Advertisement

ಭರ್ಜರಿ ಮಳೆ-ನೀರಿನ ಹೊಳೆ!

10:10 AM Jul 15, 2019 | Naveen |

ದಾವಣಗೆರೆ: ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಸ್ಮಾರ್ಟ್‌ಸಿಟಿ, ಜಿಲ್ಲಾ ಕೇಂದ್ರ ದಾವಣಗೆರೆ ಅಕ್ಷರಶಃ ತೊಯ್ದು ಹೋಯಿತು.

Advertisement

ಪೂರ್ವ ಮುಂಗಾರು ನಂತರದ ಮುಂಗಾರು ಹಂಗಾಮು ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಒಂದೇ ಸಮನೆ ಸುರಿದ ಮಳೆಯಿಂದ ತಗ್ಗು ಪ್ರದೇಶದ ಜನರು ತೀವ್ರ ತೊಂದರೆ ಅನುಭವಿಸಿದರು.

ಉತ್ತಮ ಮಳೆಯ ಕಾರಣ ರಸ್ತೆಗಳಲ್ಲಿ ನೀರು ನಿಂತಿತ್ತು. ರಸ್ತೆಯಲ್ಲಿ ನೀರಿದಿಯೋ ಅಥವಾ ನೀರಿನಲ್ಲೇ ರಸ್ತೆ ಇದೆಯೋ ಎನ್ನುವಂತೆ ಅನೇಕ ಕಡೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣಕ್ಕೆ ದ್ವಿಚಕ್ರ ವಾಹನ, ಆಟೋ ರಿಕ್ಷಾ ಸವಾರರು, ಪಾದಚಾರಿಗಳು ಇನ್ನಿಲ್ಲದ ಸಮಸ್ಯೆಗೀಡಾದರು.

ಮಹಾನಗರ ಪಾಲಿಕೆ ಮುಂದಿನ ರೈಲ್ವೆ ಕೆಳ ಸೇತುವೆ, ಶೇಖರಪ್ಪ ನಗರದ ಅಂಡರ್‌ ಬ್ರಿಡ್ಜ್… ಮುಂತಾದ ಕಡೆ ಭಾರೀ ಪ್ರಮಾಣದಲ್ಲಿ ರಭಸವಾಗಿ ನೀರು ಹರಿದು ಬರುತ್ತಿದ್ದ ಕಾರಣಕ್ಕೆ ಒಂದು ಕಡೆಯಿಂದ ಮತ್ತೂಂದು ಕಡೆ ಸಾಗಲು ಹೆಣಗಾಡಬೇಕಾಯಿತು.

ಅಶೋಕ ಚಿತ್ರಮಂದಿದರ ಬಳಿ ಸಣ್ಣ ಮಳೆ ಬಂದರೂ ಹಳ್ಳದಂತೆ ನೀರು ನಿಲ್ಲುವುದು ಸಾಮಾನ್ಯ. ಭಾನುವಾರದ ಮಳೆಗೆ ದೊಡ್ಡ ಹಳ್ಳದಂತೆ ನೀರು ನಿಂತ ಪರಿಣಾಮ ಸಾರ್ವಜನಿಕರು, ವಾಹನಗಳ ಸವಾರರು ಅಕ್ಷರಶಃ ಪರದಾಡಿದರು. ಸುರಿಯುವ ಮಳೆಯಲ್ಲೇ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿತ್ತು.

Advertisement

ಎಸ್‌ಪಿಎಸ್‌ ನಗರ, ಶಿವ ನಗರ… ಮುಂತಾದ ಕಡೆಯಲ್ಲಿನ ತಗ್ಗು ಪ್ರದೇಶಗಳಲ್ಲಿನ ಮನೆಗೆ ಏಕಾಏಕಿ ನೀರು ನುಗ್ಗಿದ್ದು ಜನರು ತೊಂದರೆ ಅನುಭವಿಸುವಂತಾಯಿತು. ಮಳೆಯಿಂದ ಮಿನಿ ಕೆರೆಯಂತಾಗುವ ಸಾರಿಗೆ ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಪ್ರಮಾಣದ ನೀರು ನಿಂತಿದ್ದರಿಂದ ಪ್ರಯಾಣಿಕರು ಬಸ್‌ ಹತ್ತಲು ಮತ್ತು ಇಳಿದು ತಮ್ಮ ಪ್ರದೇಶಕ್ಕೆ ತೆರಳಲು ಪ್ರಯಾಸ ಪಡಬೇಕಾಯಿತು.

ಕಳೆದ ಅನೇಕ ವರ್ಷದಿಂದ ಸಣ್ಣ ಮಳೆಗೂ ಸಹ ದಾವಣಗೆರೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಆಗುವ ಉದಾಹರಣೆ ಸಾಕಷ್ಟು ಇವೆ. ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಬಗೆ ಹರಿಸುವ ಭರಪೂರ ಭರವಸೆ ನೀಡಲಾಗುತ್ತದೆ. ಆದರೆ, ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಭರವಸೆಗಳು ಸಹ ಮಳೆಯ ನೀರಿನಲ್ಲೇ ಕೊಚ್ವಿ ಕೊಂಡು ಹೋಗುತ್ತವೆ…. ಎಂಬ ಸಾರ್ವಜನಿಕರ ದೂರು ಸತ್ಯ ಎಂಬುದಕ್ಕೆ ಅನೇಕ ಕಡೆ ಸಮಸ್ಯೆ ಉಂಟಾಗಿದ್ದೇ ಸಾಕ್ಷಿ.

ಈಗಲೇ ಎಚ್ಚೆತ್ತುಕೊಂಡು ಮಳೆಯಿಂದ ಸಮಸ್ಯೆ ಎದುರಾಗುವ ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಂಡಲ್ಲಿ ಜನರು ತೊಂದರೆ ಅನುಭವಿಸುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿತರು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next