೀಕರು ನೀಡಬೇಕು. ವೇತನ, ಪಿಎಫ್‌, ಬೋನಸ್‌ ಸೇರಿದಂತೆ ಇತರೆ ಸೇವೆಗಳ ಬಗ್ಗೆ ಕಾರ್ಮಿಕರು ಅರಿವು ಹೊಂದಿರ‌ಬೇಕು ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್‌, ಕಾರ್ಮಿಕರ ನಿರೀಕ್ಷಕರಾದ ಮುಮ್ತಾಜ್‌ ಬೇಗಂ, ಸಾಯಿ ಕ್ರಿಯೆಷನ್ಸ್‌ ಪಾಲುದಾರ ಮುರುಗೇಶ್‌ ಬಾದಾಮಿ, ವೇಮಣ್ಣ, ಯೋಜನಾ ನಿರ್ದೇಶಕ ಪ್ರಸನ್ನಕುಮಾರ್‌ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿಗೆ ಕಾರ್ಮಿಕರ ಕೊಡುಗೆ ಅಪಾರ
ದೇಶದ ಪ್ರಗತಿಗೆ ಕಾರ್ಮಿಕರ ಪಾಲು ಅಪಾರವಾಗಿದೆ. ಕಾರ್ಮಿಕರು ಮತ್ತು ರೈತರು ಎರಡು ಕಣ್ಣುಗಳಿದ್ದ ಹಾಗೆ. ದುರಂತವೆಂದರೆ, ದೇಶದ ಪ್ರಗತಿಗೆ ಕಾರಣರಾದವರ ಬದುಕೇ ಇಂದು ಶೋಚನಿಯವಾಗಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ನಡುವೆಯೂ ಕಾರ್ಮಿಕ ವಲಯ ದೇಶದ ಪ್ರಗತಿಗೆ ಶ್ರಮಿಸುತ್ತಿದೆ. ಕಾರ್ಮಿಕ ಚಳವಳಿಗಳಿಂದಾಗಿ ಸಾಕಷ್ಟು ಸೌಲಭ್ಯಗಳ ಕಾನೂನು ಬಂದಿವೆ. ಅವುಗಳನ್ನು ಪ್ರತಿಯೊಬ್ಬ ಕಾರ್ಮಿಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next