ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ಸ್ಥಾನವನ್ನು ಉಳಿಸಿಕೊಡುವಂತೆ ಜೆಡಿಎಸ್ ಪಕ್ಷದ ವರಿಷ್ಠರಿಗೆ ಜಿಲ್ಲಾ ಜೆಡಿಎಸ್‌ನಿಂದ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಎದುರಿಸಲು ಈಗಾಗಲೇ ಪ್ರತಿಪಕ್ಷಗಳು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿವೆ. ಅದರಂತೆ ನಾವು ಕೂಡ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕರೆದು ಈಗಾಗಲೇ ಸಭೆ ನಡೆಸಿದ್ದೇವೆ ಎಂದರು.
ಪಕ್ಷದ ವರಿಷ್ಠರು ಕೂಡ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೇಳುತ್ತಿದ್ದು, ಅದರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ನೀಡಬೇಕು ಎಂಬ ಒಮ್ಮತದ ತೀರ್ಮಾನವನ್ನು ಜಿಲ್ಲಾ ಜೆಡಿಎಸ್ ಕೈಗೊಂಡಿದ್ದು, ಅದರಂತೆ ಭಾನುವಾರ ಜಿಲ್ಲಾ ಜೆಡಿಎಸ್‌ನಿಂದ ನಿಯೋಗ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್ ಪಕ್ಷವು ಗಣನೀಯವಾಗಿ ಹೆಚ್ಚು ಮತ ಪಡೆದಿದೆ. ಆದರೆ, ಕಾಂಗ್ರೆಸ್ ಮೂರು ಬಾರಿ ಪರಾಭಾವಗೊಂಡಿದೆ. ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆ ಎದುರಿಸುವ ಬಗ್ಗೆ ಜಿಲ್ಲೆಯಲ್ಲಿ ನಿರಾಸಕ್ತಿ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಬಹುಮತ ಪಡೆಯುವಲ್ಲಿ ಕಷ್ಟವಾಗಬಹುದು. ಆದರೆ, ಜೆಡಿಎಸ್ ಅಭ್ಯರ್ಥಿಗೆ ನೀಡಿದರೆ ನೇರ ಬಿಜೆಪಿಗೆ ಪೈಪೋಟಿ ನೀಡಬಹುದಾಗಿದೆ ಎಂದರು.
ಈಗಾಗಲೇ ಪಕ್ಷದ ಜಿಲ್ಲಾ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದು, ಎಲ್ಲರೂ ಕೂಡ ನಮ್ಮ ಪಕ್ಷಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ಸ್ಥಾನ ಉಳಿಸಿಕೊಳ್ಳಬೇಕೆಂದು ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ನನ್ನನ್ನು ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ತಿಳಿಸಿದ್ದು, ಪಕ್ಷದ ವರಿಷ್ಠರು ಜಿಲ್ಲೆಯಲ್ಲಿ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅಂತಹ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ಎಲ್ಲರೂ ಶ್ರಮಿಸುತ್ತೇವೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಕೂಡ ಬದ್ಧ ಎಂದು ಹೇಳಿದರು.
ಮಾ.3 ರಂದು ಸಭೆ: ದಾವಣಗೆರೆ ನಗರದಲ್ಲಿ ಮಾ. 3ರಂದು ಜಿಲ್ಲಾ ಜೆಡಿಎಸ್‌ನಿಂದ ಜಿಲ್ಲಾಮಟ್ಟದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.
ಜೆಡಿಎಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ಇಂದು ಕಾಂಗ್ರೆಸ್‌ನಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಅಷ್ಟಾಗಿ ಉತ್ಸಾಹ, ಸಿದ್ಧತೆ ಜಿಲ್ಲೆಯಲ್ಲಿ ಕಂಡುಬರುತ್ತಿಲ್ಲ. ಹಾಗಾಗಿ ಜೆಡಿಎಸ್ ಪಕ್ಷದಿಂದ ಎಚ್.ಎಸ್. ಶಿವಶಂಕರ್ ಅವರನ್ನು ಕಣಕ್ಕಿಳಿಸಬೇಕೆಂಬ ಒಮ್ಮತದ ನಿರ್ಧಾರವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಏನೇ ತೀರ್ಮಾನ ಕೈಗೊಂಡರು ಅದಕ್ಕೆ ನಮ್ಮ ಪಕ್ಷ ಬದ್ಧವಾಗಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ಶೀಲಾಕುಮಾರಿ, ವೀರೇಶ್ ಆಚಾರ್, ಜಿಗಳಿ ರಂಗಪ್ಪ, ತಿಮ್ಮಣ್ಣ, ದುಗ್ಗೇಶ್, ಹನೀಫ್, ಧನಂಜಯ್, ಮಲೇಬೆನ್ನೂರು ಮಹಾದೇವ್ ಇತರರು ಇದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ಶೀಲಾಕುಮಾರಿ, ಮನ್ಸೂರ್ ಅಲಿ, ಖಾದರ್ ಬಾಷಾ, ಗೋಣಿವಾಡ ಮಂಜುನಾಥ್, ಬಿ.ಎಂ. ದಾದಾಪೀರ್, ಧನಂಜಯ್ ಸೇರಿದಂತೆ ಪಕ್ಷದ ಜಿಲ್ಲಾ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.