Advertisement

ಎಲ್ಲೆಡೆ ಈದ್‌ ಸಂಭ್ರಮ

10:01 AM Jun 06, 2019 | Team Udayavani |

ದಾವಣಗೆರೆ: ದಾನ, ಸಹನೆ, ತ್ಯಾಗ, ಉಪವಾಸದ ಮಹತ್ವ ಸಾರುವ ಪವಿತ್ರ ರಂಜಾನ್‌ ಹಬ್ಬವನ್ನು ಮುಸ್ಲಿಂ ಸಮಾಜದವರು ಬುಧವಾರ ಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ಜಠರಾಗ್ನಿ ಮತ್ತು ದೇಹಾಗ್ನಿಯ ಮೇಲೆ ನಿಯಂತ್ರಣ ಸಾಧಿಸುವುದು ರಂಜಾನ್‌ ಉಪವಾಸದ ಪ್ರಮುಖ ಉದ್ದೇಶ. ಅದರಂತೆ ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರವಾದ ರಂಜಾನ್‌ ಅಂಗವಾಗಿ ಉಪವಾಸದ ವ್ರತಾಚರಣೆಯಲ್ಲಿ ತೊಡಗಿದ್ದವರು ಇತರೊಡಗೂಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದರು.

ರಂಜಾನ್‌ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿನ 40ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿನೋಬ ನಗರದ ಹಳೆಯ, ಮಾಗಾನಹಳ್ಳಿ ರಸ್ತೆಯ ಹೊಸ ಖಬರ್‌ಸ್ತಾನ, ಎಸ್‌ಒಜಿ ಕಾಲೋನಿಯ ಮೈದಾನದಲ್ಲಿ ಸಾವಿರಾರು ಜನರು ಜಗತ್ತಿನ ಪ್ರತಿಯೊಬ್ಬರಿಗೆ ಒಳ್ಳೆಯದಾಗಲಿ, ಉತ್ತಮ ಮಳೆ, ಬೆಳೆಯಾಗುವ ಮೂಲಕ ಸಮೃದ್ಧತೆ ನೆಲೆಸಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಬಾಂಧವರಿಗೆ ಈದ್‌ ಉಲ್ ಫಿತರ್‌ ಎಂದರೆ ಮಹಾದಾನಂದ. ಈದ್‌ ಎಂದರೆ ಹಬ್ಬ, ಫಿತರ್‌ ಎಂದರೆ ದಾನ ಎಂದರ್ಥ. ಈದ್‌ ಉಲ್ ಫಿತರ್‌ ಅಂಗವಾಗಿ ಅನೇಕರು ಅನೇಕರಿಗೆ ಹೊಸ ಬಟ್ಟೆ, ಕೈಲಾದಷ್ಟು ಧನ ಸಹಾಯ ಮಾಡುವುದು ಹಬ್ಬದ ಮತ್ತೂಂದು ವಿಶೇಷ.

Advertisement

ರಂಜಾನ್‌ನ ನಮಾಜ್‌ಗೆ ತೆರಳುವ ಮುನ್ನ ಬಡವರು, ಅಶಕ್ತರು, ವಿಕಲಚೇತನರಿಗೆ ಅನೇಕರು ಹೊಸ ಬಟ್ಟೆ, ಹಣದ ದಾನ ಮಾಡಿದರು.

ರಂಜಾನ್‌ನ ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿ ಹಬ್ಬದ ಶುಭ ಕೋರಿದರು. ಎಲ್ಲರಿಗೂ ಒಳಿತು ಬಯಸಿದರು. ಚಿಣ್ಣರು, ವಯೋವೃದ್ಧರಾದಿಯಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರಿಂದ ವಿನೋಬ ನಗರದ ಹಳೆ ಖಬರ್‌ಸ್ಥಾನದಲ್ಲಿ ಜನಸಾಗರವೇ ಕಂಡು ಬಂದಿತು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಹಳೆ ಪಿಬಿ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next