Advertisement

ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವ ಪರಿಹಾರ

03:25 PM Aug 03, 2019 | Naveen |

ದಾವಣಗೆರೆ: ಸಮಕಾಲೀನ ಸಮಸ್ಯೆಗಳಾದ ದ್ವೇಷಾಸೂಯೆ, ಅಸಹಿಷ್ಣುತೆ, ಭ್ರಷ್ಟಾಚಾರ, ಜಾತಿಯತೆ, ಅಸಮಾನತೆ ಮತ್ತು ದುಶ್ಚಟ, ದುವ್ಯರ್ಸನಗಳಿಗೆ ಬಸವತತ್ವ ಅತ್ಯುತ್ತಮ ಪರಿಹಾರ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

Advertisement

109ನೇ ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ವಿರಕ್ತ ಮಠದಲ್ಲಿ ಪ್ರಾರಂಭವಾದ ಕಲ್ಯಾಣ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಸಮಾಜದಲ್ಲಿನ ಸರ್ವರಿಗೆ ಒಳಿತನ್ನು ಬಯಸುವುದೇ ಕಲ್ಯಾಣವಾಗಿದೆ. ವ್ಯಕ್ತಿಯ ಉದ್ಧಾರ ಮತ್ತು ಜಗತ್ತು, ಸಮಾಜ, ದೇಶದ ಪ್ರಗತಿಯೇ ಕಲ್ಯಾಣದ ಧ್ಯೇಯವಾಗಿದೆ ಎಂದು ತಿಳಿಸಿದರು.

ಮಹಾನ್‌ ದಾರ್ಶನಿಕ ಆಣ್ಣ ಬಸವಣ್ಣನವರು ಒಳಗೊಂಡಂತೆ ಎಲ್ಲಾ ಬಸವಾದಿ ಶರಣರ ಜೀವನವೇ ಆದರ್ಶ. ಅವರು ಕಂಡುಂಡಂತಹ ಅನುಭವವೇ ವಚನ ಸಾಹಿತ್ಯವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರು ಅತೀ ಸರಳವಾಗಿ ಇರುವ ವಚನಗಳನ್ನು ಓದುವ ಮೂಲಕ ಬದುಕಿನ ಮಾರ್ಗ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಜಾತಿ, ವರ್ಗ, ವರ್ಣ, ಲಿಂಗಭೇದ, ವಯೋಭೇದ ಇಲ್ಲದ, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು… ನೀಡುವ ಆದರ್ಶ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಅಂತಹ ಪ್ರೇರಣೆ, ಸ್ಫೂರ್ತಿ, ಮಾರ್ಗದರ್ಶನ ನೀಡುವುದಕ್ಕಾಗಿಯೇ ಶ್ರಾವಣ ಮಾಸದಲ್ಲಿ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.

Advertisement

ಕಲ್ಯಾಣ ದರ್ಶನ ಪ್ರವಚನ ಆಲಿಸುವುದರಿಂದ ಮನಸ್ಸು ಹಿರಿಯದಾಗುತ್ತದೆ. ಮನಸ್ಸು ವಿಶಾಲ ಆಗುತ್ತದೆ. ದ್ವೇಷ, ಸ್ವಾರ್ಥ, ಮತ್ಸರ, ಅಹಂಕಾರ ದೂರವಾಗುತ್ತವೆ ಎಂದು ತಿಳಿಸಿದರು.

ದಾವಣಗೆರೆ ವಿರಕ್ತ ಮಠದಲ್ಲಿ 109 ವರ್ಷಗಳ ಹಿಂದೆ ಶ್ರೀ ಜಯದೇವ ಜಗದ್ಗುರುಗಳು, ಮೃತ್ಯುಂಜಯ ಅಪ್ಪಗಳು, ಹರ್ಡೇಕರ್‌ ಮಂಜಪ್ಪ ಶ್ರಾವಣ ಮಾಸದ ಪ್ರವಚನ ಪ್ರಾರಂಭಿಸಿದರು. ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರ ಕೇಳಬೇಕು ಎನ್ನುವುದು ಪ್ರವಚನದ ಮೂಲ ಉದ್ದೇಶ. ಶ್ರವಣ… ಎಂದರೆ ಕೇಳುವುದು. ಹಾಗಾಗಿಯೇ ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರ ಕೇಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ದಾವಣಗೆರೆಯ ವಿರಕ್ತ ಮಠದಲ್ಲಿ 1911 ರಲ್ಲಿ ಪ್ರಾರಂಭವಾಗಿರುವ ಶ್ರಾವಣ ಮಾಸದಲ್ಲಿನ ಪ್ರವಚನ ಕಾರ್ಯಕ್ರಮ ಇಂದಿಗೂ ನಡೆದುಕೊಂಡು ಬರುತ್ತಿದೆ. ಇಡೀ ದೇಶಕ್ಕೆ ಇಂತಹ ಕಾರ್ಯಕ್ರಮ ಪ್ರಚುರ ಪಡಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ಈಗ ಅನೇಕರು ಸದಾ ಟಿವಿಗಳ ಮುಂದೆ ಕುಳಿತು ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಮರೆಯುತ್ತಿದ್ದಾರೆ. ಟಿವಿ ಎಂಬ ಮಾಯೆ ಎಲ್ಲವನ್ನೂ ನುಂಗಿದೆ. ಟಿವಿ ಬಿಟ್ಟು ಪ್ರವಚನ ಕೇಳುವುದರಿಂದ ಜೀವನಕ್ಕೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಶ್ರಾವಣ ಮಾಸದ ಅಂಗವಾಗಿ ಪ್ರತಿ ದಿನ ಸಂಜೆ 6.30 ರಿಂದ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿ, ಪ್ರವಚನ ಕೇಳಬೇಕು ಎಂದು ತಿಳಿಸಿದರು.

ಮಹಲಿಂಗಪುರದ ಆಧ್ಯಾತ್ಮಿಕ ಚಿಂತಕ ಚನ್ನಬಸವ ಗುರೂಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಅತ್ಯಂತ ಉತ್ಕೃಷ್ಟ ಮಾರ್ಗದರ್ಶನ ನೀಡಿದರು. ವಚನ ಸಾಹಿತ್ಯ ಹೃದಯವನ್ನ ಮುಟ್ಟುವಂತಹ ಸಾಹಿತ್ಯ. ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುವ ವಚನಗಳ ಅಭ್ಯಾಸ ಮಾಡಬೇಕು. ಬದುಕಿನ ಕೃತಾರ್ಥತೆ ಪಡೆಯಬೇಕು ಎಂದು ತಿಳಿಸಿದರು.

ನಾಯಕನಹಟ್ಟಿಯ ಅನುಭಾವಿ ಪ.ಮ. ಗುರುಲಿಂಗಯ್ಯ, ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್‌, ದಾವಣಗೆರೆ ಅರ್ಬನ್‌ ಬ್ಯಾಂಕ್‌ ನಿರ್ದೇಶಕ ಮಂಜುನಾಥ್‌ ಬೆಳ್ಳೊಡಿ, ಎಂ. ದೊಡ್ಡಪ್ಪ, ರೇಖಾ ಎಂ.ಸಿ. ರಾಜು, ಎಂ. ಜಯಕುಮಾರ್‌, ಎಂ.ಕೆ. ಬಕ್ಕಪ್ಪ, ಹಾಸಭಾವಿ ಕರಿಬಸಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next