ದಾವಣಗೆರೆ: ಅಂತೂ ಇಂತೂ ಮಂಗಳವಾರ ವಿಸ್ತರಣೆಯಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಭದ್ರ ಕೋಟೆ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಒಲಿದಿಲ್ಲ.
Advertisement
8 ವಿಧಾನಸಭಾ ಕ್ಷೇತ್ರಗಳ ಪೈಕಿ 6, ಜಿಲ್ಲೆಯ 7 ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಶಾಸಕರಿದ್ದರೂ ಈ ಬಾರಿ ಒಬ್ಬರಿಗೂ ಕೂಡ ಸಚಿವರಾಗೋ ಯೋಗ ಕೂಡಿ ಬಂದಿಲ್ಲ. ಆಶ್ಚರ್ಯವೆಂದರೆ ಸಚಿವ ಸ್ಥಾನ ಸಿಗದ ಬಗ್ಗೆ ಬಿಜೆಪಿ ಶಾಸಕರಲ್ಲಿ ಅಸಮಾಧಾನವಿದ್ದರೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲೂ ಆಗುತ್ತಿಲ್ಲ.
Related Articles
Advertisement
ಸಂಪುಟ ವಿಸ್ತರಣೆಯಲ್ಲಿ ತಮ್ಮ ಎಲ್ಲಾ ಕಟ್ಟಾ ಬೆಂಬಲಿಗರಿಗೂ ಸಚಿವ ಸ್ಥಾನ ಕಲ್ಪಿಸುವ ಪರಿಸ್ಥಿತಿಯಲ್ಲಿ ಯಡಿಯೂಪ್ಪನವರಿಲ್ಲ ಎಂಬುದೂ ಸಹ ವಾಸ್ತವ. ಸದ್ಯ 17 ಮಂದಿಗೆ ಮೊದಲ ಕಂತಿನ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಪಕ್ಷ ಸದೃಢವಾಗಲು ತನ್ನದೇ ಆದ ಕಾಣಿಕೆ ನೀಡಿದ ಜಿಲ್ಲೆಯಲ್ಲಿ ಒಬ್ಬರಿಗಾದರೂ ಅವಕಾಶ ನೀಡಿಲ್ಲ ಎಂಬ ಬೇಸರವಂತೂ ಇದೆ. ಆದರೆ, ಆ ಅಸಮಾಧಾನ ಸ್ಫೋಟಗೊಳ್ಳುವ ಮಟ್ಟಕ್ಕೆ ಹೋಗಲಾರದು ಎಂಬ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಎಸ್.ಎ.ರವೀಂದ್ರನಾಥ್ ಮೂಲತಃ ಆರ್.ಆರ್.ಎಸ್.ನ ಕಟ್ಟಾಳು. ಇನ್ನು ಹೊನ್ನಾಳಿಯ ರೇಣುಕಾಚಾರ್ಯ, ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ, ಜಗಳೂರಿನ ಎಸ್. ವಿ.ರಾಮಚಂದ್ರ ಹಾಗೂ ಮಾಯಕೊಂಡದ ಪ್ರೊ| ಎನ್.ಲಿಂಗಣ್ಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪಕ್ಕಾ ಬೆಂಬಲಿಗರು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿ, ಆ ಪಕ್ಷದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು. ಹಾಗಾಗಿ ಬಿಎಸ್‌ವೈ ತಮ್ಮ ಬೆಂಬಲಿಗರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆ ಇದ್ದದ್ದು ಸಹಜ. ಅದರಲ್ಲೂ ಬಿಎಸ್‌ವೈ ಮಾನಸ ಪುತ್ರನೆಂದೇ ಗುರುತಿಸಿಕೊಂಡಿದ್ದ ಎಂ.ಪಿ.ರೇಣುಕಾಚಾರ್ಯ ಸಚಿವರಾಗೋ ಕನಸು ಕಂಡಿದ್ದರು. ಅದು ಸಾಕಾರವಾಗಿಲ್ಲ. ತಮ್ಮ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ತಮಗೆ ಅವಕಾಶ ಕಲ್ಪಿಸದಿದ್ದಕ್ಕೆ ಮೇಲ್ನೋಟಕ್ಕೆ ಬೇಸರ ವ್ಯಕ್ತಪಡಿಸದಿದ್ದರೂ ಒಳಗೊಳಗೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಅಸಮಾಧಾನ ಇದೆ. ಆದರೆ, ಯಾರೂ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲವಷ್ಟೆ.
ಬಿಜೆಪಿ ಸರಳ ಬಹುಮತ ಪಡೆಯದಿದ್ದರೂ ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದಿದೆ. ಅದರಲ್ಲೂ ತಮ್ಮ ನೆಚ್ಚಿನ ನಾಯಕರೇ ಸಿಎಂ ಆಗಿರುವುದರಿಂದ ಇವರ ಸಿಟ್ಟು ಒಂದು ರೀತಿ ಬಾಯಲ್ಲಿರುವ ಬಿಸಿ ತುಪ್ಪದಂತಿದೆ. ತುಪ್ಪ ನುಂಗುವಂತಿಲ್ಲ, ಉಗುಳುವಂತಿಲ್ಲ. ಆದ್ದರಿಂದಲೇ ಜಿಲ್ಲೆಯ ಬಿಜೆಪಿ ಶಾಸಕರೀಗ ಸಚಿವ ಸಂಪುಟದ ಮುಂದಿನ ವಿಸ್ತರಣೆಯತ್ತ ಕಾದು ನೋಡುವಂತಾಗಿದೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನನಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮುಖ್ಯವೇ ಹೊರತು ಸಚಿವ ಸ್ಥಾನವಲ್ಲ ಎಂದು ಮೊದಲೇ ಹೇಳಿದ್ದೆ. ಯಾವತ್ತೂ ಅಧಿಕಾರ ಶಾಶ್ವತವಲ್ಲ ಎಂಬುದು ನನಗೆ ಚನ್ನಾಗಿ ಗೊತ್ತಿದೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸುವೆ.• ಎಂ.ಪಿ.ರೇಣುಕಾಚಾರ್ಯ,
ಹೊನ್ನಾಳಿ ಶಾಸಕ