Advertisement

ಜನಮನ ಸೆಳೆಯುತ್ತಿದೆ ಕಾರಿಗನೂರು ಫಾಲ್ಸ್

10:29 AM May 06, 2019 | Naveen |

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಹೆಸರಿನಿಂದಲೇ ಹೆಸರುವಾಸಿಯಾಗಿದ್ದು ಕಾರಿಗನೂರು ಗ್ರಾಮ. ಅನೇಕ ರಾಜಕಾರಣಿಗಳಿಗೆ ಆಶ್ರಯ ನೀಡಿದ ತೌರೂರು. ಇಂತಹ ಊರು ಇದೀಗ ಹೊಸದಾಗಿ ಜನರಿಂದ ಕರೆಯಲ್ಪಡುತ್ತಿರುವ ‘ಕಾರಿಗನೂರು ಫಾಲ್ಸ್’ ಮೂಲಕ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿ ಸದ್ದಿಲ್ಲದೇ ಹೊರಹೊಮ್ಮುತ್ತಿದೆ.

Advertisement

ಅಡಿಕೆ ಸೀಮೆಯ ಚನ್ನಗಿರಿ ತಾಲೂಕಿನ ಗ್ರಾಮ ಕಾರಿಗನೂರು ಇದೀಗ ಮತ್ತೂಮ್ಮೆ ಪ್ರಖ್ಯಾತಿ ಪಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ವೀಡಿಯೋ ಹಾಗೂ ಸುದ್ದಿಮಾಧ್ಯಮಗಳ ಪ್ರಚಾರದಿಂದ ಈಗ ಎಲ್ಲಾ ಕಡೆಯಿಂದಲೂ ಪ್ರವಾಸಿಗರು ಫಿಕ್ನಿಕ್‌ಗಾಗಿ ಬರುತ್ತಿದ್ದಾರೆ. ಅದರಲ್ಲೂ ರಜೆಯಲ್ಲಿ ಪ್ರವಾಸಿಗರ ದಂಡೇ ಬೀಡು ಬಿಟ್ಟಿರುತ್ತದೆ.

ಚೆಕ್‌ಡ್ಯಾಮ್‌ ಆಯ್ತು ಫಾಲ್ಸ್: ನೀರಾವರಿ ಸೌಲಭ್ಯಕ್ಕಾಗಿ ಕಾರಿಗನೂರು ಗ್ರಾಮದಿಂದ ಎರಡೂವರೆ ಕಿ.ಮೀ. ದೂರದಲ್ಲಿ ಕೃಷಿ ಚುಟುವಟಿಕೆಗಳ ಗದ್ದೆಗಳ ಮಧ್ಯೆ ಮಣ್ಣಿನ ಒಡ್ಡು ನಿರ್ಮಿಸಲಾಗಿತ್ತು. ಆನಂತರ ಚೆಕ್‌ಡ್ಯಾಮ್‌ ರೂಪದಲ್ಲಿ ಸಿಮೆಂಟೀಕರಣ ಮಾಡಲು 2011ರಲ್ಲಿ ಬಸವರಾಜ್‌ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ 80 ಲಕ್ಷ ರೂ. ಬಿಡುಗಡೆ ಮಾಡಿದ್ದರು.

ಕೃಷಿ ಚಟುವಟಿಕೆಗಾಗಿ ಸುಮಾರು ಹತ್ತು ಅಡಿಗಿಂತ ಎತ್ತರ, ಮೂರೂವರೆ ಅಡಿ ಅಗಲದ ಕಾಲುವೆಯ ತಡೆಗೋಡೆ ಅಥವಾ ಮಿನಿ ಚೆಕ್‌ಡ್ಯಾಮ್‌ ನಿರ್ಮಿಸಲಾಗಿತ್ತು. ಕಾಲುವೆ ತಡೆಗೋಡೆಯಿಂದ ನೀರು ಕೆಳಗೆ ಬೀಳುವ ಜಾಗದಲ್ಲಿ ಸುಮಾರು 20 ಅಡಿ ಅಗಲ, 200ಅಡಿಗಿಂತಲೂ ಹೆಚ್ಚು ಉದ್ದದ ಸಿಮೆಂಟ್ ನೆಲಹಾಸು ಮಾಡಲಾಗಿದೆ. ಅಲ್ಲಿ ಸೂಳೆಕೆರೆಯಿಂದ ಬರುವ ನೀರು ರಭಸವಾಗಿ ಹರಿಯುತ್ತಿರುವುದರಿಂದ ಫಾಲ್ಸ್ ರೀತಿ ಕಾಣುತ್ತಿದೆ.

ಇದು ಇಂದು ನಿನ್ನೆಯ ಚೆಕ್‌ಡ್ಯಾಮ್‌ ಅಲ್ಲ, ಬಹು ವರ್ಷಗಳಿಂದ ಇರುವಂತದ್ದು. ಇತ್ತೀಚೆಗೆ ಕೆಲ ಗ್ರಾಮಸ್ಥರು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮೂಲಕ ಹಾಕಿದ್ದ ವ್ಹೀಡಿಯೊ, ಫೋಟೊಗಳು ವೈರಲ್ ಆಗಿದ್ದವು. ಬರಗಾಲದ ಈ ದಿನಗಳಲ್ಲಿ ಜನರಿಗೆ ನೀರು ಇರುವ ಪ್ರೇಕ್ಷಣೀಯ ಸ್ಥಳ ಸಿಗುವುದೇ ವಿರಳ. ಹಾಗಾಗಿ ಈ ಸ್ಥಳ ಪರಿಚಯವಾದ ಮೇಲಂತೂ ಜಿಲ್ಲೆಯ ನಾನಾ ಭಾಗಗಳಿಂದ ಒನ್‌ ಡೇ ಪಿಕ್ನಿಕ್‌ಗಾಗಿ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ ಕಾರಿಗನೂರು ಫಾಲ್ಸ್ಗೆ ತಲುಪುವ ಮಾರ್ಗದ ನಾಮಫಲಕವನ್ನು ಅಳವಡಿಸಿದ್ದು, ಹೆಚ್ಚು ಜನಮನ್ನಣೆ ಪಡೆಯುತ್ತಿದೆ.

Advertisement

ಕಚ್ಚಾ ರಸ್ತೆ: ಕಾರಿಗನೂರು ಫಾಲ್ಸ್ಗೆ ಹೋಗುವ ಮಾರ್ಗ ಸಂಪೂರ್ಣ ಕಲ್ಲುಮಣ್ಣಿನ ಕಿರಿದಾದ ರಸ್ತೆಯಾಗಿದೆ. ಒಂದು ಕಿ.ಮೀ ಮಾತ್ರ ಅಗಲವಾದ ರಸ್ತೆ ಇದ್ದು, ಆ ನಂತರದಲ್ಲಿ ಸಣ್ಣ ಪುಟ್ಟ ಕಾರುಗಳು ಸಂಚರಿಸಬಹುದಾದ ಕಚ್ಚಾ ರಸ್ತೆ ಇದ್ದು, ಅದು ಕೂಡ ಸಂಫೂರ್ಣ ತಗ್ಗು-ಗುಂಡಿಗಳಿಂದ ಕೂಡಿದೆ. ಇದೀಗ ವಾಹನಗಳ ಓಡಾಟ ಹೆಚ್ಚಾದ ಮೇಲಂತು ಸಂಪೂರ್ಣ ರಸ್ತೆ ಹಾಳಾಗಿದೆ. ಸಿಂಗಲ್ ರಸ್ತೆ ಆಗಿರುವುದರಿಂದ ಎರಡು ಕಡೆಯಿಂದ ವಾಹನಗಳು ಮುಖಾಮುಖೀಯಾದರೆ ಸಂಚಾರಕ್ಕೆ ಅಡಚಣೆಯಾಗುವುದು ಶತಃಸಿದ್ಧ.

