Advertisement

ಜಲಶಕ್ತಿ ಯೋಜನೆ ಬಹುದಿನಗಳ ಬಹುಜನರ ಕನಸು

10:12 AM Jul 27, 2019 | Team Udayavani |

ದಾವಣಗೆರೆ: ಜಲಶಕ್ತಿ ಯೋಜನೆ ಬಹುದಿನಗಳ ಬಹುಜನರ ಕನಸಾಗಿದ್ದು, ಇದೊಂದು ರಾಷ್ಟ್ರೀಯ ಕಾರ್ಯ ಎಂಬುದಾಗಿ ಭಾವಿಸಿ, ಪ್ರತಿಯೊಂದು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಈ ಅಭಿಯಾನದ ಯಶಸ್ಸಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ತಿಳಿಸಿದ್ದಾರೆ.

Advertisement

ಶುಕ್ರವಾರ, ಜಿಲ್ಲಾಡಳಿತ ಭವನದಲ್ಲಿ ಜಲಶಕ್ತಿ ಯೋಜನೆಯ ಅನುಷ್ಠಾನ, ಅನುದಾನ ಲಭ್ಯತೆ, ಕ್ರಿಯಾ ಯೋಜನೆ ಕುರಿತ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಲ ಸಂಪನ್ಮೂಲಗಳ ರಕ್ಷಣೆ ಮತ್ತು ಉಳಿಸುವ ಸಲುವಾಗಿ ಈ ಹಿಂದೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಜಲಶಕ್ತಿ ಯೋಜನೆಯ ಅನುಷ್ಠಾನದ ಮೂಲಕ ಮುಂದಿನ ಪೀಳಿಗೆಗೆ ಜಲ ಸಂರಕ್ಷಿಸಬೇಕಿದೆ. ಅದಕ್ಕಾಗಿ ಎಲ್ಲಾ ಇಲಾಖೆಯವರು ಕಡ್ಡಾಯವಾಗಿ ಸೋಮವಾರದ ವೇಳೆಗೆ ಅಗತ್ಯ ಕ್ರಿಯಾಯೋಜನೆ ರೂಪಿಸಿ, ಇನ್ನೆರೆಡು ತಿಂಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ .ಬಿ ಮುದುಗಲ್ ಮಾತನಾಡಿ, ಈಗಾಗಲೇ ಜಲಶಕ್ತಿ ಯೋಜನೆ ಕುರಿತು ಕಾರ್ಯಾಗಾರ ನಡೆಸಿ ಎಲ್ಲಾ ಇಲಾಖೆಯಲ್ಲಿ ಜಲಶಕ್ತಿಯ 5 ಅಂಶಗಳ ಅನುಷ್ಠಾನಕ್ಕೆ ಬೇಕಾದ ಕ್ರಿಯಾ ಯೋಜನೆ ಮತ್ತು ಅನುದಾನ ಲಭ್ಯತೆ ಕುರಿತು ಮಾಹಿತಿ ನೀಡಲು ತಿಳಿಸಲಾಗಿದ್ದರೂ ಯಾವ ಇಲಾಖೆಯಿಂದಲೂ ಇನ್ನೂ ಮಾಹಿತಿ ಬಂದಿಲ್ಲ. 5 ಅಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ನೋಡೆಲ್ ಅಧಿಕಾರಿ ನೇಮಿಸಲಾಗಿದ್ದು, ಅವರ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಲಶಕ್ತಿ ಯೋಜನೆಯ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲು ಎನ್‌ಎಸ್‌ಎಸ್‌, ಎನ್‌.ಸಿ.ಸಿ. ಮತ್ತು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮೂಲಕ ಶಿಕ್ಷಣ ಇಲಾಖೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿ ಕೊಡಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಶಕ್ತಿ ಅನುಷ್ಠಾನ ಬಗ್ಗೆ ಕಾರ್ಯಾಗಾರದ ಮೂಲಕ ಅರಿವು ಮೂಡಿಸಬೇಕು ಎಂದರು.

