ರಾ. ರವಿಬಾಬು
ದಾವಣಗೆರೆ: ಒಂದು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಎದುರಿಸಿದ ಪ್ರತಿ ಕ್ಷಣದ ಬಗ್ಗೆ ವರ್ಣಿಸಲು ಆಗುವುದೇ ಇಲ್ಲ. ಅದನ್ನ ಪದಗಳಲ್ಲಿ ಹೇಳುವುದು ಅಸಾಧ್ಯ. ಎಷ್ಟೇ ಕಷ್ಟಗಳ ನಡುವೆಯೂ ಪಾಕಿಸ್ತಾನದ ವಿರುದ್ಧ ಭಾರತಮಾತೆ ಗೆದ್ದಿದ್ದರ ಮುಂದೆ ಎಲ್ಲಾ ಸಮಸ್ಯೆಗಳು ತೃಣ ಸಮಾನ….
ಇದು ಕಳೆದ 20 ವರ್ಷದ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದ ದಾವಣಗೆರೆ ಸಮೀಪದ ಎಲೇಬೇತೂರು ಗ್ರಾಮದ ಸಿಆರ್‌ಪಿಎಫ್ ಮಾಜಿ ವೀರಯೋಧ ಎಂ. ಬಸಪ್ಪ ಮಾತುಗಳು.
1976ರ ಆ.27 ರಂದು ಸಿಆರ್‌ಪಿಎಫ್‌ಗೆ ಸೇರಿದ್ದ ಬಸಪ್ಪ 2006ರ ಆ.31ರಂದು ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. 1996ರ ಜೂನ್‌ನಿಂದ ಜು.23ರ ವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಇನ್‌ಫಂಟ್ರಿ ಬೆಟಾಲಿಯನ್‌ನಲ್ಲಿ ಕೆಲಸ ಮಾಡಿದ್ದ ಅವರು, ವೀರಾವೇಶದ ಹೋರಾಟ ನಡೆಸಿದ್ದನ್ನು ಈ ಕ್ಷಣಕ್ಕೂ ಸ್ಮರಿಸುತ್ತಾರೆ. ಕಾರ್ಗಿಲ್, ದ್ರಾಸ್ ಪ್ರದೇಶದ ಬಗ್ಗೆ ಸಾಕಷ್ಟು ಮಾಹಿತಿ ಇದ್ದಂತಹ ನನ್ನಂತಹ ಅನೇಕರನ್ನು 1996ರ ಜೂನ್ ತಿಂಗಳಲ್ಲಿ ಕಾರ್ಗಿಲ್ ಸಮೀಪದ ತಂಗುದಾರ್… ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಮೇ ತಿಂಗಳನಿಂದಲೇ ಕಾರ್ಗಿಲ್ನಲ್ಲಿ ಅಟ್ಯಾಕ್ ನಡೆಯುತ್ತಲೇ ಇತ್ತು. ಯಾವಾಗ ಪಾಕಿಸ್ತಾನದ ಅಟ್ಯಾಕ್ ಹೆಚ್ಚಾಯಿತೋ ಆಗ ನಮ್ಮ ಬೆಟಾಲಿಯನ್‌ನ್ನು ಸೋಪುರ… ಮೂಲಕ ಕಾರ್ಗಿಲ್ಗೆ ಶಿಫ್ಟ್ ಮಾಡಲಾಯಿತು. ನಮ್ಮ ಬೆಟಾಲಿಯನ್ ಕಾರ್ಗಿಲ್ಗೆ ಹೋಗುವ ಮುನ್ನವೇ ಕರ್ನಲ್ ರವೀಂದ್ರನಾಥ್‌ರ(ದಾವಣಗೆರೆಯವರು) ಬೆಟಾಲಿಯನ್ ಅಲ್ಲಿತ್ತು.
ಕಾರ್ಗಿಲ್ನಲ್ಲಿ ವಿಪರೀತ ಫೈರಿಂಗ್ ನಡೆಯುತ್ತಿತ್ತು. ಕಣ್ಣು ಮಿಟುಕಿಸುವಂತೆಯೇ ಇರಲಿಲ್ಲ. ಯಾವ ದಿಕ್ಕಿನಿಂದ ಗುಂಡಿನ ಮಳೆ ಆಗುತ್ತಿದೆಯೋ ಎಂಬುದು ಗೊತ್ತಾಗುತ್ತಿರಲಿಲ್ಲ. ಆ ರೀತಿ ಫೈರಿಂಗ್ ನಡೆಯುತ್ತಿತ್ತು. ಆಗ ನೀರು ಇರಲಿ, ಹುಲ್ಲುಕಡ್ಡಿಯೂ ಸಿಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯ ನಡುವೆಯೂ ಭಾರತಮಾತೆ…ಸ್ಮರಿಸುತ್ತಲೇ ಯುದ್ಧ ಮಾಡುತ್ತಿದ್ದೆವು ಎಂದು ಬಸಪ್ಪ ಹೇಳುತ್ತಾರೆ.
