Advertisement

ದುರಂತದ ದಿನಗಳು ದೂರವಿಲ್ಲ!

10:14 AM Jul 19, 2019 | Team Udayavani |

ದಾವಣಗೆರೆ: ನಮ್ಮಲ್ಲಿನ ಸಾಂಪ್ರದಾಯಿಕ ಜಲ ಮೂಲಗಳನ್ನು ಸಂರಕ್ಷಿಸದಿರುವ ಕಾರಣ ಪ್ರಸ್ತುತ ಕುಡಿಯುವ ನೀರಿಗೂ ಬರ ಅನುಭವಿಸುವ ಸ್ಥಿತಿ ಎದುರಾಗಿದ್ದು, ಇನ್ನಾದರೂ ನಮ್ಮ ಸಾಂಪ್ರದಾಯಿಕ ಜಲ ಮೂಲಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡೋಣ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಹೇಳಿದ್ದಾರೆ.

Advertisement

ಗುರುವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಜಲಶಕ್ತಿ ಯೋಜನಾ ಅನುಷ್ಠಾನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ನೀರು ಉಳಿಸುವ, ಇಂಗಿಸುವ, ಮಳೆಕೊಯ್ಲು, ಜಲ ಪೂರಣ ಕಾರ್ಯಕ್ಕೆ ಆದ್ಯತೆ ನೀಡಬೇಕಿದೆ. ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಮಳೆಕೊಯ್ಲು ಅಳವಡಿಕೆ ಹಾಗೂ ಗಿಡ ಮರ ಬೆಳೆಸಲು ಮುಂದಾಗಬೇಕು ಎಂದರು.

ಪ್ರಕೃತಿ ಹೀಗೆಯೇ ಮುನಿದರೆ ದುರಂತದ ದಿನಗಳು ದೂರವಿಲ್ಲ. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವ ಮೊದಲೇ ಜಾಗೃತರಾಗಬೇಕಿದೆ. ನೀರಿನ ವಿಚಾರ ನಮ್ಮ ಬದ್ಧತೆಯಾಗಲಿ. ಅದೊಂದು ರಾಷ್ಟ್ರ ಕಾಳಜಿಯ ವಿಷಯವಾಗಲಿ. ಕಾಳಜಿ ಪೂರಕವಾಗಿ ಪರಿಸರ ಉಳಿಸಿ ತಮ್ಮ ಶಕ್ತ್ಯಾನುಸಾರ ಮುಂದಿನ ಪೀಳಿಗೆ ಸುಖವಾಗಿಡಲು ಶ್ರಮಿಸಬೇಕು. ಈಗಾಗಲೇ ಕೆಲವು ದೇಶಗಳು ನೀರಿನ ವಿಚಾರದಲ್ಲಿ ಎಂತಹ ದುರ್ಭರ ದಿನಗಳನ್ನು ಎಣಿಸುತ್ತಿದ್ದಾರೆಂಬ ನಿದರ್ಶನಗಳು ನಮ್ಮ ಮುಂದೆ ಇವೆ. ಔಷಧಿಯಂತೆ ನೀರು ಬಳಸಬೇಕಿದೆ. ಅದೃಷ್ಟವಂತರಾದ ನಮಗೆ ಅಂತಹ ದಿನಗಳು ಬಂದಿಲ್ಲ. ಆದರೆ, ಮುಂಚೆಯೇ ಎಚ್ಚೆತ್ತುಕೊಂಡರೆ ಒಳ್ಳೆಯದು. ಮಕ್ಕಳಲ್ಲೂ ನಮ್ಮ ನೆಲ, ನಮ್ಮ ಜಲ ಎಂಬ ಭಾವನೆ ಮೂಡಿಸಬೇಕಾಗಿದೆ ಎಂದರು.

ಡಿ.ಡಿ.ಪಿ.ಐ. ಪರಮೇಶ್ವರಪ್ಪ ಮಾತನಾಡಿ, ಇಲಾಖೆ ವತಿಯಿಂದ ಶಾಲೆಗಳಲ್ಲಿ ಈಗಾಗಲೇ 22 ಸಾವಿರ ಗಿಡಗಳನ್ನು ನೆಡಲಾಗಿದೆ. 42 ಸಾವಿರ ಸಸಿಗಳಿಗೆ ಅರಣ್ಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಡಿ.ಸಿ.ಎಫ್‌ ಚಂದ್ರಶೇಖರ ನಾಯಕ್‌ ಮಾತನಾಡಿ, ನಮ್ಮಲ್ಲಿ ಸಾಕಷ್ಟು ಅರಣ್ಯ ಗಿಡಗಳು ಲಭ್ಯವಿದ್ದು, ರೈತರ ಬೇಡಿಕೆ ಪೂರೈಸುವುದು ಮೊದಲ ಆದ್ಯತೆಯಾಗಿದೆ. ಹಾಗಾಗಿ ತಮಗೂ ಗಿಡಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಬಸವರಾಜೇಂದ್ರ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮೀಣ ಭಾಗಗಳ ಕೆರೆಗಳ ಅಭಿವೃದ್ಧಿಗೆ ಹೊಲದ ಬದು, ಚೆಕ್‌ ಡ್ಯಾಂ, ಕೃಷಿ ಹೊಂಡ ಮುಂತಾದವುಗಳಲ್ಲಿ ಆದಷ್ಟು ನೀರು ಇಂಗಿಸುವ ಕಾರ್ಯ ಮಾಡಬೇಕಿದೆ. ಜಿಲ್ಲಾ ವ್ಯಾಪ್ತಿಯ ಕೆರೆಗಳು ವಿವಿಧ ಇಲಾಖೆಗಳಡಿ ಬರುತ್ತಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ನಮ್ಮಲ್ಲಿ ಶೇ. 92ರಷ್ಟು ಮಳೆ ನೀರು ಕೊಯ್ಲಿಗೆ ಬಳಕೆಯಾಗುತ್ತಿಲ್ಲ. ರೈತರು ಬೆಳೆಗಳಿಗೆ 3 ರಿಂದ 5 ಪಟ್ಟು ಹೆಚ್ಚು ನೀರು ಉಪಯೋಗಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಕೈಗಾರೀಕರಣ, ಜನಸಂಖ್ಯೆ, ವಾತಾವರಣ ಬದಲಾವಣೆ, ಮಳೆ ಪ್ರಮಾಣ ಕಡಿಮೆ ಎಲ್ಲವೂ ನಾವು ನೀರನ್ನು ಸಂರಕ್ಷಿಸುವ ಬಗೆಗೆ ಯೋಚಿಸುವಂತೆ ಮಾಡುತ್ತಿದೆ ಎಂದರು.

ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಗ್ರಾಪಂ ಮಟ್ಟದಲ್ಲಿ ಗೋಡೆ ಚಿತ್ರಬರಹ, ಪೋಸ್ಟರ್‌ಗಳು, ಜಾಥಾ ಕಾರ್ಯಕ್ರಮ ಕೈಗೊಳ್ಳಲಾಗುವುದು. ಕಳೆದ 20 ವರ್ಷಗಳ ಮಳೆ ಪ್ರಮಾಣದಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲ. ಆದರೆ ಕ್ರಮಬದ್ಧವಾಗಿ ಮಳೆ ಬಿದ್ದಿಲ್ಲ. ಹಾಗಾಗಿ ಮಳೆ ಬಿದ್ದಾಗ ಸಂಗ್ರಹಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆಯ ದಾವಣಗೆರೆ ಜಿಲ್ಲಾ ನೋಡಲ್ ಅಧಿಕಾರಿ ವಿಶಾಲ್ ಪ್ರತಾಪ್‌ಸಿಂಗ್‌ ಮಾತನಾಡಿ, ಜಲ ಸಂರಕ್ಷಣೆ ವಿಷಯ ಕುರಿತಾಗಿ ಯುನೈಟೆಡ್‌ ನೇಷನ್ಸ್‌ ಜೊತೆ ಭಾರತ ದೇಶವು ಬದ್ಧತೆ ಹೊಂದಿದ್ದು, ಕೇಂದ್ರ ಸರ್ಕಾರ ವಿವಿಧ ಯೋಜನೆ ಹಮ್ಮಿಕೊಂಡಿದೆ. ಜಲಾಮೃತ ಅಭಿಯಾನದಡಿ ಜಲಶಕ್ತಿ ಯೋಜನೆ ಆರಂಭಿಸಲಿದ್ದು, ಆಂದೋಲನದ ರೀತಿಯಲ್ಲಿ ಜಲ ಸಂರಕ್ಷಣೆ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಜಲಾಮೃತ ಕಾರ್ಯಕ್ರಮದ ಭಾಗವಾದ ಜಲಶಕ್ತಿ ಅಭಿಯಾನವನ್ನು ಇದೀಗ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸವಾಲಾಗಿರುವ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು. ಡಿಸೆಂಬರ್‌ ಹೊತ್ತಿಗೆ ಎಲ್ಲ ಇಲಾಖೆಗಳ ಸಮನ್ವಯ ಮತ್ತು ಸಹಕಾರದೊಂದಿಗೆ ಜಲಶಕ್ತಿ ಬಲಪಡಿಸುವಂತಹ ಒಂದು ಕ್ರಿಯಾ ಯೋಜನೆ ತಯಾರಿಸಬೇಕಿದೆ. ಇದಕ್ಕೆ ಮುಖ್ಯವಾಗಿ ಜಿಲ್ಲೆಯ ಜಲಮೂಲಗಳ ಅಂಕಿ-ಅಂಶ ಕಲೆ ಹಾಕಿ ಇದರ ಆಧಾರದ ಮೇಲೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಮುಂದಿನ ದಿನಗಳಲ್ಲಿ ವಾಟರ್‌ ಟೇಬಲ್ ಮಟ್ಟ ಕಡಿಮೆಯಾಗಲಿದ್ದು, ಇದರ ಮರುಪೂರಣಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ. ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಮಳೆ ಕೊಯ್ಲು ಆರಂಭಿಸಬೇಕು. ಗಿಡ ಮರಗಳನ್ನು ಬೆಳೆಸಬೇಕು. ಈ ಮೂಲಕ ಜಲಸಂರಕ್ಷಣೆಗೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಜ್ಞಾನಿ ಡಾ| ಡೇವಿತ್‌ ರಾಜ್‌, ಡಿಎಚ್ಓ ಡಾ| ರಾಘವೇಂದ್ರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ದೂಡಾ ಆಯುಕ್ತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next