ದಾವಣಗೆರೆ: ಸರ್ಕಾರದಿಂದಲೇ ವೇತನ, ಡೀಸೆಲ್ ಮೇಲಿನ ಸುಂಕ ಕಡಿತ, ವೈದ್ಯಕೀಯ ಸೌಲಭ್ಯ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ಕೆಎಸ್ಸಾರ್ಟಿಸಿ ನೌಕರರು, ಕಾರ್ಮಿಕರು, ಸಿಬ್ಬಂದಿ ಮಂಗಳವಾರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಧರಣಿ ನಡೆಸಿದರು.
ಕೆಎಸ್ಸಾರ್ಟಿಸಿ ನಾಲ್ಕು ವಿಭಾಗಗಳಾಗಿ ವಿಭಜನೆ ಆದ ನಂತರ ನಷ್ಟದ ಜೊತೆ ಗೆ ಭ್ರಷ್ಟಾಚಾರದ ಪ್ರಮಾಣವೂ ಹೆಚ್ಚಾಗುತ್ತಿದೆ ಹೊರತು ಸಂಸ್ಥೆಗಳಲ್ಲಿನ ಕಾರ್ಮಿಕರಿಗೆ, ಪ್ರಯಾಣಿಕರಿಗೆ ವಿಶೇಷ ಅನುಕೂಲ ಆಗುತ್ತಿಲ್ಲ. ಕಾರ್ಮಿಕರ ಸಂಖ್ಯೆ ಕಡಿತದಿಂದ ಇರುವಂತಹವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಸಾಕಷ್ಟು ಕಿರುಕುಳ ಆಗುತ್ತಿದೆ. ಹಾಗಾಗಿ ನಾಲ್ಕು ನಿಗಮಗಳನ್ನು ಒಂದು ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ನಾಲ್ಕು ನಿಗಮಗಳ ಹಣಕಾಸು ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ನಿಗಮಗಳಿಗೆ ಅನುಕೂಲ ಆಗುವಂತೆ ಮೋಟಾರ್ ವೆಹಿಕಲ್ ತೆರಿಗೆ ರಿಯಾಯತಿ ನೀಡಬೇಕು. ಡೀಸೆಲ್ ಮೇಲಿನ ಸುಂ ಕಡಿಮೆ ಮಾಡುವ ಜೊತೆಗೆ ಸಂಸ್ಥೆಯ ವಿಕಾಸಕ್ಕೆ ಸರ್ಕಾರ ವರ್ಷಕ್ಕೆ 1 ಸಾವಿರ ಕೋಟಿ ಅನುದಾನ ನೀಡಬೇಕು. ಸರ್ಕಾರವೇ ವೇತನ ಪಾವತಿ ಮಾಡುವಂತಾಗಬೇಕು. ಕೆಎಸ್ಸಾರ್ಟಿಸಿ ನಷ್ಟಕ್ಕೆ ಕಾರಣವಾಗುತ್ತಿರುವ ಖಾಸಗಿ ಬಸ್ ಕಾನೂನು ಬಾಹಿರ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಅವೈಜ್ಞಾನಿಕವಾದ ನಮೂನೆ-4ನಿಂದ ಚಾಲಕರು ಮತ್ತು ನಿರ್ವಾಹಕ ಕೆಲಸದ ಭಾರ ಜಾಸ್ತಿ ಆಗುತ್ತಿದೆ. ಕಾನೂನು ರೀತಿ ಓವರ್ ಟೈಮ್ ಕೊಡುತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ತಪಾಸಣೆಯ ಹೆಸರಲ್ಲಿ ನಿರ್ವಾಹಕರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗುತ್ತಿದೆ. ಎನ್‌ಐಎನ್‌ಸಿ ಹೆಸರಿನಲ್ಲಿ ವಿವೇಚನೆ ಇಲ್ಲದ ಶಿಕ್ಷೆಗಳಾಗುತ್ತಿವೆ. ಅತಿಯಾದ ಕಿರುಕುಳದ ಪರಿಣಾಮ ಅನೇಕರು ಆತ್ಮಹತ್ಯೆಗೂ ಒಳಗಾಗುತ್ತಿದ್ದಾರೆ. ಸಂಬಂಧಿತರು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಎಲ್ಲಾ ಕಡೆ ಕಾರ್ಮಿಕರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಕೆಎಸ್ಸಾರ್ಟಿಸಿಯ ನಾಲ್ಕು ನಿಗಮಗಳಲ್ಲಿ ಕೆಲಸ ಮಾಡುತ್ತಿರುವ 1.15 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಅಸಮರ್ಪಕ
ವಾದ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ದಿನವೂ ಅತೀವ ಒತ್ತಡದ ನಡುವೆಯೇ ಕೆಲಸ ಮಾಡುವಂತಹವರು ಅನಾರೋಗ್ಯಕ್ಕೆ ತುತ್ತಾದಲ್ಲಿ ವಿಶೇಷ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಅಗತ್ಯವಾದ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣ ಮಾಡಬೇಕು. ಐ-ತೀರ್ಪಿನಂತೆ ಮನೆಯಲ್ಲೇ ಚಿಕಿತ್ಸೆ ಪಡೆಯುವಂತರಿಗೆ ಮಾಸಿಕ 200 ರೂ. ನೀಡಿ ಅನುಕೂಲ ಮಾಡಿಕೊಡಬೇಕು ಎಂದರು. ಕೆಎಸ್ಸಾರ್ಟಿಸಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಿ ಒಳ್ಳೆಯ ಸೇವೆ ಒದಗಿಸುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕ್‌ರ್ಸ್ ಫೆಡರೇಷನ್‌ನ ಪ್ರಕಾಶ್, ಎಚ್. ಹನುಮಂತಪ್ಪ,ಶಬ್ಬೀರ್ ಅಹಮ್ಮದ್, ಮಿರ್ಜಾ ರಹಮತುಲ್ಲಾ, ಎನ್.ಎಂ. ಲೋಕಪ್ಪ, ವಿಶ್ವನಾಥ್ ಇತರರು ಇದ್ದರು.