Advertisement
ರವಿವಾರ ನಗರದ ಹಳೆ ಪಿ.ಬಿ.ರಸ್ತೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದಾವಣಗೆರೆಯಲ್ಲಿ ಯಡಿಯೂರಪ್ಪ ಅವರ ಜನ್ಮದಿನ ಆಚರಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಫೆ.27ರಂದು ದಾವಣಗೆರೆಯಲ್ಲಿ ಯಡಿಯೂರಪ್ಪ ಜನ್ಮದಿನ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಯಡಿಯೂರಪ್ಪ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಈ ಜನ್ಮದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತೆ. ಸಭೆ ಸೇರಿದ ಹತ್ತು ಜನರ ಒಂದು ಸಮಿತಿ ಮಾಡಲಾಗಿದೆ. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ನಮ್ಮಲ್ಲಿ ಭಿನ್ನಮತವಿಲ್ಲ, ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ತೇವೆ. ಸಭೆಯಲ್ಲಿ ದೆಹಲಿಗೆ ಹೋಗುವ ಬಗ್ಗೆ ಅಭಿಪ್ರಾಯ ತಿಳಿಸಲಾಗಿದೆ ಎಂದು ತಿಳಿಸಿದರು. ವಿಜಯೇಂದ್ರ ಹೆಸರಲ್ಲಿ ಪೂಜೆ:
ಸಭೆಗೂ ಮೊದಲು ಮಾಜಿ ಶಾಸಕರು, ಮಾಜಿ ಸಚಿವರು ನಗರದ ಶ್ರೀ ದುಗ್ಗಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪ ಇತರ ಮುಖಂಡರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.
Related Articles
ಮೊದಲೇ ತಿಳಿಸಿದಂತೆ ವಿಜಯೇಂದ್ರ ಪರ ಡಿ. 14 ಅಥವಾ 15ರಂದು ಸಭೆ ನಡೆಸುತ್ತೇವೆ ಎಂದು ತಿಳಿಸಿದ್ದ ನಿಷ್ಠರು ರವಿವಾರ ಸಭೆ ನಡೆಸಿ ವಿಜಯೇಂದ್ರ ಪರವಾಗಲಿ ಅಥವಾ ಯತ್ನಾಳ್ ವಿರುದ್ಧವಾಗಲಿ ಚಕಾರ ಎತ್ತಿಲ್ಲ. ಆದರೆ ಯಡಿಯೂರಪ್ಪ ಅಭಿಮಾನಿ ಬಳಗದ ಹೆಸರಿನಲ್ಲಿ ವಿಜಯೇಂದ್ರ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದು, 20 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಿದ್ದಾರೆ.
Advertisement
ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿ ರಾಷ್ಟ್ರ, ರಾಜ್ಯದ ಮುಖಂಡರನ್ನು ಆಹ್ವಾನಿಸುವುದು, ವಿಜಯೇಂದ್ರ ಅವರನ್ನೇ ವಿಧಾನಸಭಾ ಚುನಾವಣೆವರೆಗೆ ಮುಂದುವರಿಸುವುದು, ಪ್ರಾಮಾಣಿಕ, ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ, ಅವಕಾಶ ಒದಗಿಸುವುದು ಮತ್ತಿತರ ನಿರ್ಣಯಗಳನ್ನು ಕೈಗೊಂಡಿದ್ದಾರೆ.
“ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಬಣದ ಹೆಸರಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ.” -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ನನ್ನನ್ನು ಪಕ್ಷದಿಂದ ಹೊರಗೆ ಹಾಕಲು ಆಗಲಿಲ್ಲ ಎಂದು ವಿಜಯೇಂದ್ರ ಹಾಗೂ ಅವರ ಬಣದವರು ಹತಾಶೆಗೊಂಡಿದ್ದಾರೆ. ಪಕ್ಷದಲ್ಲಿ ಯಾರ ಮೇಲೆ, ಏನು ಕ್ರಮ ಕೈಗೊಂಡರೆ ಯಾವ ಪರಿಣಾಮ ಬೀರುತ್ತದೆ ಎಂದು ವರಿಷ್ಠರಿಗೆ ಗೊತ್ತಿದೆ. ಅಲ್ಲದೆ ಕರ್ನಾಟಕದ ಪರಿಸ್ಥಿತಿ ಬಗ್ಗೆ ಸಂಸದರಿಗೂ ಗೊತ್ತಿದೆ. ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ. -ಬಸನಗೌಡ ಯತ್ನಾಳ್, ಬಿಜೆಪಿ ಶಾಸಕ