ದಾವಣಗೆರೆ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ… ಅನಾವರಣಗೊಂಡಿತು.
ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವಂತಹ ಅಧಿಕಾರಿಯೇ ರೈತರಿಗೆ ಮಾಹಿತಿ ನೀಡುವ ಜೊತೆಗೆ ಬೆಳೆ ಹಾನಿ ಸಮೀಕ್ಷೆ ಒಳಗೊಂಡಂತೆ ಎಲ್ಲಾ ಕೆಲಸ ಮಾಡಬೇಕಾಗುತ್ತಿದೆ. ಒಟ್ಟು 301 ಮಂಜೂರಾತಿ ಹುದ್ದೆಗಳಲ್ಲಿ 127 ಹುದ್ದೆ ಖಾಲಿ ಇವೆ ಎಂದು ಕೃಷಿ ಇಲಾಖೆಯ ಶ್ರೀಧರ ಮೂರ್ತಿ ತಿಳಿಸಿದರು.
ತೋಟಗಾರಿಕಾ ಇಲಾಖೆಯಲ್ಲೂ ಅಗತ್ಯ ಸಿಬ್ಬಂದಿ ಕೊರತೆ ಇದೆ. ಹೊನ್ನಾಳಿ ಮತ್ತು ಚನ್ನಗಿರಿ ರೈತ ಸಂಪರ್ಕ ಕೇಂದ್ರದಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಪ್ರತಿ ತಿಂಗಳು ಸರ್ಕಾರಕ್ಕೆ ಕಳಿಸುವ ವರದಿಯಲ್ಲಿ ಎಲ್ಲಾ ಇಲಾಖೆಯಿಂದ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನರ್ ತಿಳಿಸಿದರು.
ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವಾರು ತಜ್ಞ ವೈದ್ಯರ ಕೊರತೆ ಇದೆ. ಸರ್ಕಾರ ಮಂಜೂರು ಮಾಡಿರುವ ಹುದ್ದೆಗಳಲ್ಲಿ ಕೆಲಸ ಮಾಡಿಕೊಂಡು ಹೋಗಬೇಕಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ರಾಘವೇಂದ್ರಸ್ವಾಮಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಗಳೂರು, ಹರಿಹರದಲ್ಲಿ ಎಇಇಗಳೇ ಇಲ್ಲ. ಅತೀವ ನೀರಿನ ಸಮಸ್ಯೆ ಹೊಂದಿರುವ ಜಗಳೂರು ತಾಲೂಕಿನಲ್ಲೂ ಸಿಬ್ಬಂದಿ ಕೊರತೆ ಇದೆ. ಅಲ್ಲಿ ಕೆಲಸ ಮಾಡುತ್ತಿರುವರು ನಿಗದಿತವಾಗಿ ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ಅಂತಹ ಅನಾರೋಗ್ಯದ ನಡುವೆಯೂ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಪಾಲಕ ಇಂಜಿನಿಯರ್ ಎಚ್.ಎನ್. ರಾಜು ತಿಳಿಸಿದರು.
ನಿಗದಿತ ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಇಲ್ಲದೇ ಇರುವಾಗ ಹೇಗೆ ತಾನೆ ಕೆಲಸ ಮಾಡಲಿಕ್ಕೆ ಸಾಧ್ಯ… ಎಂದು ಪ್ರಶ್ನಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶೈಲಜಾ ಬಸವರಾಜ್, ಎಲ್ಲಾ ಇಲಾಖೆಯಲ್ಲಿ ಬೇಕಾದ ಅಧಿಕಾರಿಗಳು, ಸಿಬ್ಬಂದಿಗಳ ಸಂಪೂರ್ಣ ವರದಿ ಸಿದ್ಧಪಡಿಸಿ, ಸೆ.19 ರಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸಿಬ್ಬಂದಿ ಕೊರತೆ ವಿಚಾರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಇತರರು ಇದ್ದರು.