ದಾವಣಗೆರೆ: ಸರ್ವೋಚ್ಚ ಇಲ್ಲವೇ ಉಚ್ಚ ನ್ಯಾಯಾಲಯದ ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ. ರವಿ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದವು ಎಂದು ಹೇಳ ಲಾಗುವ ಪೆನ್ ಡ್ರೈವ್ ವಿಚಾರಣೆಯ ಕೆಲವಾರು ವಿಷಯಗಳು ಬಹಿರಂಗ ಆಗುತ್ತಿವೆ. ಮೊದಲು ಸಂತ್ರಸ್ತೆಯರು ಇಪ್ಪತ್ತು ಎನ್ನಲಾಗುತ್ತಿತ್ತು. ನಂತರ ಇನ್ನೂರು ಈಗ ಎರಡು ಸಾವಿರ ಎನ್ನಲಾಗುತ್ತಿದೆ. ಹಾಗಾಗಿ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುವಂತಾಗಲು ಸರ್ವೋಚ್ಚ ಇಲ್ಲವೇ ಉಚ್ಚ ನ್ಯಾಯಾಲಯದ ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲವೂ ಐದಾರು ವರ್ಷಗಳ ಹಿಂದೆ ನಡೆದಿರುವಂತವು ಎನ್ನಲಾಗುತ್ತದೆ. ಎಸ್ಐಟಿ ತನಿಖೆ ಮುಗಿದ ನಂತರವೇ ಎಲ್ಲವೂ ಹೊರ ಬರಲಿದೆ ಎಂದರು.
ಬಿಜೆಪಿಯ ಸಂಬಂಧ ಜೆಡಿಎಸ್ ಜೊತೆಗೆ ಹೊರತು ಪ್ರಜ್ವಲ್ ರೇವಣ್ಣ ಅವರೊಂದಿಗೆ ಅಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟಿರುವುದು ಜೆಡಿಎಸ್ ಹೊರತೆ ಬಿಜೆಪಿ ಅಲ್ಲ. ತಪ್ಪು ಯಾರೇ ಮಾಡಿದ್ದರೂ ಈ ನೆಲದ ಕಾನೂನಿನಂತೆ ಶಿಕ್ಷೆಯಾಗಬೇಕು. ನಾವು ಯಾವುದೇ ಕಾರಣಕ್ಕೂ ತಪ್ಪಿತಸ್ಥರ ಪರ ಅಲ್ಲ ಎಂದು ತಿಳಿಸಿದರು.
ಚುನಾವಣೆ ಬಾಂಡ್ ನಿಂದ ಅತೀ ಹೆಚ್ಚು ದೇಣಿಗೆ ಪಡೆದಿರುವ ಬಿಜೆಪಿ ವಿಶ್ವದ ಅತಿ ಶ್ರೀಮಂತ ಪಕ್ಷವಾಗಿದೆ ಎಂದು ಪ್ರಿಯಾಂಕ ಗಾಂಧಿ ಯಾವ ಅರ್ಥದಲ್ಲಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಹಿಂದೆಲ್ಲ ಚುನಾವಣೆಯಲ್ಲಿ ಕಪ್ಪು ಹಣ ಬಳಕೆ ಮಾಡಲಾಗುತ್ತಿರುವುದನ್ನ ತಪ್ಪಿಸುವ ದೃಷ್ಟಿಯಿಂದ ಅರುಣ್ ಜೇಟ್ಲಿಯವರು ಚುನಾವಣಾ ಬಾಂಡ್ ಯೋಜನೆ ಪರಿಚಯಿಸಿದರು. ಬಿಜೆಪಿ ಶೇ. 44 ರಷ್ಟು ದೇಣಿಗೆ ಪಡೆದಿದ್ದರೆ ಕಾಂಗ್ರೆಸ್, ಡಿಎಂಕೆ, ಆಪ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಶೇ. 56 ರಷ್ಟು ಪಡೆದಿವೆ. ಅವು ಪಡೆದಂತಹ ದೇಣಿಗೆ ಭ್ರಷ್ಟಾಚಾರದ ಹಣ ಎಂದು ಬಿಜೆಪಿಯೇತರ ಪಕ್ಷಗಳು ವಾಪಾಸ್ ನೀಡುತ್ತವೆಯೇ ಎಂದು ಪ್ರಶ್ನಿಸಿದರು.