ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನೊಂದಿಗೆ ಸರಸ, ಜೀವದೊಂದಿಗೆ ಚಕ್ಕಂದ… ಬೇಡವೇ ಬೇಡ ಎಂದು ಚಿತ್ರದುರ್ಗ ಬಸವಕೇಂದ್ರದ ಡಾ| ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದ್ದಾರೆ.
ಗುರುವಾರ ಶಿವಯೋಗಾಶ್ರಮದಲ್ಲಿ 300ಕ್ಕೂ ಹೆಚ್ಚು ಆಹಾರದ ಕಿಟ್ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಜೀವ ಅತೀ ಅಮೂಲ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇತರರ ಆರೋಗ್ಯವನ್ನೂ ಕಾಪಾಡುವಂತಾಗಬೇಕು ಎಂದು ಮನವಿ ಮಾಡಿದರು. ಈಗ ಜಗತ್ತಿನ ಎಲ್ಲಾ ಕಡೆ ಅತ್ಯಂತ ಸಂಕೀರ್ಣ, ಸಂಕಷ್ಟದ ವಾತಾವರಣ ಇದೆ. ನಿಸರ್ಗದತ್ತ ವೈರಾಣು ಕೊರೊನಾ ಅತ್ಯಂತ ಭಯಾನಕ, ಭೀಭತ್ಸ, ನೋವು ಉಂಟು ಮಾಡುತ್ತಿದೆ. ಕ್ಷಣಾರ್ಧದಲ್ಲಿ ವ್ಯಾಪಿಸುವ ಮೂಲಕ ಸಾವಿರಾರು ಜನರ ಜೀವಕ್ಕೆ ಎರವಾಗುತ್ತಿದೆ. ಇಂತಹ ಗಂಭೀರ, ಕಠಿಣ ಪರಿಸ್ಥಿತಿಯನ್ನ ನಾವು ಯಾರೂ ಕಂಡಿರಲಿಲ್ಲ. ಇಡೀ ಜಗತ್ತು ನೋವು, ದುಖಃದಲ್ಲಿ ಮುಳುಗಿದೆ ಎಂದು ವಿಷಾದಿಸಿದರು.
ಅಂಗಾಂಗಳೇ ಕೊರೊನಾ ರೋಗ ಆಹ್ವಾನ ನೀಡುತ್ತಿವೆ. ಹಾಗಾಗಿ ಪ್ರತಿಯೊಬ್ಬರು ಜಾಗ್ರತರಾಗಿರಬೇಕು. ಮುಖಗವಸು ಮಾತ್ರವಲ್ಲ ಕೈಗವಸು ಧರಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಮನೆಯ ಹೊರಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಕೊರೊನಾ ಮಹಾಮಾರಿ ಅಟ್ಟಹಾಸ ತಡೆಯಲು ಲಾಕ್‌ಡೌನ್ ಮಾಡಿದ್ದರೂ ಕೆಲವರು ಊರು, ಕೇರಿ, ಓಣಿ ಹೇಗಿವೆ ಎಂದು ನೋಡಲಿಕ್ಕೆ ಮನೆಯಿಂದ ಜಾಯ್‌ರೈಡ್‌ಗಾಗಿ ಹೊರಗೆ ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಎಲ್ಲ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡಿದೆ. ಕೂಲಿ ಕಾರ್ಮಿಕರು, ಶ್ರಮಿಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳು ಕೈಲಾದಷ್ಟು ನೆರವು ನೀಡುತ್ತಿವೆ. ವಿರಕ್ತ ಮಠ, ಬಸವ ಕೇಂದ್ರ, ವಿದ್ಯಾವರ್ಧಕ ಸಂಘದಿಂದ 300ಕ್ಕೂ ಹೆಚ್ಚು ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಾಜಿ ಶಾಸಕ ಮೋತಿ ವೀರಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ , ಡಿ. ಬಸವರಾಜ್, ಡಾ| ಸಿ.ಆರ್. ನಸೀರ್ ಅಹಮ್ಮದ್, ಎಚ್.ಕೆ. ರಾಮಚಂದ್ರಪ್ಪ ಇದ್ದರು.