ಅಪಾಯಕಾರಿ ಕಬ್ಬಿಣದ ಸರಳುಗಳು: ಕಾಲುವೆಯ ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಬಳಸಲಾದ ಕಬ್ಬಿಣದ ಸರಳು, ಪ್ಲೇಟ್‌ಗಳು ಹೊರಗೆ ಚಾಚಿದ್ದು, ನೀರು ಹರಿಯುವಾಗ ಕಾಣುವುದಿಲ್ಲ. ಬೇರೆ ಭಾಗಗಳಿಂದ ಬಂದ ಜನರಿಗೆ ಅದರ ಅರಿವು ಇರುವುದಿಲ್ಲ. ತಡೆಗೋಡೆಯ ನೀರಿಗೆ ಮೈ ತಾಕಿಸಲು ಹೋಗಿ ಕೆಲವರು ಸರಳಗಳಿಂದ ತಾಕಿಸಿಕೊಂಡು ಸಣ್ಣಪುಟ್ಟ ಗಾಯ ಮಾಡಿಕೊಂಡ ನಿದರ್ಶನಗಳು ಇವೆ. ಅಂಗಡಿಗಳ ಲಗ್ಗೆ: ಫಾಲ್ಸ್ಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾದಂತೆಲ್ಲಾ ಎಗ್‌ ರೈಸ್‌ ಸೇರಿದಂತೆ ಇತರೆ ತಿಂಡಿ ಮಾರುವ ಕೈಗಾಡಿಯವರು, ಹಣ್ಣು ಮಾರುವರು ಬದುಕು ಕಟ್ಟಿಕೊಳ್ಳಲು ಫಾಲ್ಸ್ ನೆರವಾಗುತ್ತಿದೆ.

ಜೆ.ಎಚ್. ಪಟೇಲ್ ಸಮಾಧಿ ವಿಶೇಷ ಆಕರ್ಷಣೆ: ಫಾಲ್ಸ್ ನೋಡಲೆಂದು ಬರುವ ಕೆಲ ಪ್ರವಾಸಿಗರು ಕಾರಿಗನೂರಿನಿಂದ 2ಕಿ.ಮೀ ಇರುವ ಮಾಜಿ ಮುಖ್ಯಮಂತ್ರಿಗಳ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಡಿಕೆ, ಮಾವು, ಸಫೋಟ, ತೇಗದ ಗಿಡಗಳಿಂದ ಹಚ್ಚಹಸಿರಾಗಿರುವ ಅಲ್ಲಿನ ವಿಶಾಲವಾದ ತೋಟದ ತಂಪಿನಲ್ಲಿ ಕೆಲವೊತ್ತು ವಿಶ್ರಾಂತಿ ಕೂಡ ತೆಗೆದುಕೊಂಡು ಹೋಗಲು ಸೊಗಸಾಗಿದೆ.

ಕಳೆದ ಸುಮಾರು ವರ್ಷಗಳಿಂದ ಕೃಷಿ ಚಟುವಟಿಕೆಗೆ ಸೀಮಿತವಾಗಿದ್ದ ಮಿನಿ ಚೆ‌ಕ್‌ ಡ್ಯಾಮ್‌ ಇದೀಗ ಕಾರಿಗನೂರು ಫಾಲ್ಸ್ ಆಗುತ್ತಿರುವುದು ಗ್ರಾಮಸ್ಥರಲ್ಲಿ ಹೊಸ ಕೂತೂಹಲವನ್ನು ಮೂಡಿಸುತ್ತಿದೆ. ಜೊತೆಗೆ ಈ ಫಾಲ್ಸ್ಗೆ ಜೆ.ಎಚ್. ಪಟೇಲ್ ಅವರ ಹೆಸರನ್ನು ಇಡಬೇಕೆಂದು ಗ್ರಾಮಸ್ಥರ ಕೂಗಿದೆ.

