Advertisement

Congressಗೆ ತೇರದಾಳದಲ್ಲಿ ಬಂಡಾಯದ ಬಿಸಿ; ಕಣದಿಂದ ಹಿಂದೆ ಸರಿದ ಶಿವಶಂಕರ ಶ್ರೀ

07:23 PM Apr 24, 2023 | Team Udayavani |

ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಸದಸ್ಯರ ನಾಮಪತ್ರಗಳು ಊರ್ಜಿತಗೊಂಡಿದ್ದವು. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರದಂದು ಯಾರೂ ನಾಮಪತ್ರ ಹಿಂಪಡೆದುಕೊಂಡಿರಲಿಲ್ಲ. ಕೊನೆಯ 30 ನಿಮಿಷಗಳಲ್ಲಿ ಏಳು ಮಂದಿ ನಾಮಪತ್ರ ಹಿಂಪಡೆದ ಕಾರಣ 12 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Advertisement

ಸಿದ್ದು ಸವದಿ(ಬಿಜೆಪಿ), ಸಿದ್ದು ಕೊಣ್ಣೂರ(ಕಾಂಗ್ರೆಸ್), ಡಾ. ಪದ್ಮಜೀತ ನಾಡಗೌಡ ಪಾಟೀಲ(ಪಕ್ಷೇತರ), ಸುರೇಶ ಮಡಿವಾಳರ(ಜೆಡಿಎಸ್),ಅರ್ಜುನ ಹಲಗಿಗೌಡರ(ಆಮಆದ್ಮಿ), ವಿಠ್ಠಲ ಗುಣದಾಳ(ಎಸ್‌ಡಿಪಿಐ), ಧರೆಪ್ಪ ದಾನಗೌಡ(ಕೆಆರ್‌ಎಸ್), ಅಂಬಾದಾಸ ಕಾಮೂರ್ತಿ(ಪಕ್ಷೇತರ), ಸಂತೋಷ ಹನಗಂಡಿ (ಪಕ್ಷೇತರ) ಅಬ್ಬಾಸಲಿ ಮುಲ್ಲಾ(ಆರ್‌ಪಿಐ), ಶಿವಾನಂದ ಮಹಾಲಿಂಗ ಹ್ಯಾಗಾಡಿ(ಪಕ್ಷೇತರ), ಅಡಿವೆಪ್ಪ ಉದ್ದಪ್ಪಗೋಳ (ಪಕ್ಷೇತರ) ಕಣದಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆ.

ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳಿಗೆ ಬಂಡಾಯದ ಬಿಸಿ ಹೆಚ್ಚಾಗಿತ್ತು. ಈ ಬಾರಿ ಚುನಾವಣೆ ಕಣದಲ್ಲಿ ಬಿಜೆಪಿ ಬಂಡಾಯದ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಹಿಂಪಡೆದರೆ, ಕಾಂಗ್ರೆಸ್‌ನಿಂದ ಡಾ. ಪದ್ಮಜಿತ ನಾಡಗೌಡ ಪಾಟೀಲ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಸಿದ್ಧರಾಗಿದ್ದಾರೆ.

19 ಸದಸ್ಯರ ಪೈಕಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ರಾಜೇಂದ್ರ ಅಂಬಲಿ, ಬಸವರಾಜ ಬಾಳಿಕಾಯಿ, ಕಿರಣಕುಮಾರ ದೇಸಾಯಿ ಹಿಂಪಡೆದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ. ಎ.ಆರ್. ಬೆಳಗಲಿ, ಎಸ್‌ಡಿಪಿಐ ಎರಡನೇ ಅಭ್ಯರ್ಥಿಯಾದ ಪರಶುರಾಮ ಮೈತ್ರಿ ಹಾಗು ಪಕ್ಷೇತರ ಅಭ್ಯರ್ಥಿ ರಾಜು ಬೀಳಗಿ ನಾಮಪತ್ರ ವಾಪಸ್ ಪಡೆದು ಕೊಂಡರು.

ಕಚೇರಿ ಮುಂದೆ ನಾಟಕೀಯ ಬೆಳವಣಿಗೆ

Advertisement

ಚುನಾವಣಾಧಿಕಾರಿ ಕಚೇರಿ ಮುಂಭಾಗದಲ್ಲಿ ನೂರಾರು ಕಾಂಗ್ರೆಸ್ ಹಾಗು ನಾಡಗೌಡ ಬೆಂಬಲಿಗರು ಜಮಾವಣೆಗೊಂಡು ಅಭ್ಯರ್ಥಿಗಳ ಹಿಂಪಡೆಗೆ ಮನವಿ ಸೇರಿದಂತೆ ಹಲವಾರು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿ, ಕೆಲ ಕಾಲ ಗೊಂದಲ ಸೃಷ್ಟಿಯಾಗುವಲ್ಲಿ ಕಾರಣವಾಯಿತು.

