Advertisement

ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಿ

10:15 AM Jun 14, 2019 | Team Udayavani |

ದಾವಣಗೆರೆ: 22 ಕೆರೆ ಏತ ನೀರಾವರಿ ಯೋಜನೆಯಡಿ ಎಲ್ಲಾ ಕೆರೆಗಳಿಗೆ ಒಂದು ವಾರದಲ್ಲಿ ನೀರು ಹರಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 22 ಕೆರೆ ಏತ, ಸಾಸ್ವೇಹಳ್ಳಿ, ಹರಪನಹಳ್ಳಿ, ಜಗಳೂರು ತಾಲೂಕಿನ ಕೆರೆ ತುಂಬಿಸುವ ಯೋಜನೆಗಳ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 22 ಕೆರೆ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 4 ಕಡೆ ಪೈಪ್‌ಲೈನ್‌ ಲಿಂಕ್‌, ತುಪ್ಪದಹಳ್ಳಿ ಕೆರೆಗೆ ಪೈಪ್‌ಲೈನ್‌ ವಿಸ್ತರಣೆ ಕೆಲಸ ಮುಗಿಸಿ, ಒಂದು ವಾರದಲ್ಲಿ ನೀರು ಹರಿಸುವುದಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

22 ಕೆರೆ ಏತ ನೀರಾವರಿ ಯೋಜನೆ ಪ್ರಾರಂಭವಾಗಿಯೇ 7-8 ವರ್ಷ ಕಳೆದರೂ ಕೆರೆಗಳ ತುಂಬಿಸುವ ಕೆಲಸ ಆಗಿಲ್ಲ. ಇನ್ನೂ 4 ಕೆರೆಗಳಿಗೆ ಪೈಪ್‌ಲೈನ್‌ ಲಿಂಕ್‌ ಕೆಲಸ ಬಾಕಿ ಇದೆ ಎಂದು ರೈತರು ಹೇಳುತ್ತಾರೆ. ಮೊದಲೇ ಮಳೆ ಇಲ್ಲ. ಈವರ್ಷವೂ ಮಳೆ ಕಡಿಮೆ ಎನ್ನುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆರೆಗಳನ್ನು ತುಂಬಿಸಿದರೆ ಎಲ್ಲಾ ರೀತಿಯಲ್ಲಿ ಅನುಕೂಲ ಆಗುತ್ತದೆ ಎಂದು ಹೇಳಿದರು.

ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ಪೈಪ್‌ಲೈನ್‌ ವಿಸ್ತರಣೆ ಕೆಲಸ ತಡವಾಗುತ್ತಿದೆ. ಸಂಬಂಧಿತರಿಗೆ ನೋಟಿಸ್‌ ಜಾರಿ ಮಾಡಿ, ಒಂದು ವಾರದಲ್ಲಿ ಕೆಲಸ ಮಗಿಸಬೇಕು ಎಂದು ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್‌. ಯತೀಶ್ಚಂದ್ರ ಅವರಿಗೆ ಸೂಚಿಸಿದರು. ಸಾಕಷ್ಟು ಚರ್ಚೆಯ ನಂತರ ಜೂ. 20 ರ ನಂತರ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಇಂಜಿನಿಯರ್‌ಗಳು ತಿಳಿಸಿದರು.

•ಸಾಸ್ವೇಹಳ್ಳಿ ಯೋಜನೆ: ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಒಟ್ಟು 303 ಕಿಲೋ ಮೀಟರ್‌ ಪೈಪ್‌ಲೈನ್‌ ಹಾಕಬೇಕಿದೆ. ಈವರೆಗೆ 133 ಕಿಲೋ ಮೀಟರ್‌ ಹಾಕಲಾಗಿದೆ. 63 ಕಿಲೋ ಮೀಟರ್‌ವರೆಗೆ ಅಳವಡಿಸಲು ಪೈಪ್‌ಗ್ಳು ಸಿದ್ಧ ಇವೆ. ಒಂದು ತಿಂಗಳಲ್ಲಿ ಹಾಕಲಾಗುವುದು ಎಂದು ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್‌. ಯತೀಶ್ಚಂದ್ರ ತಿಳಿಸಿದರು.

Advertisement

ಮಾವಿನಕೋಟೆ, ಹಟ್ಟಿಹಾಳ್‌, ಜಕ್ಲಿ-ಚನ್ನೇಶಪುರ, ಕೆ. ಗಾಣದಕಟ್ಟೆ ಇತರೆ ಭಾಗದಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಲಾಗಿದೆ. 60 ದಿನಗಳ ಕಾಲಾವಕಾಶ ಇದೆ. ಆದಷ್ಟು ಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಭಾರ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ಕೆಲವಾರು ಕಡೆ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಚೀಲಾಪುರ ಸಮೀಪ ತೋಟದಲ್ಲಿ ಪೈಪ್‌ ಲೈನ್‌ ಹಾದು ಹೋಗಬೇಕಿದೆ. ತೋಟದವರು ಪರಿಹಾರ ಕೋರಿ ಕೆಲಸಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ತಿಳಿಸಿದರು. ರೈತರಿಗೆ ಮನವರಿಕೆ ಮಾಡಿಕೊಟ್ಟು, ಪರಿಹಾರ ನೀಡಿ, ಕೆಲಸ ಮುಂದುವರೆಸಿ ಎಂದು ಸಂಸದ ಸಿದ್ದೇಶ್ವರ್‌ ಸೂಚಿಸಿದರು.

