Advertisement

ಚಿಕ್ಕಬಳ್ಳಾಪುರ: ಶಿವಶಂಕರ ರೆಡ್ಡಿ ಅಸಮಾಧಾನ ಶಮನಕ್ಕೆ ಉಸ್ತುವಾರಿ ಸಚಿವರ ಕಸರತ್ತು!

01:16 PM Feb 22, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಬಳ್ಳಾಪುರ: ಕ್ಷೇತ್ರದ ವಿಚಾರದಲ್ಲಿ ತಮಗೆ ಮನ್ನಣೆ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ರಾಜ್ಯ ನಾಯಕರ ಬಗ್ಗೆ ತೀವ್ರ ಅಸಮಾಧಾನಗೊಂಡು ಪಕ್ಷ ಬಿಡುವ ಚಿಂತನೆ ನಡೆಸಿರುವ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ನಾಯಕರಾದ ಮಾಜಿ ಸಚಿವ ಗೌರಿಬಿದನೂರಿನ ಎನ್‌. ಎಚ್‌.ಶಿವಶಂಕರ ರೆಡ್ಡಿರನ್ನು ಮನವೊಲಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರ ಸಚಿವ ಡಾ.ಎಂ.ಸಿ. ಸುಧಾಕರ್‌ ಮುಂದಾಗಿದ್ದಾರೆ.

Advertisement

ಇತ್ತೀಚೆಗೆ ಅಷ್ಟೇ ಎನ್‌.ಎಚ್‌. ಶಿವಶಂಕರರೆಡ್ಡಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲಿದ್ದಾರೆ. ಅವರಿಗೆ ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವ ಚಿಂತನೆ ನಡೆಸಿದೆಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿ ಬಂದಿತ್ತು. ಜೊತೆಗೆ ಶಿವಶಂಕರರೆಡ್ಡಿ ಕೂಡ ನಾನು ಕವಲು ದಾರಿಯಲ್ಲಿದ್ದೇನೆ. ರಾಜ್ಯಸಭಾ ಚುನಾವಣೆವರೆಗೂ ಕಾದು ನೋಡಿ ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು.

ಆದರೆ ಮಾಜಿ ಸಚಿವ ಶಿವಶಂಕರರೆಡ್ಡಿ ಬಿಜೆಪಿ ಸೇರಲಿದ್ದಾರೆಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಅಂತೂ ತೀವ್ರ ಸಂಚಲನ
ಮೂಡಿಸಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್‌, ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸಕ್ಕೆ ಎನ್‌.ಎಚ್‌. ಶಿವಶಂಕರರೆಡ್ಡಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಕೆ.ಎನ್‌.ಕೇಶವರೆಡ್ಡಿರನ್ನು ಆಹ್ವಾನಿಸಿ ಸಮಾಧಾನಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಶಿವಶಂಕರರೆಡ್ಡಿರನ್ನು ಕಾಂಗ್ರೆಸ್‌ ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಕರಸತ್ತು ನಡೆಸುವ ಮೂಲಕ ಅವರ ಮನವೊಲಿಸುವ
ಕಾರ್ಯ ನಡೆಸಿದ್ದಾರೆ.

ಬಜೆಟ್‌ ಅಧಿವೇಶನ ಬಳಿಕ ಖುದ್ದು ಸಿಎಂ ಹಾಗೂ ಡಿಸಿಎಂರನ್ನು ಭೇಟಿ ಮಾಡಿ ಚರ್ಚೆ ಮಾಡುವ ಬಗ್ಗೆ ಸುಧಾಕರ್‌, ಶಿವಶಂಕರರೆಡ್ಡಿ ರೆಡ್ಡಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಈಗಾಗಲೇ ಸಿಎಂ, ಡಿಸಿಎಂ ಕೂಡ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಶಿವಶಂಕರರೆಡ್ಡಿಗೆ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಕೇಳಿರುವ ಮಾಜಿ ಸಚಿವ ಶಿವಶಂಕರ ರೆಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಎನ್‌.ಎಚ್‌.ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಕೇಳಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಟಿಕೆಟ್‌ ಗೆ ಮಾಜಿ ಸಿಎಂ ಮೊಯ್ಲಿ, ರಕ್ಷಾ ರಾಮಯ್ಯ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇದರ ನಡುವೆ
ಶಿವಶಂಕರರೆಡ್ಡಿ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಎನ್‌.ಶಿವಶಂಕರರೆಡ್ಡಿರನ್ನು ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ಟಿಕೆಟ್‌ ಕೊಡುವ ಭರವಸೆ ಕೂಡ ಸಿಕ್ಕಿದ್ದು ಶಿವಶಂಕರರೆಡ್ಡಿ ಬಿಜೆಪಿ ಸೇರ್ಪಡೆ ಆಗಲಿದ್ದಾರೆಂಬ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಕೇಳಿ ಬಂದಿತ್ತು. ಇದರ ಬೆನ್ನಲೇ ಉಸ್ತುವಾರಿ ಸಚಿವ .ಎಂ.ಸಿ.ಸುಧಾಕರ್‌ ಶಿವಶಂಕರರೆಡ್ಡಿರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

Advertisement

ಕುತೂಹಲ ಮೂಡಿಸಿದ ಶಿವಶಂಕರರೆಡ್ಡಿ ನಡೆ ಗೌರಿಬಿದನೂರು ಕ್ಷೇತ್ರದಲ್ಲಿ ತಮ್ಮ ವಿರುದ್ದ ಗೆದ್ದಿರುವ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡಗೆ ಸರ್ಕಾರದಲ್ಲಿ ಸಕಲ ಗೌರವ ಸಿಗುತ್ತಿರುವುದು ಶಿವಶಂಕರರೆಡ್ಡಿರನ್ನು ತೀವ್ರವಾಗಿ ಕೆರಳಿಸಿದೆ. ಹೀಗಾಗಿ ಶಿವಶಂಕರರೆಡ್ಡಿಗೆ ಬಿಜೆಪಿ ಗಾಳ ಹಾಕಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಟಿಕೆಟ್‌ ಆಫ‌ರ್‌ ಕೊಟ್ಟಿದೆ. ಆದರೆ ಶಿವಶಂಕರರೆಡ್ಡಿ ಮಾತ್ರ ಇನ್ನೂ ರಾಜಕೀಯ ನಡೆ ಬಗ್ಗೆ ಗುಟ್ಟು ಬಿಟ್ಟು ಕೊಡದೇ ತೀವ್ರ ಕುತೂಹಲ ಮೂಡಿಸಿರುವುದು ಅಂತೂ ಸತ್ಯ.

*ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next