ಇದೇ ಸಂದರ್ಭ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ವೀಣಾ ಕಾಶಪ್ಪನವರ ಆಗಮಿಸಿ ಡಾ. ನಾಡಗೌಡ ಪಾಟೀಲರನ್ನು ಕೊನೆಯ ಗಳಿಗೆಯಲ್ಲಿ ವಿನಂತಿಸಿದ ಘಟನೆಯೂ ನಡೆಯಿತು.

ಈ ಸಂದರ್ಭ ಮಾತನಾಡಿದ ಕಾಶಪ್ಪನವರ, ಎಐಸಿಸಿ ಸೇರಿದಂತೆ ರಾಜ್ಯದ ಎಲ್ಲ ಮುಖಂಡರು ಡಾ. ನಾಡಗೌಡರಿಗೆ ನಾಮಪತ್ರ ಹಿಂಪಡೆದು ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದ್ಯಾವದಕ್ಕೂ ಸ್ಪಂದಿಸದ ಕಾರಣ ಮುಂದಿನ ನಿರ್ಧಾರ ಪಕ್ಷದ ವರಿಷ್ಠರಂತೆ ನಡೆಯಲಿದೆ ಎಂದರು.

ಕಣದಿಂದ ಹಿಂದೆ ಸರಿದ ಶಿವಶಂಕರ ಶ್ರೀ
ರಾಜ್ಯ ರಾಜಕಾರಣದಲ್ಲಿ ವಿಶೇಷ ಸದ್ದು ಮಾಡಿದ್ದ ಹಳೇ ಹುಬ್ಬಳ್ಳಿಯ ವೀರ ಭೀಕ್ಷಾವ್ರತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶ್ರೀಗಳು ತೇರದಾಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದನ್ನು ಹಿಂಪಡೆದರು.

ನಾಮಪತ್ರ ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನ್ಯಾಸಿ ಧರ್ಮ, ಗುರು, ಪೀಠ ಹಾಗು ಸಮಾಜದ ನಂತರ ರಾಜಕೀಯವಿದೆ. ಇದನ್ನು ಗಮನಿಸದೆ ಕುರುಹಿನಶೆಟ್ಟಿ ಹಾಗು ಹಟಗಾರ ಸಮುದಾಯಗಳ ಹಿರಿಯರ, ಹಿಂದುಳಿದ ವರ್ಗ, ದೀನ ದಲಿತರ ಒತ್ತಡಕ್ಕೆ ಹಾಗು ನೇಕಾರರಿಗೆ ಆದ ಅನ್ಯಾಯ ಸಹಿಸಿಕೊಳ್ಳಲಾಗದೆ ಸ್ಪರ್ಧೆಗೆ ನಿಲ್ಲುವಂತೆ ಒತ್ತಾಯಿಸಿದ ಕಾರಣ ನಾಮಪತ್ರ ಸಲ್ಲಿಸಿದ್ದೆ, ಇದೀಗ ಕೊಲ್ಹಾಪುರ ಕಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಆದೇಶದಂತೆ ಹಾಗು ವೈಯಕ್ತಿಕವಾಗಿ ನನಗೂ ಬೇಸರವಾದ ನಿಟ್ಟಿನಲ್ಲಿ ನಾಮಪತ್ರ ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸ್ಪರ್ಧೆ ವೇಳೆ ಕೆಲ ಹಿರಿಯರ ಹಾಗು ಮಠಾಧೀಶ ಪ್ರಭುಗಳ ಅನುಮತಿ ಪಡೆಯದಿರುವದು ತಪ್ಪಾಗಿದೆ. ಒಟ್ಟಾರೆ ರಾಜಕೀಯ ಕ್ಷೇತ್ರ ನನಗಿಷ್ಟವಿಲ್ಲವೆಂದ ಶ್ರೀಗಳು, ಭಕ್ತರು ಹಾಗು ನನಗೆ ಬೆಂಬಲಿಸುವ ಎಲ್ಲ ಸಮಾಜಗಳ ಹಿರಿಯರಿಗೆ ತಪ್ಪು ಸಂದೇಶ ಹೋಗಬಾರದು. ತಮಗೆ ಆಯಾ ಪಕ್ಷ ಹಾಗು ಪಕ್ಷೇತರ ಮಾರ್ಗಗಳಂತೆ ರಾಜಕೀಯ ಮುನ್ನಡೆಸಲು ಸೂಚಿಸಿದ್ದೇನೆಂದರು.

Advertisement

Udayavani is now on Telegram. Click here to join our channel and stay updated with the latest news.

Next