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ 221 ಕೆರೆಗಳ ತುಂಬಿಸಲಾಗುವುದು. 2020ರ ಜೂನ್‌ಗೆ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲಾಗುವುದು ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್‌. ಯತೀಶ್ಚಂದ್ರ ತಿಳಿಸಿದರು. ಅದಕ್ಕಿಂತಲೂ ಮುಂಚೆಯೇ ಕೆಲಸ ಮುಗಿಸಬಾರದು ಎಂದೇನಿಲ್ಲವಲ್ಲ. ಹಾಗಾಗಿ ಆದಷ್ಟು ಬೇಗ ಕೆಲಸ ಮುಗಿಸಬೇಕು ಎಂದು ಸಿದ್ದೇಶ್ವರ್‌ ಸೂಚಿಸಿದರು.

•ಹರಪನಹಳ್ಳಿ: ತುಂಗಭದ್ರಾ ನದಿಯಿಂದ ಹರಪನಹಳ್ಳಿ ತಾಲೂಕಿನ 50 ಕೆರೆ ತುಂಬಿಸುವ ಯೋಜನೆಯಡಿ 70 ಕಿಲೋ ಮೀಟರ್‌ ಪೈಪ್‌ಲೈನ್‌ ಕಾಮಗಾರಿ ಮುಗಿದಿದೆ. 180 ಕಿಲೋ ಮೀಟರ್‌ ಹಾಕಬೇಕಾಗಿದೆ. ಇದನ್ನು ಸಹ ಸಹ ಮುಂದಿನ ಜೂನ್‌ಗೆ ಮುಗಿಸಲಾಗುವುದು ಎಂದು ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್‌. ಯತೀಶ್ಚಂದ್ರ ತಿಳಿಸಿದರು.

ಮೊದಲು 60 ಕೆರೆಗಳಿದ್ದವು. ಈಗ 50 ಕೆರೆಗಳಿಗೆ ಯೋಜನೆ ಇಳಿಸಲಾಗಿದೆ. ಚಿಗಟೇರಿ, ನಿಚ್ಚಾಪುರ, ಕಣಿವೆಹಳ್ಳಿ ತಾಂಡಾ ಕೆರೆ ಬಿಟ್ಟು ಹೋಗಿವೆ. ಶಾಸಕ ಕರುಣಾಕರರೆಡ್ಡಿ ಮೂರು ಕೆರೆ ಸೇರಿಸುವಂತೆ ಸೂಚಿಸಿ ಒಂದೂವರೆ ತಿಂಗಳಾದರೂ ಸೇರಿಸಿಲ್ಲ. ಹರಪನಹಳ್ಳಿ ತಾಲೂಕಿನವರೇ ಆದ ಇಂಜಿನಿಯರ್‌ ಕೊಟ್ರೇಶಪ್ಪ ನಿರ್ಲಕ್ಷ್ಯ ಮಾಡುತ್ತಾರೆ. ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಹರಿಹರ, ಹೊನ್ನಾಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ಸರ್ವೇ, ಡಿಪಿಆರ್‌ಗೆ ಸಂಸದ ಸಿದ್ದೇಶ್ವರ್‌ ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ವಿವಿಧ ಹಂತದ ಅಧಿಕಾರಿಗಳು, ಇಂಜಿನಿಯರ್‌ ಗಳು ಇದ್ದರು.

ಕೊರಳಪಟ್ಟಿ ಹಿಡಿಯುತ್ತಾರೆ….
ಸಭೆಯಲ್ಲಿ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, 660 ಕೋಟಿ ವೆಚ್ಚದಲ್ಲಿ ಜಗಳೂರು ತಾಲೂಕಿನ 63 ಗ್ರಾಮಗಳಿಗೆ ನೀರು ಹರಿಸುವ ಯೋಜನೆಯಡಿ ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ಕ್ಯಾರೇಕಟ್ಟೆ, ತೌಡೂರು, ಅರಸೀಕೆರೆ, ಕಣಿವೆಹಳ್ಳಿ, ಹಿಕ್ಕಿಂಗೆರೆ ಕೆರೆ ಸೇರಿಸಬೇಕು. ಆದಷ್ಟು ಬೇಗ ಕೆರೆಗಳಿಗೆ ನೀರು ಹರಿಸಬೇಕು. ಇಲ್ಲ ಅಂದರೆ ಜನರು ನಮ್ಮ ಕೊರಳಪಟ್ಟಿ ಹಿಡಿದು ಕೇಳುವ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅಷ್ಟೊಂದು ವಿಕೋಪಕ್ಕೆ ಹೋಗಿದೆ. 53 ಗ್ರಾಮಗಳಲ್ಲಿ ಈಗಲೂ ಟ್ಯಾಂಕರ್‌ನಲ್ಲೇ ನೀರು ಕೊಡಲಾಗುತ್ತದೆ. ನಾನು, ಸಿದ್ದೇಶಣ್ಣ ಓಡಾಡುವುದಕ್ಕೂ ಆಗುವುದಿಲ್ಲ. ನಾವು ಜಗಳೂರು ಜನರು ಎಲ್ಲದರಲ್ಲೂ ಕೊನೆ. ಒಂದು ರೀತಿಯ ಪಾಪ ಮಾಡಿದ್ದೇವೆ ಎಂದು ಎನಿಸುತ್ತದೆ ಎಂದಾಗ ನಾನು ಪಾಪ ಮಾಡಿ ಎಂಪಿ, ನೀನು ಎಂಎಲ್ಎ ಆಗಿಯ ಬಿಡು ಎಂದು ಸಮಾಧಾನ ಪಡಿಸುವಂತೆ ಹೇಳಿದ ಸಿದ್ದೇಶ್ವರ್‌, ಮುಂದಿನ ಜೂನ್‌ಗೆ ಎಲ್ಲಾ 63 ಕೆರೆಗಳಿಗೆ ನೀರು ಹರಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next