Advertisement

ಎಲ್ಲರಿಗೂ ಕಾನೂನು ಅರಿವು ಅಗತ್ಯ

10:20 AM Jul 10, 2019 | Naveen |

ದಾವಣಗೆರೆ: ವಿದ್ಯಾರ್ಥಿಗಳು ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕಾಯ್ದೆ, ಕಾನೂನುಗಳ ಅರಿವು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್‌ ತಿಳಿಸಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ, ಆರಕ್ಷಕ, ಸರ್ಕಾರಿ ಅಭಿಯೋಜಕ ಇಲಾಖೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಶಾಮನೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಕಾನೂನಿನ ಅರಿವು ಕೊರತೆಯಿಂದ ಸಮಾಜಘಾತುಕ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.

ದೇಶದ್ಯಾಂತ ಜಿಲ್ಲಾ ಮುಖ್ಯ ನ್ಯಾಯಾಧೀಶರುಗಳ ನೇತೃತ್ವದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿ ಸಮುದಾಯ, ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಸಮಾಜಘಾತುಕ ಕಾರ್ಯಗಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.

ಅನ್ಯಾಯಕ್ಕೆ ಒಳಗಾದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಸಹಾಯ ಒದಗಿಸಲಾಗುತ್ತಿದೆ. ಮಕ್ಕಳು ಕಾರ್ಯಕ್ರಮದ ಮೂಲಕ ಕಾನೂನುಗಳನ್ನು ಅರಿತು ಕುಟುಂಬ ಮತ್ತು ನೆರೆಹೊರೆಯವರಲ್ಲಿ ಕಾನೂನಿನ ಅರಿವು ಮೂಡುವಂತೆ ಮಾಡಬೇಕು .ಆಗ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗಲಿವೆ ಎಂದರು.

ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಂಜಪ್ಪ ಕಾಕನೂರು ಮಾತನಾಡಿ, ಮೂಲಭೂತ ಹಕ್ಕು ಮತ್ತು ಮೂಲಭೂತ ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ನೀತಿ ನಿಯಮಗಳನ್ನು ಆಧರಿಸಿ ರಚಿಸಲ್ಪಟ್ಟ ಕಾನೂನುಗಳನ್ನು ದೇಶದ ಪ್ರತಿಯೊಬ್ಬರೂ ಅವಶ್ಯಕವಾಗಿ ತಿಳಿಯಬೇಕು ಎಂದು ತಿಳಿಸಿದರು.

Advertisement

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಸರ್ಕಾರಿ ಶಾಲೆಗಳು ಉತ್ತಮವಾಗಿವೆ. ಸಮಾಜದಲ್ಲಿ ಇಂದು ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಓದಿ ಶ್ರೇಷ್ಠ ವಿಜ್ಞಾನಿ, ಆರ್ಥಿಕ ಚಿಂತಕರು, ಇಂಜಿನಿಯರ್‌, ರಾಜಕಾರಣಿಗಳು, ನ್ಯಾಯಾಧೀಶರಗಳು ಸೇರಿದಂತೆ ಉನ್ನತ ಅಧಿಕಾರಿಗಳ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾದ ಅರ್ಹತೆಗಳಿಲ್ಲದಿದ್ದರೂ ಇಂದು ಶಿಕ್ಷಕರಾಗಿದ್ದಾರೆ. ಅವರುಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಶಿಕ್ಷಕರೇ ಎಷ್ಟೋ ಉತ್ತಮ ಎಂದು ತಿಳಿಸಿದರು.

ಮಕ್ಕಳು ಅವಶ್ಯವಾಗಿ ತಿಳಿಯಬೇಕಾದ ಸಂವಿಧಾನದ 14ನೇ ವಿಧಿಯಿಂದ 32ನೇ ವಿಧಿಯವರೆಗೆ ಇರುವ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳ ಕುರಿತು ಅರಿವು ಮೂಡಿಸಿದರು.

ಅಧ್ಯಕ್ಷತೆ ವ‌ಹಿಸಿದ್ದ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಮಾತನಾಡಿ, ಮಕ್ಕಳಿಗೆ ಇಂದು ಮಾರ್ಗದರ್ಶನ ನೀಡಲು ಉತ್ತಮ ಶಿಕ್ಷಕರಿದ್ದರೂ ಮಕ್ಕಳು ಒಳ್ಳೆಯ ಮಾರ್ಗಗಳನ್ನು ಅನುಸರಿಸುತ್ತಿಲ್ಲ. ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಿದರೆ ಅವರು ಸರಿದಾರಿಯಲ್ಲಿ ನಡೆಯಲು ಸಹಕಾರಿಯಾಗಲಿದೆೆ ಎಂದರು.

ನ್ಯಾಯವಾದಿ ಬಿ.ವಿ.ಮಂಜುಳಾ, ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಕಾಯ್ದೆಯ ನೀತಿ ನಿಯಮಗಳನ್ನು ತಿಳಿಸಿಕೊಟ್ಟರು. ಹಿರಿಯ ವಕೀಲ ಆಂಜನೇಯ ಗುರೂಜಿ, ಶಿಕ್ಷಕ ವೀರಣ್ಣ, ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next