Advertisement

ಪ್ರತಿ ಮಕರ ಸಂಕ್ರಾಂತಿಗೆ ಹರ ಜಾತ್ರೆ

11:31 AM Sep 09, 2019 | Naveen |

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗರು ಪೀಠದಲ್ಲಿ ಇನ್ನು ಮುಂದೆ ಪ್ರತಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹರ ಜಾತ್ರೆ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

Advertisement

ರೇಣುಕ ಮಂದಿರದಲ್ಲಿ ಭಾನುವಾರ ರಾಜ್ಯವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ 25ನೇ ವರ್ಷದ ಬೆಳ್ಳಿ ಬೆಡಗು, ಜಿಲ್ಲಾ ಪಂಚಮಸಾಲಿ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿ ಮಕರ ಸಂಕ್ರಮಣದಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗರು ಪೀಠದಲ್ಲಿ ಹರ ಜಾತ್ರೆಯಲ್ಲಿ ಎಳ್ಳು ಬೆಲ್ಲ ಹಂಚಿ, ಜೀವನದಲ್ಲಿ ಎಂದೆಂದಿಗೂ ಎಳ್ಳು- ಬೆಲ್ಲದಂತೆ ಒಂದಾಗಿ ಜೀವನ ನಡೆಸುವ ಸಂಕಲ್ಪ ಮಾಡುವ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯರು, ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ನಿಕಟಪೂರ್ವ ಅಧ್ಯಕ್ಷ ಬಸವರಾಜ ದಿಂಡೂರ ಮುಂತಾದವರ ಪ್ರತ್ಯಕ್ಷ, ಅಪ್ರತ್ಯಕ್ಷ ಶ್ರಮದ ಫಲವಾಗಿ ಪೀಠ ಅದ್ಬುತವಾಗಿ ಬೆಳೆಯುತ್ತಿದೆ. ಪೀಠದಲ್ಲಿ ನಿತ್ಯ ದಾಸೋಹ ನಡೆಸಲಾಗುತ್ತಿದೆ. ಪಂಚಮಸಾಲಿ ಪೀಠ ಅನ್ನ, ಅಕ್ಷರ, ಅಧಾತ್ಮ, ಆರೋಗ್ಯ, ಆಶ್ರಯದ ಪಂಚ ದಾಸೋಹ ಪೀಠವಾಗಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗರು ಪೀಠದಲ್ಲಿ ಕ್ಯಾನ್ಸರ್‌ ಗುಣಪಡಿಸಬಲ್ಲ 1 ಸಾವಿರ ಸೀಮಾರೂಬ ಗಿಡ ನೆಡಲಾಗಿದೆ. 140 ವಿವಿಧ ಬಗೆಯ ಮಾವಿನ ಹಣ್ಣಿನ ಮರಗಳನ್ನೆ ನೆಡಲಾಗಿದೆ. ಮುಂದಿನ ವರ್ಷದಿಂದ ಪೀಠಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿಯೇ ಮಾವಿನ ಹಣ್ಣು ನೀಡಲಾಗುವುದು. 3 ಎಕರೆಯಲ್ಲಿ ಸೇವಂತಿಗೆ, 1 ಎಕರೆಯಲ್ಲಿ ಗುಲಾಬಿ ತೋಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಪೀಠವನ್ನು ಹಸಿರು ಪೀಠವನ್ನಾಗಿ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.

ಜೀವನದಲ್ಲಿ ಏನೇ, ಎಂತದ್ದೇ ಸಂದರ್ಭದಲ್ಲೇ ಆಗಲಿ ಆತ್ಮವಿಶ್ವಾಸವನ್ನ ಕಳೆದುಕೊಳ್ಳಬಾರದು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಆತ್ಮವಿಶ್ವಾಸವಾಗಿ ನಿಲ್ಲಲಿದೆ. ಇಂದಿನ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಒಳಗಾದವರು ಸದಾ ಸಮಾಜದೊಂದಿಗೆ ಇರುವಂತಾಗಬೇಕು. ಸಮಾಜವೂ ಸಹ ಎಲ್ಲರ ಸುಖ, ಕಷ್ಟದ ಸಂದರ್ಭದಲ್ಲಿ ಜೊತೆಯಾಗಿಯೇ ನಿಲ್ಲಲಿದೆ. ಹರಿಹರದ ಪೀಠಕ್ಕೆ ಒಮ್ಮೆಯಾದರೂ ಭೇಟಿ ನೀಡುವಂತಾಗಬೇಕು ಎಂದು ತಿಳಿಸಿದರು.

Advertisement

ವಿದ್ಯಾರ್ಥಿಗಳು ಒಂದು ಹಂತಕ್ಕೆ ಬರುವುದರ ಹಿಂದೆ ತಂದೆ-ತಾಯಿ, ಗುರುಗಳು ಮತ್ತು ಸಮಾಜ ಇದೆ ಎಂಬುದನ್ನು ಮರೆಯಬಾರದು. ಜೀವನದಲ್ಲಿ ಬೆಳೆದು ದೊಡ್ಡವರಾಗಿ, ಉನ್ನತ ಸ್ಥಾನಕ್ಕೆ ಏರಿದಾಗ ಯಾವುದೇ ಕಾರಣಕ್ಕೂ ತಂದೆ-ತಾಯಿಯನ್ನ ಮರೆಯಬಾರದು. ಪ್ರತಿಯೊಬ್ಬರು ತಂದೆ-ತಾಯಿ, ಗುರು, ಸಮಾಜಕ್ಕೆ ಕೀರ್ತಿ ತರಬೇಕು. ಹಂಚಿ ತಿನ್ನುವ ಉದಾತ್ತ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೀವನದಲ್ಲಿ ಯಾವುದೂ ಅಸಾಧ್ಯ ಅಲ್ಲ. ದೊಡ್ಡ ಕನಸನ್ನು ಸತತ ಪರಿಶ್ರಮದ ಮೂಲಕ ನನಸು ಮಾಡಬೇಕು. ನನ್ನಿಂದ ಆಗುವುದಿಲ್ಲ… ಎಂಬ ಮನೋಭಾವ ಕಿತ್ತೆಸೆಯಬೇಕು. ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದ ಜೊತೆ ಸಾಗಬೇಕು. ಕೇವಲ ಇಂಜಿನಿಯರಿಂಗ್‌, ವೈದ್ಯಕೀಯದ ಗುರಿ ಇಟ್ಟುಕೊಂಡಿರಬಾರದು. ಸಾಧಿಸುವುದು ಆಗದೇ ಹೋದಾಗ ಖನ್ನತೆ, ಒತ್ತಡಕ್ಕೆ ಒಳಗಾಗಬಾರದು. ಜೀವನದಲ್ಲಿ ಸಾಧನೆಗೆ ಮುಕ್ತ ಆಯ್ಕೆ ಮತ್ತು ಸಹನೆ ಇರಬೇಕು ಎಂದು ತಿಳಿಸಿದರು.

ಕಳೆದ 25 ವರ್ಷದಿಂದ ನಿವೃತ್ತ ಶಿಕ್ಷಕ ಹನುಮನಾಳ ಅವರು ನನ್ನಿಂದ ಆಗುವುದಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನೆಗೆ ಮುಂದಾಗದೇ ಇದ್ದಲ್ಲಿ ಈಗ ನಾವು ಇರುತ್ತಿರಲಿಲ್ಲ. ನೀವು ಇಲ್ಲಿಗೆ ಬಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರಲಿಲ್ಲ. ನಮ್ಮ, ಸಮಾಜದ ಹಿಂದೆ ಇರುವರನ್ನ ಮರೆಯಬಾರದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next