ದಾವಣಗೆರೆ: ಬುಧವಾರ(ಆಗಸ್ಟ್ 14) ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ವಿವಿಧೆಡೆ ಜನರು ತೀವ್ರ ತೊಂದರೆ ಅನುಭವಿ ಸುವಂತಾಯಿತು.
ಕೆಲವು ಕಡೆ ರಸ್ತೆಯಲ್ಲಿ ನೀರು ಹರಿದ ಪರಿಣಾಮ ಸಂಪರ್ಕ ಬಂದ್ ಆಗಿತ್ತು. ಅಡಕೆ ಇತರೆ ತೋಟಗಳಿಗೆ ನೀರು ನುಗ್ಗಿದೆ. ಜಿಲ್ಲಾ ಕೇಂದ್ರ ದಾವಣಗೆರೆಯ ಬಂಬೂಬಜಾರ್, ಶೇಖರಪ್ಪ ನಗರ ಇತರೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು. ನೀರು ಹೊರ ಹಾಕುವುದೇ ದುಸ್ತರವಾಗಿತ್ತು.
ಸೇಂಟ್ ಪಾಲ್ಸ್ ಕಾನ್ವೆಂಟ್ ಇತರೆ ರಸ್ತೆಗಳು ಕೆಸರುಮಯವಾಗಿದ್ದವು. ಶಿವಪ್ಪಯ್ಯ ವೃತ್ತ ಇತರೆಡೆ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ನಿರಂತರವಾಗಿ ಸುರಿದ ಮಳೆಯಿಂದ ಚನ್ನಗಿರಿ ತಾಲೂಕಿನ ಹಲವಾರು ಕಡೆ ತೋಟಗಳಿಗೆ ನೀರು ನುಗ್ಗಿತ್ತು. ಕೆಲವು ಕಡೆ ರಸ್ತೆ ಸಂಪರ್ಕ ಕಡಿತವಾಗಿತ್ತು.ಬೇತೂರು-ರಾಂಪುರ ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡ ಬೇಕಾಯಿತು. ಬೇತೂರು ಗ್ರಾಮದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನೀರನ್ನು ಮನೆಯಿಂದ ಹೊರ ಹಾಕಲು ಹರ ಸಾಹಸ ಪಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಾವಣಗೆರೆ ನಗರದ ಬಂಬೂ ಬಜಾರ್ ನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಜನರು ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎಚ್.ಕಲ್ಪನಹಳ್ಳಿ ಗ್ರಾಮದಲ್ಲಿ ನಾಲೆಗಳಲ್ಲಿ ಚಾನಲ್ ಗಳಲ್ಲಿ ಹೂಳು ತುಂಬಿದ್ದರಿಂದ ನೀರು ಗ್ರಾಮಕ್ಕೆ ನುಗ್ಗಿದ ಘಟನೆ ಕೂಡ ನಡೆದಿತ್ತು. ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ಸಂಕಷ್ಟ ಪಡಬೇಕಾಯಿತು. ಬೆಳಗಿನ ಜಾವ ಮೂರು ಗಂಟೆಯಿಂದ ಆರಂಭವಾದ ಮಳೆ ಎಡೆಬಿಡದೆ ಸುರಿದಿದೆ. ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅಡಕೆ ತೋಟಗಳೆಲ್ಲಾ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಭಾರೀ ಮಳೆಗೆ ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿದ್ದುಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.