Advertisement

ಹಸಿ-ಒಣ ಕಸ ವಿಂಗಡಣೆ ಕಡ್ಡಾಯ

10:31 AM Aug 09, 2019 | Naveen |

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಸೆ.1ರಿಂದ ಕಡ್ಡಾಯವಾಗಿ ಹಸಿ-ಒಣ ಕಸ ವಿಂಗಡಣೆ ಪ್ರಕ್ರಿಯೆ ಜಾರಿಗೊಳಿಸಲು ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಧ್ಯಕ್ಷ , ಜಸ್ಟೀಸ್‌ ಸುಭಾಷ್‌ ಬಿ. ಆಡಿ ತಿಳಿಸಿದ್ದಾರೆ.

Advertisement

ಗುರುವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಾವಣಗೆರೆ, ಹರಿಹರ ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆ.9 ರಿಂದಲೇ ಕಸ ವಿಂಗಡಣೆ, ಘನ ತ್ಯಾಜ್ಯ ವಸ್ತುಗಳ ಬಳಸಿ ಗೊಬ್ಬರ ತಯಾರಿಕೆ, 50 ಮೈಕ್ರೋನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ನಿಷೇಧದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ನ.1 ರಿಂದ ದಾವಣಗೆರೆ ನಗರಪಾಲಿಕೆ ಮತ್ತು ಹರಿಹರ ನಗರಸಭೆಯಲ್ಲಿ ಶೇ.100 ರಷ್ಟು ಕಸ ವಿಂಗಡಣೆ, ಘನ ತ್ಯಾಜ್ಯ ವಸ್ತುಗಳ ಬಳಸಿ ಗೊಬ್ಬರ ತಯಾರಿಕೆ, 50 ಮೈಕ್ರೋನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಬರಲಿದೆ. ಇನ್ನು ಮುಂದೆ ಪ್ಲಾಸ್ಟಿಕ್‌ ಬಳಸುವ ಗ್ರಾಹಕರಿಗೂ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯ 41 ವಾರ್ಡ್‌ ಗಳ ಪೈಕಿ 32 ವಾರ್ಡ್‌ಗಳಲ್ಲಿ ಶೇ.100 ರಷ್ಟು ಹಸಿ, ಒಣ ಕಸ ವಿಂಗಡಣೆ ಆಗುತ್ತಿದೆ. ಇನ್ನುಳಿದ 9 ವಾರ್ಡ್‌ ಗಳಲ್ಲಿ ಭಾಗಶಃ ಆಗುತ್ತಿದೆ. ಹರಿಹರ ನಗರಸಭೆಯ 31 ವಾರ್ಡ್‌ ಪೈಕಿ 7 ಪೂರ್ಣ, 24 ಭಾಗಶಃ, ಚನ್ನಗಿರಿಯ 23 ವಾರ್ಡ್‌ಗಳಲ್ಲಿ 12ರಲ್ಲಿ ಪೂರ್ಣ, 11 ರಲ್ಲಿ ಭಾಗಶಃ, ಮಲೇಬೆನ್ನೂರುನ 23 ವಾರ್ಡ್‌ ನಲ್ಲಿ 5 ಪೂರ್ಣ, 18 ಭಾಗಶಃ, ಹೊನ್ನಾಳಿಯಲ್ಲಿ 7 ವಾರ್ಡ್‌, ಜಗಳೂರಿನ 18 ವಾರ್ಡ್‌ಗಳಲ್ಲಿ 5 ವಾರ್ಡ್‌ಗಳಲ್ಲಿ ಮಾತ್ರ ಸಂಪೂರ್ಣವಾಗಿ ಒಣ ಮತ್ತು ಹಸಿ ಕಸ ವಿಂಗಡಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಸ ವಿಂಗಡಣೆ, ಗೊಬ್ಬರ ತಯಾರಿಕಾ ಘಟಕ ಪ್ರಾರಂಭದ ಯೋಜನೆ ಸಿದ್ಧಪಡಿಸಲಾಗುವುದು. ಒಣ ಮತ್ತು ಹಸಿ ಕಸ ಮಿಶ್ರಣ ಆಗುವುದನ್ನ ತಪ್ಪಿಸುವ ಉದ್ದೇಶದಿಂದ ವಾರದಲ್ಲಿ 2 ದಿನ ಒಣ ಕಸ ಸಂಗ್ರಹಣೆ, ಇನ್ನುಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಣೆ ಮಾಡಲಾಗುವುದು. ಶಾಲಾ-ಕಾಲೇಜು, ಕಲ್ಯಾಣ ಮಂದಿರ, ಸಮುದಾಯ ಭವನ, ಸರ್ಕಾರಿ ವಸತಿ ಗೃಹ, ಅಪಾರ್ಟ್‌ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್‌ ಗೊಬ್ಬರ ತಯಾರಿಕಾ ಘಟಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಕಟ್ಟಡಗಳ ತ್ಯಾಜ್ಯವನ್ನು ರಸ್ತೆ, ಫುಟ್ಪಾತ್‌ನಲ್ಲಿ ಹಾಕುವಂತೆಯೇ ಇಲ್ಲ, ಯಾವುದಾದರೂ ಕಟ್ಟಡ ಕೆಡವುವ ಮುನ್ನ ಯಾವ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಬಗ್ಗೆ ಮೊದಲೇ ಮಾಹಿತಿ ನೀಡಿ, ಅನುಮತಿ ಪಡೆಯಬೇಕು. ಅದರಂತೆ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ತ್ಯಾಜ್ಯವನ್ನ ಆಸ್ಪತ್ರೆ, ಖಾಸಗಿ ನರ್ಸಿಂಗ್‌ ಹೋಂಗಳು ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನ್ಯಾಪ್‌ಕಿನ್‌, ಡೈಪರ್‌, ಬಳಸಿದ ಔಷಧಿ ಯಾವುದನ್ನೂ ಎಲ್ಲೆಂದರೆಲ್ಲಿ ಹಾಕುವಂತಿಲ್ಲ. ಅಂತದ್ದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಗ್ರಾಮ ಪಂಚಾಯತ್‌ನಲ್ಲಿ ಒಂದು ತಿಂಗಳಲ್ಲಿ ಒಣ ಕಸ ಸಂಗ್ರಹಣೆ ಸಂಗ್ರಹ, ಗೊಬ್ಬರ ತಯಾರಿಕಾ ಘಟಕ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು. ಪ್ಲಾಸ್ಟಿಕ್‌ ಉತ್ಪಾದನೆ, ಮಾರಾಟ, ಬಳಕೆ ಮಾಡುವರ ವಿರುದ್ಧವೂ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್‌ ಧ್ವಜಗಳ ಬಳಕೆ, ಪ್ಲಾಸ್ಟಿಕ್‌ ಹಾಳೆ ಬಳಸಿ ಇಡ್ಲಿ ತಯಾರಿಕೆಗೆ ಅವಕಾಶವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2018ರಲ್ಲಿ ಜಾರಿಗೆ ಬಂದಿರುವ ಘನ ತ್ಯಾಜ್ಯ ವಸ್ತು ವಿಲೇವಾರಿ ಕಾಯ್ದೆ ಅನ್ವಯ ಕಸ ವಿಂಗಡಣೆ, ಘನ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಕೆ, ಉಳಿದಂತಹ ಕಸವನ್ನು ಸಿಮೆಂಟ್ ಕಾರ್ಖಾನೆಗೆ ನೀಡುವುದು ಕಡ್ಡಾಯ. ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸುವ ಜೊತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು. ಹಸಿರು ನ್ಯಾಯಾಧೀಕರಣ ಈ ಎಲ್ಲಾ ಪ್ರಕ್ರಿಯೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್‌, ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ. ರಾಜೀವ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next