ಡಿಡಿಪಿಯು ಮತ್ತು ಡಿಡಿಪಿಐ ಇಲಾಖೆಗಳ ಅಧೀನದಲ್ಲಿ ಎಷ್ಟು ಕಾಲೇಜ್‌ ಹಾಗೂ ಶಾಲೆಗಳಿವೆ. ಯಾವ ಯಾವ ಶಾಲೆ ಮತ್ತು ಕಾಲೇಜಿನಲ್ಲಿ ಮಳೆಕೊಯ್ಲು ಕೈಗೊಳ್ಳಲಾಗಿದೆ. ಅದರ ಪ್ರಸ್ತುತ ಸ್ಥಿತಿ ಗತಿ, ಬೋರ್‌ವೆಲ್ ರೀಚಾರ್ಜ್‌ ಮತ್ತು ಗಿಡ ಬೆಳೆಸಲು ಎಷ್ಟು ಸ್ಥಳಾವಕಾಶವಿದೆ. ಎಷ್ಟು ಗಿಡಗಳು ಬೇಕಾಗುವುದು ಎಂಬುದರ ಕ್ರಿಯಾ ಯೋಜನೆ ರೂಪಿಸಿ ಕಡ್ಡಾಯವಾಗಿ ಐಇಸಿ ಯೋಜನೆಯಂತೆ ಪ್ರತಿ ತಾಲೂಕುವಾರು ಮಾಹಿತಿಯ ವರದಿಯನ್ನು ಸೋಮವಾರ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

Advertisement

ಯಾವ ಯಾವ ಸರ್ಕಾರಿ ಇಲಾಖೆ ವ್ಯಾಪ್ತಿಯ ಕಟ್ಟಡಗಳಲ್ಲಿ ಮಳೆಕೊಯ್ಲು ಇದೆ. ಅದು ಪ್ರಸ್ತುತ ಕಾರ್ಯ ನಿರ್ವಹಿಸುತ್ತದಯೋ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಿ, ನಂತರದ ಕಾರ್ಯ ಕೈಗೊಳ್ಳಬೇಕು. ಪ್ರತಿ ಇಲಾಖೆಯಿಂದ ಎಷ್ಟು ಸಸಿಗಳನ್ನು ನೆಡಲು ಸ್ಥಳಾವಕಾಶವಿದೆ ಎಂಬುದನ್ನು ತಿಳಿಸಬೇಕು. ಸಾಮಾಜಿಕ ಮತ್ತು ವಲಯ ಅರಣ್ಯ ಇಲಾಖೆಯು ಇತರೆ ಇಲಾಖೆಗಳಿಗೆ ಒದಗಿಸಲು ಅಂದಾಜು 2 ಲಕ್ಷ ಗಿಡಗಳನ್ನು ಕಾಯ್ದಿರಿಸಬೇಕು ಎಂದು ಹೇಳಿದರು.

ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಮಳೆಕೊಯ್ಲು ಕೈಗೊಂಡು ಆ ಬಗ್ಗೆ ಫೋಟೋಗಳನ್ನು ಕಡ್ಡಾಯವಾಗಿ 2 ತಿಂಗಳಲ್ಲಿ ನೀಡಬೇಕು. ಆ ಫೋಟೋಗಳನ್ನು ಜಲಶಕ್ತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಯಾವುದೇ ಇಲಾಖೆ ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.

ಪ್ರತಿ ಸೋಮವಾರ ಜಲಶಕ್ತಿ ಅನುಷ್ಠಾನ ಕುರಿತು ಸಭೆ ನಡೆಯಲಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಕಾರ್ಯಾನುಷ್ಠಾನದ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿದ್ದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ದೂಡಾ ಆಯುಕ್ತ ಆದಪ್ಪ, ನಿರ್ಮಿತಿ ಕೇಂದ್ರದ ಪ್ರಬಂಧಕ ರವಿ, ಅರಣ್ಯ ಇಲಾಖೆ ಉಪ ಸಂರಕ್ಷಾಣಾಧಿಕಾರಿ ಚಂದ್ರಶೇಖರ್‌ನಾಯ್ಕ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಜಿಲ್ಲಾ ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌.ಜೆ. ಬಣಕಾರ್‌, ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next