ಪಾಕಿಸ್ತಾನದವರು ನಾವು ಇರುವ ಪ್ರದೇಶಕ್ಕಿಂತಲೂ ಮೇಲೆ ಇದ್ದು ಕಂಟಿನ್ಯೂಯಸ್ ಆಗಿ ಫೈರಿಂಗ್ ಮಾಡುತ್ತಿದ್ದರು. ಬಂಕರ್‌ಗಳಲ್ಲೂ ಅಡಗಿ ಕುಳಿತಿದ್ದರು. ಫೈರಿಂಗ್ ಜೊತೆಗೆ ಏರ್ ಅಟ್ಯಾಕ್(ವಾಯುದಾಳಿ) ಮಾಡುತ್ತಿದ್ದರು ಬೆಟಾಲಿಯನ್‌ನಲ್ಲಿದ್ದ ಎಲ್ಲರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಯುದ್ಧ ಮಾಡುತ್ತಿದ್ದೆವು. ಅಟ್ಯಾಕರ್(ನೇರ ಯುದ್ಧ) ಟೀಂನವರು ಬಂಕರ್‌ಗಳ ನಾಶ ಮಾಡುತ್ತಾ, ಫೈರಿಂಗ್ ಮುಂದುವರೆಸುತ್ತಿದ್ದೆವು. ನಮ್ಮ ಬೆಟಾಲಿಯನ್‌ನ ಇತರೆಯವರು ನಮ್ಮನ್ನು ಫಾಲೋ ಮಾಡುತ್ತಿದ್ದರು…. ಎಂದು ಯುದ್ಧದ ನಡೆದ ಬಗ್ಗೆ ಅವರು ವಿವರಿಸುತ್ತಾರೆ. ನಮಗೆ 2-3 ದಿನ ಊಟ ಇಲ್ಲದೆ ಇರುವ ಬಗ್ಗೆ ತರಬೇತಿ ನೀಡಿರುತ್ತಾರೆ. ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬಂದಿತು. ಹುಲ್ಲುಕಡ್ಡಿ ಅಲ್ಲಾಡಿದರೂ ಪಾಕಿಸ್ತಾನದವರು ಫೈರಿಂಗ್ ಮಾಡುತ್ತಿದ್ದರು. ಅಂತಹ ಪರಿಸ್ಥಿತಿಯ ನಡುವೆ ಊಟ ಮುಟ್ಟಿಸುವುದು ಕಷ್ಟವಾಗುತ್ತಿತ್ತು. ಆದರೂ, ನಮ್ಮ ಕಡೆಯವರು ಕಷ್ಟದ ಪರಿಸ್ಥಿತಿಯ ನಡುವೆಯೂ ನಮಗೆ ಊಟ, ನೀರು ಎಲ್ಲವನ್ನೂ ತಲುಪಿಸುತ್ತಿದ್ದರು.
ಒಂದು ತಿಂಗಳು ಭಾರೀ ಕಷ್ಟ ಎನ್ನುವ ಯುದ್ಧ ಗೆದ್ದೆವು. ಆ ಕ್ಷಣವನ್ನು ಜೀವನದಲ್ಲಿ ಮರೆಯಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಬಸಪ್ಪ, ಮೊದಲು ನಾವು, ಪಾಕಿಸ್ತಾನದವರು 50-60 ಅಡಿ ದೂರದಲ್ಲೇ ಇರುತ್ತಿದ್ದರೂ ಒಂದೇ ಒಂದು ಬಾರಿ ಫೈರಿಂಗ್ ಮಾಡುತ್ತಿರಲಿಲ್ಲ. ನಾವು ಅವರಿಗೆ ಹಣ್ಣು ಅದು-ಇದು ಕೊಡುತ್ತಿದ್ದೆವು. ಅವರು ಸಹ ನಮಗೆ ಕೊಡುತ್ತಿದ್ದರು. ಯಾವಾಗ ಭಯೋತ್ಪಾದಕರು ಬಂದರೋ, ಅವರಿಗೆ ಪಾಕಿಸ್ತಾನದ ಮಿಲಿಟ್ರಿ ಸಪೋರ್ಟ್ ಮಾಡಲಾರಂಭಿಸಿತೋ ಇಡೀ ಪರಿಸ್ಥಿತಿ ಬದಲಾವಣೆ ಆಗತೊಡಗಿತು… ಎಂದು ಗಡಿ ಉದ್ವಿಗ್ನತೆಗೆ ನೈಜ ಕಾರಣ ತೆರೆದಿಡುತ್ತಾರೆ.