Advertisement

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

10:24 AM Apr 20, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಶುಕ್ರವಾರ ಭರ್ಜರಿ ಶೋಭಾಯಾತ್ರೆ, ಸಹಸ್ರಾರು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬದ ಆಪ್ತರೊಡನೆ ಮತ್ತೂಮ್ಮೆ ನಾಮಪತ್ರ ಸಲ್ಲಿಸಿದರು.

Advertisement

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮೂರು ಸ್ಥಳದಿಂದ ಮೆರವಣಿಗೆ ನಡೆದವು. ಮೊದಲ ಮೆರವಣಿಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಹಳೇ ಬಸ್‌ ನಿಲ್ದಾಣ ಮೂಲಕ ಮಹಾತ್ಮಗಾಂಧಿ ವೃತ್ತ ತಲುಪಿತು. ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾದ ಎರಡನೇ ಮೆರವಣಿಗೆ ಲಾಯರ್‌ ರಸ್ತೆಯ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿತು. ರಾಂ ಆ್ಯಂಡ್‌ ಕೋ ಸರ್ಕಲ್‌ನಿಂದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 4ನೇ ಮುಖ್ಯರಸ್ತೆ ಮೂಲಕ ಸಾಗಿ ಜಯದೇವ ಸರ್ಕಲ್‌ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದು ಸೇರಿತು. ಮೂರು ಮೆರವಣಿಗೆಗಳು ಅರುಣಾ ಚಿತ್ರಮಂದಿರ ವೃತ್ತದಲ್ಲಿರುವ ವಾಣಿ ಹೊಂಡಾ ಶೋಂ ರೂಂ ಬಳಿ ಮುಕ್ತಾಯಗೊಂಡವು.

ಚಿತ್ರನಟಿ ಶೃತಿ ಮಾತನಾಡಿ, ದಾವಣಗೆರೆ ನನಗೆ ತವರು ಮನೆ. ಅನೇಕ ಚುನಾವಣೆ ಪ್ರಚಾರ, ಇತರೆ ಕಾರ್ಯ ಕ್ರಮಕ್ಕೆ ಬಂದ ಸಂದರ್ಭದಲ್ಲಿ ದಾವಣಗೆರೆ ಜನರು ನೀಡಿದ ಪ್ರೀತಿ, ವಿಶ್ವಾಸ ಮರೆಯಲಿಕ್ಕಾಗದು. ಗಾಯಿತ್ರಿ ಸಿದ್ದೇಶ್ವರ್‌ ಅವರೊಂದಿಗೆ ಹಲವಾರು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇನೆ. ಮಹಿಳೆ ಅಬಲೆಯಲ್ಲ ಸಬಲೆ ಎನ್ನುವುದರ ಪ್ರತೀಕವಾಗಿರುವ ಗಾಯಿತಿ ಸಿದ್ದೇಶ್ವರ್‌ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿಯಲ್ಲಿ ಭಾರತ್‌ ಮಾತಾ ಕೀ ಜೈ… ಎನ್ನಲು ಯಾವುದೇ ಅಡ್ಡಿ ಇಲ್ಲ. ಭಾರತೀಯರಾದ ನಮಗೆ ಭಾರತ್‌ ಮಾತಾ ಕೀ.. ಜೈ ಎನ್ನಲು ಹೆಮ್ಮೆ ಇದೆ. ಆದರೆ, ವಿರೋಧ ಪಕ್ಷದಲ್ಲಿ ಭಾರತ್‌ ಮಾತಾ ಕೀ ಜೈ… ಎನ್ನಲು ಅಳಕಿದೆ ಎನ್ನುವ ಮೂಲಕ ಕಾಂಗ್ರೆಸ್‌ಗೆ ಪರೋಕ್ಷವಾಗಿ ಛಾಟಿ ಬೀಸಿದರು.

ಬಿಜೆಪಿಯಲ್ಲಿ ಮಹಿಳೆಯರಿಗೆ ಅತಿ ಹೆಚ್ಚಿನ ಗೌರವ, ಮನ್ನಣೆ ಕೊಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ವಿಧಾನ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿದ್ದಾರೆ. ತ್ರಿವಳಿ ತಲ್ಲಾಖ್‌… ರದ್ದುಪಡಿಸುವ ಮೂಲಕ ಮಹಿಳೆಯರಿಗೆ ಗೌರವ ಬದುಕು ನೀಡಿದ್ದಾರೆ ಎಂದು ತಿಳಿಸಿದರು.