ಮೋಜು-ಮಸ್ತಿ ಹಾವಳಿ
ಯುವಕರು, ಕುಟುಂಬ ಸಮೇತ ಸದಸ್ಯರು ಫಾಲ್ಸ್ ನೋಡಲು ಹೆಚ್ಚಾಗಿ ಬರುತ್ತಿದ್ದಾರೆ. ಹಾಗೆ ಬಂದ ಜನರು ಮಾರ್ಗ ಮಧ್ಯೆ ತೋಟ, ಗದ್ದೆಗಳ ಮರ ಗಿಡಗಳ ನೆರಳಿನಲ್ಲಿ ಭೋಜನ ಮಾಡಿ ಅಲ್ಲಿಯೇ ಪ್ಲಾಸ್ಟಿಕ್‌ ತಟ್ಟೆ-ಲೋಟ ಎಸೆದು ಹೋಗುತ್ತಾರೆ. ಇನ್ನೂ ಯುವಕರಂತು ಗುಂಡು-ತುಂಡು ಸವಿದು ಅಲ್ಲಿಯೇ ಬಿಯರ್‌, ಬ್ರಾಂಡಿ ಬಾಟಲಿಗಳು, ತಟ್ಟೆ-ಲೋಟ, ಸ್ನಾಕ್ಸ್‌ ಕವರ್‌ಗಳನ್ನು ಅಲ್ಲಿಯೇ ಎಸೆದು ಪರಿಸರ ಹಾಳುಮಾಡುತ್ತಿದ್ದಾರೆ. ಊಟ ಮಾಡಿದ ಪ್ರವಾಸಿಗರು ತಂದಂತಹ ತಟ್ಟೆ-ಲೋಟಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ಹೋಗುತ್ತಾರೆ. ಸರಿಯಾಗಿ ಒಂದು ಕಡೆ ಹಾಕುವುದಿಲ್ಲ. ಇದರಿಂದ ತೋಟ-ಗದ್ದೆ ಕಾಯುವುದು ಮತ್ತೂಂದು ಕೆಲಸವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಮೂಲ ಸೌಲಭ್ಯ ಕೊರತೆ
ಫಾಲ್ಸ್ ಗೆ ಬರುವ ಜನರಿಗೆ, ಅದರಲ್ಲೂ ಮಹಿಳೆಯರಿಗೆ ಬಟ್ಟೆ ಬದಲಾವಣೆಗೆ ಸೂಕ್ತ ಜಾಗವಿಲ್ಲ. ಶೌಚಾಲಯ, ಕೂರಲು ಆಸನಗಳಿಲ್ಲ. ಬಯಲೇ ಎಲ್ಲದಕ್ಕೂ ಗತಿಯಾಗಿದ್ದು, ಸಂಪೂರ್ಣ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.

ಕಾರಿಗನೂರು ಫಾಲ್ಸ್ ಅಭಿವೃದ್ಧಿಗೆ ಕ್ರಮ
ತಾಪಮಾನ ಹೆಚ್ಚಳದಿಂದ ಜಲಮೂಲಗಳ ತಾಣಗಳು ಸ್ವರ್ಗದಂತಾಗಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಕೃಷಿ ಚಟುವಟಿಕೆಯ ಸ್ಥಳವಾಗಿದ್ದ ಕಾಲುವೆ ತಡೆಗೋಡೆ ಅಥವಾ ಮಿನಿ ಚೆಕ್‌ಡ್ಯಾಮ್‌, ಇದೀಗ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಹೊರಹೊಮ್ಮುತ್ತಿರುವುದು ಸಂತಸದ ಸಂಗತಿ. ಈ ಸ್ಥಳಕ್ಕೆ ಮೂಲ ಸೌಕರ್ಯದ ಅಗತ್ಯವಿದೆ. ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದಂತಹ 50 ಲಕ್ಷ ರೂಪಾಯಿ ಅನುದಾನವನ್ನು ಮೀಸಲಿರಿಸಲು ತೀರ್ಮಾನಿಸಿದ್ದೇವೆ. ಪ್ರವಾಸಿಗರು ಕ್ಷೇಮವಾಗಿ ಹೋಗಿ ಬರಲು ಉತ್ತಮ ರಸ್ತೆ, ಶೌಚಾಲಯ, ಕೂರಲು ಸಿಮೆಂಟಿನ ಆಸನಗಳು, ಫಾಲ್ಸ್ ಸಮೀಪದಲ್ಲಿ 300 ಮೀ. ಹಿಂದೆ ಪಾರ್ಕಿಂಗ್‌, ವಾಕಿಂಗ್‌ ಮೂಲಕ ಫಾಲ್ಸ್ಗೆ ತೆರಳಲು ಅಗತ್ಯ ಮೂಲ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸುವ ಯೋಜನೆ ರೂಪಿಸಿದ್ದೇವೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್‌ ಸಿಬ್ಬಂದಿ ನಿಯೋಜಿಸಲು ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರವಾಸಿ ತಾಣವಾಗಲಿ ಎಂಬುದು ನಮ್ಮ ಆಶಯ.
•ತೇಜಸ್ವಿ ಪಟೇಲ್,
ಜಿಲ್ಲಾ ಪಂಚಾಯತಿ ಸದಸ್ಯ

 

Advertisement

Udayavani is now on Telegram. Click here to join our channel and stay updated with the latest news.

Next