Advertisement

ಸಂವಿಧಾನದ ಮೂಲತತ್ವ ಮೈಗೂಡಿಸಿಕೊಳ್ಳಿ: ಸ್ವಾಮೀಜಿ

03:32 PM Jul 20, 2019 | Naveen |

ದಾವಣಗೆರೆ: ಬಹುತ್ವ ಭಾರತ ಧರ್ಮಕ್ಕೆ ಸಂವಿಧಾನವೇ ಧರ್ಮಗ್ರಂಥ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಿಸಿದ್ದಾರೆ.

Advertisement

ಶ್ರೀ ಬಕ್ಕೇಶ್ವರ ಪ್ರೌಢಶಾಲೆ, ಎಸ್‌.ಜೆ.ಎಂ. ಪಬ್ಲಿಕ್‌ಸ್ಕೂಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಹಯಾನ ಮತ್ತು ಸಮುದಾಯ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಸಂವಿಧಾನ ಓದು ಅಭಿಯಾನ ಹಾಗೂ ಪ್ರತಿಭಾ ವಿಕಾಸ ಸಂಘ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮೊಟ್ಟ ಮೊದಲಿಗೆ ನಾವೆಲ್ಲರು ಸಂವಿಧಾನ ಓದಬೇಕು, ಸಂವಿಧಾನದ ಮೂಲತತ್ವ ಮೈಗೂಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದಲ್ಲಿ ಮಹಾನ್‌ ದಾರ್ಶನಿಕ, ವಿಶ್ವಗುರು ಬಸವಣ್ಣನವರು ಅನುಭವ ಮಂಟಪದಲ್ಲಿ ಕಾಯಕಜೀವಿಗಳು, ದಲಿತರು, ದಮನಿತರು, ಮಹಿಳೆಯರನ್ನು ಒಳಗೊಂಡಂತೆ ಕಟ್ಟಿದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಚಳವಳಿಯೇ ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು.

ಬಹುತ್ವ ಭಾರತ ಧರ್ಮಕ್ಕೆ ಸಂವಿಧಾನವೇ ಧರ್ಮಗ್ರಂಥವಾಗಿದೆ. ಅದರಂತೆ ನಡೆದುಕೊಳ್ಳಬೇಕು, ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಬಂಧು-ಬಳಗ, ಗೆಳೆಯರಲ್ಲಿ ವಿದ್ಯಾರ್ಥಿ, ಯುವಜನರ ಮಧ್ಯೆ ಸಂವಿಧಾನದ ತಿಳಿವಳಿಕೆಯನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದರು. ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನದಾಸ್‌ರವರು ಸಂವಿಧಾನ ಓದು… ಎಂಬ ಚಳವಳಿಯ ಮೂಲಕ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.

ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನದಾಸ್‌, ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶವೆಂದರೆ ಕೇವಲ ಮಣ್ಣಲ್ಲ, ಅಲ್ಲಿನ ಮನುಷ್ಯರು, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳನ್ನು ಬಿತ್ತಿ ಬೆಳೆಸುತ್ತಿರುವುದು ಭಾರತದ ಸಂವಿಧಾನ. ನಾವೆಲ್ಲರೂ ಅನುಭವಿಸುತ್ತಿರುವ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಲವು ಸಾಂವಿಧಾನಿಕ ಪರಿಹಾರಗಳನ್ನು ಭಾರತದ ಸಂವಿಧಾನ ನೀಡಿದೆ ಎಂದು ತಿಳಿಸಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್‌ ಮಾತನಾಡಿ, ಕಾನೂನುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಪ್ರತಿಯೊಂದು ಹಂತದಲ್ಲೂ ಕಾನೂನಿನ ಅರಿವು ನಮಗೆ ಬೇಕಾಗಿವೆ. ವಿದ್ಯಾರ್ಥಿಗಳು ಸುಸಂಸ್ಕೃತ ನೈತಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ, ಗುರು-ಹಿರಿಯರಿಗೆ ಗೌರವ ನೀಡುವುದರ ಮೂಲಕ ಓದಿನ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಮುಖ್ಯೋಪಾಧ್ಯಾಯ ಕೆ. ಈಶನಾಯ್ಕ ಅಧ್ಯಕ್ಷ‌ತೆ ವಹಿಸಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್‌, ವಕೀಲರಾದ ಅನೀಸ್‌ ಪಾಷ, ಎನ್‌.ಎಂ. ಆಂಜನೇಯ, ಸಾಹಿತಿ ಕಲೀಂಪಾಷಾ, ವಿದ್ಯಾಸಂಸ್ಥೆ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next