Advertisement

ಬಿಜೆಪಿಯವರು ಎಂದೆಂದಿಗೂ ಯಾವುದೇ ಧರ್ಮದವರನ್ನು ದ್ವೇಷಿಸುವ ಕೆಲಸ ಮಾಡುವುದೇ ಇಲ್ಲ. ಎಲ್ಲರೂ ಒಂದೇ. ಭಾರತಮಾತೆ ಮಕ್ಕಳು ಎನ್ನುತ್ತೇವೆ. ಆದರೆ, ಕೆಲವರು ರಾಜಕಾರಣದಲ್ಲಿ ಧರ್ಮ ತಂದು ನಮ್ಮಲ್ಲೇ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗಾಯಿತ್ರಿ ಸಿದ್ದೇಶ್ವರ ಅವರು 2 ಲಕ್ಷಕ್ಕೂ ಅಧಿಕ ಮತಗಳಲ್ಲಿ ಗೆಲ್ಲುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ಧನರೆಡ್ಡಿ, ಭೈರತಿ ಬಸವರಾಜ್‌, ಜೆ.ಸಿ. ಮಾಧುಸ್ವಾಮಿ, ಮುರುಗೇಶ್‌ ನಿರಾಣಿ, ಜಿ. ಕರುಣಾಕರರೆಡ್ಡಿ, ಚಿತ್ರನಟಿ ಶೃತಿ, ಸಂಸರಾದ ಡಾ| ಜಿ.ಎಂ. ಸಿದ್ದೇ ಶ್ವರ್‌, ವೈ. ದೇವೇಂದ್ರಪ್ಪ, ಶಾಸಕರಾದ ಬಿ.ಪಿ. ಹರೀಶ್‌, ಎನ್‌. ರವಿಕುಮಾರ್‌, ಕೆ.ಎಸ್‌. ನವೀನ್‌, ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಎಚ್‌.ಎಸ್‌. ಶಿವಶಂಕರ್‌, ಜಿಲ್ಲಾಧ್ಯಕ್ಷ ಎನ್‌. ರಾಜಶೇಖರ್‌ ನಾಗಪ್ಪ, ಯಶವಂತರಾವ್‌ ಜಾಧವ್‌, ಎಸ್‌.ಎಂ. ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದ ರ್ಶಿ ಧನಂಜಯ ಕಡ್ಲೆàಬಾಳು, ಮಾಜಿ ಮೇಯರ್‌ಗಳಾದ ಎಸ್‌.ಟಿ. ವೀರೇಶ್‌, ಬಿ.ಜಿ. ಅಜಯ್‌ಕುಮಾರ್‌, ಜಿ.ಎಸ್‌. ಅನಿತ್‌ಕುಮಾರ್‌, ಜಿ.ಎಸ್‌. ಅಶ್ವಿ‌ನಿ ಶ್ರೀನಿವಾಸ್‌, ಜಿ.ಎಲ್‌. ರಾಜೀವ್‌, ಜಿ.ಎಂ. ಲಿಂಗರಾಜ್‌, ಭಾಗ್ಯ ಪಿಸಾಳೆ, ಶಿವನಗೌಡ ಟಿ. ಪಾಟೀಲ್‌, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

ಗಮನ ಸೆಳೆದ ಮೋದಿ…!

ಗಾಯಿತ್ರಿ ಸಿದ್ದೇಶ್ವರ್‌ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಥೇಟ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ಮಂಗಳೂರಿನ ವ್ಯಕ್ತಿಯೊಬ್ಬರು ಸಾವಿರಾರು ಜನರ ಗಮನ ಸೆಳೆದರು. ಮೋದಿ ಅವರ ಶೈಲಿಯಲ್ಲೇ ಜನರತ್ತ ಕೈ ಬೀಸುವುದು. ಹೂವು ಎಸೆಯುವುದು. ನಮಸ್ಕಾರ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು. ಕನ್ನಡದ ಖ್ಯಾತ ರ್ಯಾಪರ್‌ ಚಂದನ್‌ ಶೆಟ್ಟಿ ಅವರ ಗೀತೆಗಳಿಗೆ ಜನರು ಭರ್ಜರಿ ಸ್ಟೆಪ್‌ ಹಾಕಿದರು.

ಮಾಧುಸ್ವಾಮಿ ಹಾಜರ್‌…

ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಗಾಯಿತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲ ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಂಡರು. ಈಚೆಗೆ ಬಿಜೆಪಿ ಸೇರಿರುವ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next