Advertisement
ಗುರುವಾರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಫಲ-ಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಗದೀಶ್, ತೋಟಗಾರಿಕೆ ಬಗ್ಗೆ ಅಭಿರುಚಿ ಹೆಚ್ಚಿಸಲು, ಮನೆಗಳಲ್ಲಿ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ಬೆಳೆಸಲು ಪ್ರೋತ್ಸಾಹ, ಮಕ್ಕಳಿಗೆ ತೋಟಗಾರಿಕೆ ಬಗ್ಗೆ ಅರಿವಿನ ಜತೆಗೆ ಮನೆಮಂದಿ ದಿನನಿತ್ಯದ ಜೀವನದ ಒತ್ತಡದಿಂದ ಹೊರಬಂದು ಮನಸ್ಸಿನ ಉಲ್ಲಾಸಕ್ಕೆ ಫಲ-ಪುಷ್ಪ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
Related Articles
Advertisement
ವಿವಿಧ ತಳಿಯ 5000 ಗಿಡಗಳನ್ನು ಪ್ಲಾಸ್ಟಿಕ್ ಕುಂಡದಲ್ಲಿ ಬೆಳೆಸಲಾಗಿದ್ದು, ಹಳದಿ, ಕೇಸರಿ, ಬಿಳಿ, ಕೆಂಪು ಪರ್ಪಲ್, ಬಣ್ಣದ ಹೂಗಳ ಸಾಲ್ವಿಯಾ, ಮ್ಯಾರಿಗೋಲ್ಡ್, ಕಲರ್ ಪೆಟ್ಯುನಿಯಾ, ಸೆಲ್ಯುಷಿಯಾ, ಟೆಟ್ಯುನಿಯಾ, ಪೆರಿವಿಂಕಲ್, ಜೀನಿಯಾ, ಬಾಲ್ಸಮ್, ವರ್ಬೇನಿಯಾ ಮತ್ತು ಅಸ್ಟರ್ ಹೂವಿನ ಗಿಡಗಳನ್ನು ಪ್ರದರ್ಶನದಲ್ಲಿಡಲಾಗುವುದು ಎಂದು ಹೇಳಿದರು.
ರೈತರಿಗೆ ನಾಟಿ ಮಾಡಲು ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಬೆಳೆದ ಉತ್ತಮ ಗುಣಮಟ್ಟದ ತೋಟಗಾರಿಕೆ ಸಸಿ/ಕಸಿ ಗಿಡಗಳನ್ನು ಇಲಾಖಾ ದರದಲ್ಲಿ ಒದಗಿಸಲು ಸಸ್ಯ ಸಂತೆ ಆಯೋಜಿಸಿ, ಗ್ರಾಹಕರಿಗೆ ನೇರವಾಗಿ ಸಸಿ ಇತರೆ ಗಿಡಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಗಾಜಿನ ಮನೆಯ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಿದ್ದು, ಈ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಕಲಾಕೃತಿ ಸಿದ್ಧತೆಯಲ್ಲಿ ನುರಿತ 10 ರಿಂದ 15 ಸಿಬ್ಬಂದಿ ಈಗಾಗಲೇ ಕಾರ್ಯನಿರತರಾಗಿದ್ದು, ವಿಶೇಷವಾದ ಐಫೆಲ್ ಟವರ್ ಪುಷ್ಪ ಕಲಾಕೃತಿಯನ್ನು ಬೆಂಗಳೂರಿನ ಅಗರ್‌ವಾಲ್ ಫ್ಲೋರಿಸ್ಟ್ ನವರು ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.
ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರದರ್ಶನದ ಹಿನ್ನೆಲೆಯಲ್ಲಿ ತಿಂಡಿ-ತಿನಿಸು ಮಾರಾಟ ಮಳಿಗೆ ಸೇರಿದಂತೆ ಒಟ್ಟು 20 ಮಳಿಗೆಗಳಿಗೆ ಅವಕಾಶ ಇದೆ. ಬೇಡಿಕೆ ಇದ್ದರೆ ಇನ್ನೂ ಹೆಚ್ಚಿನ ಮಳಿಗೆ ತೆರೆಯಲಾಗುವುದು ಎಂದು ತಿಳಿಸಿದರು.
ಫಲ-ಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಐದು ದಿನಗಳ ಕಾಲವೂ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಂಘ ಸಂಸ್ಥೆಗಳು, ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಂದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಗಾಜಿನಮನೆಗೆ ಉತ್ತಮ ರಸ್ತೆ, ಟನಲ್ ಅಕ್ವೇರಿಯಂ, ಶಾಶ್ವತ ದೀಪಾಲಂಕಾರ, ಇತರೆ ಕಾಮಗಾರಿಗಳಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 10 ಕೋಟಿ ರೂ. ಗಳ ಡಿಪಿಆರ್ ತಯಾರಿಸಲಾಗಿದೆ. ಅನುಮೋದನೆ ನಂತರ ಕೆಲಸ ಆರಂಭಿಸಲಾಗುವುದು ಎಂದರು.