Advertisement

ಹೆಣ್ಣು ಮಕ್ಕಳಲ್ಲಿ ಪ್ರೀತಿ-ವಾತ್ಸಲ್ಯ ಹೆಚ್ಚು

11:30 AM Jan 25, 2020 | Naveen |

ದಾವಣಗೆರೆ: ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದು, ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಹೇಳಿದ್ದಾರೆ.

Advertisement

ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಮಕ್ಕಳಾ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರದಲ್ಲಿ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ
ತನ್ನದೇ ಆದ ನೆಲೆ ಕಂಡುಕೊಂಡು ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸಬೇಕಿದೆ ಎಂದರು.

ಹಿಂದಿನ ಕಾಲದಿಂದಲೂ ನಮ್ಮಲ್ಲಿ ಲಿಂಗ ತಾರತಮ್ಯವಿದೆ. ಇತ್ತಿಚಿನ ದಿನಗಳಲ್ಲಿ
ಈ ತಾರತಮ್ಯ ಕಡಿಮೆಯಾಗಿದೆ ಎನ್ನಲಾಗುತ್ತಿದ್ದರೂ ಜೀವಂತವಾಗಿದೆ. ಮಕ್ಕಳಲ್ಲಿ ತಾರತಮ್ಯ ಎಂಬುದು ಮನೆಗಳಿಂದ ಪ್ರಾರಂಭವಾಗಿ ಎಲ್ಲಾ ಕಡೆಗಳಲ್ಲಿ ಮುಂದುವರೆಯುತ್ತದೆ. ಗಂಡು ಮಕ್ಕಳಿಗೆ ಉನ್ನತ ಹಂತದ ಶಿಕ್ಷಣ ನೀಡಿದರೆ, ಹೆಣ್ಣು ಮಕ್ಕಳ ಶಿಕ್ಷಣ ಕೇವಲ ಪ್ರೌಢಶಾಲೆ ಅಥವಾ ಕಾಲೇಜು ಹಂತಕ್ಕೆ ಸೀಮಿತಗೊಳಿಸುವಂತಹ ಭಾವನೆಗಳು ಇಂದಿಗೂ ನಮ್ಮಲ್ಲಿ ಜೀವಂತವಾಗಿದೆ. ಹೆಣ್ಣು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದಾಳೆ. ಗಂಡು ಮಕ್ಕಳಿಗೆ ನೀಡುವಂತಹ ಸ್ವಾತಂತ್ರ್ಯವನ್ನು ಇಂದಿಗೂ ನಾವು ಹೆಣ್ಣು ಮಕ್ಕಳಿಗೆ ನೀಡುವುದಿಲ್ಲ ಎಂದು ಹೇಳಿದರು.

ಇತ್ತೀಚೆನ ದಿನಗಳಲ್ಲಿ ಈ ಪರಿಸ್ಥಿತಿ ಸ್ಪಲ್ಪ ಮಟ್ಟದ ಸುಧಾರಣೆ ಕಂಡಿದೆ. ಹೆಣ್ಣು
ಮಕ್ಕಳು ಬೇಕೆಂದು ಬಯಸುವರರ ಸಂಖ್ಯೆ ಹೆಚ್ಚುತ್ತಿದೆ. ವೃದ್ಧಾಪ್ಯ ಜೀವನದಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚು ಪ್ರೀತಿ ಆದರದಿಂದ ನೋಡಿಕೊಳ್ಳುವುದು ಹೆಣ್ಣು ಮಕ್ಕಳು.
ಈ ಕಾರಣಕ್ಕಾದರೂ ನಾವು ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಸಾಧನೆಗೆ ಸ್ಫೂರ್ತಿ ನೀಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಹಿಳಾ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ನಾಗಮ್ಮ
ಮಾತನಾಡಿ, ತಂದೆ-ತಾಯಿಯನ್ನು ಹೆಚ್ಚು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಹೆಣ್ಣು ಮಗಳು. ಮುಪ್ಪಿನ ಕಾಲದಲ್ಲಿ ತಂದೆ ತಾಯಿಯನ್ನು
ವೃದ್ದಾಶ್ರಮಕ್ಕೆ ಕಳುಹಿಸುವ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು ಪೋಷಿಸಿ, ರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದರು.

Advertisement

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ. ಬಸವರಾಜ್‌ ಮಾತಾನಾಡಿ, ಅನಾದಿ ಕಾಲದಿಂದಲೂ ಹೆಣ್ಣನ್ನು ಬರಿ ಭೋಗದ ವಸ್ತುವನ್ನಾಗಿ ನೋಡಲಾಗುತ್ತಿದೆ. ಈಗ ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲವನ್ನು ಮೀರಿ ಗಂಡಿಗೆ ಸಮಾನಳಾಗಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸುತ್ತಿದ್ದಾಳೆ. ಹಿಂದೆ ಅ ಧಿಕಾರದಲ್ಲಿದ್ದವರು ಈಗ ತಮ್ಮ ಸಂಧ್ಯಾಕಾಲವನ್ನು ವೃದ್ಧಾಶ್ರಮದಲ್ಲಿ ಕಳೆಯುತ್ತಿದ್ದಾರೆ. ಹೆಣ್ಣು ಜೀವನದಲ್ಲಿ
ಮದುವೆಯಾದರೆ ಮಾತ್ರ ಪರಿಪೂರ್ಣಳಲ್ಲ. ಉತ್ತಮ ಜ್ಞಾನವಂತಳಾಗಿ ನೌಕರಿಯಲ್ಲಿದ್ದಾಗ ಮಾತ್ರ ಹೆಣ್ಣಿನ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಕೆ.ಎಚ್‌.ವಿಜಯಕುಮಾರ್‌ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ
ನೀಡುವುದು ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ 2018ರಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ರಕ್ಷಿಸಿ ಎಂಬ ಪ್ರತಿಜ್ಞಾ ವಿಧಿ
ಸ್ವೀಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು. ಸೀತಮ್ಮ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಆರ್‌. ಮಂಜಪ್ಪ, ಸಿಡಿಪಿಓ ಧರಣಿಕುಮಾರ್‌, ಮಹಿಳಾ ಠಾಣೆಯ ಸಬ್‌ ಇನ್ಸಪೆಕ್ಟರ್‌ ಮಾಳಮ್ಮ,
ಮಹಿಳಾ ರಕ್ಷಣಾ ಘಟಕದ ಶೃತಿ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next