ದಾವಣಗೆರೆ: ರಾಜ್ಯದ ಮನೆಮಾತಾಗಿರುವ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ದುಗ್ಗಮ್ಮನ (ಶ್ರೀ ದುರ್ಗಾಂಬಿಕಾ ದೇವಿ) ಜಾತ್ರೆಗೆ ಭಾನುವಾರದಿಂದ ವಿಧ್ಯುಕ್ತ ಚಾಲನೆ ದೊರೆತಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ ಜೋಯಿಸ್ ಅವರ ನೇತೃತ್ವದಲ್ಲಿ ಪಂಚಾಮೃತಾಭಿಷೇಕ ನೆರವೇರಿಸಿ, ಕಂಕಣಧಾರಣೆ, ಇತರೆ ಧಾರ್ಮಿಕ, ಪೂಜಾ ವಿಧಾನ ನಡೆದವು. ಭಾನುವಾರ ರಾತ್ರಿ ಸಾರು.. ಹಾಕುವ ಮೂಲಕ ಮೂಲಕ ಅಧಿಕೃತವಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ವಜ್ರ, ವೈಡೂರ್ಯ, ಚಿನ್ನದಾಭರಣಗಳ ಅಲಂಕಾರ ಮಾಡಲಾಗಿದೆ. ಬೆಳ್ಳಿ ಪ್ರಭಾವಳಿಯ ಮಧ್ಯದಲ್ಲಿ ಕಂಗೊಳಿಸುತ್ತಿರುವ ದುಗ್ಗಮ್ಮನ ದರ್ಶನಕ್ಕಾಗಿ ಭಕ್ತಾದಿಗಳು ಭಾನುವಾರದಿಂದಲೇ ಸರತಿ ಸಾಲಲ್ಲಿ ನಿಂತು, ಉಡಕ್ಕಿ, ಕಾಣಿಕೆ ನೀಡಿ, ಕೃತಾರ್ಥರಾದರು.
ಈಗಿರುವ ದುರ್ಗಾಂಬಿಕಾ ದೇವಸ್ಥಾನವನ್ನು 1937ರಲ್ಲಿ ಕಟ್ಟಿಸಲು ಪ್ರಾರಂಭಿಸಲಾಯಿತು. 1939ರಲ್ಲಿ ಮುಕ್ತಾಯಗೊಂಡ ದೇವಸ್ಥಾನವನ್ನು ದಾವಣಗೆರೆಯಲ್ಲಿಯೇ ಇದ್ದ ಶ್ರೀ ಜಯದೇವ ಜಗದ್ಗುರುಗಳು ಜಾತ್ರೆ ಉದ್ಘಾಟಿಸಿದರು. 1939ರಿಂದ ಪ್ರಾರಂಭ ಆಗಿರುವ ದುಗ್ಗಮ್ಮನ ಜಾತ್ರೆ ಪ್ರತಿ 2 ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಲೇ ಇದೆ.
ಪ್ರಾರಂಭಿಕ ಹಂತದಲ್ಲಿ ದೇವಸ್ಥಾನದ ಗೌಡರು, ಶ್ಯಾನುಭೋಗರು, ರೈತರು, ಬಣಕಾರರು, ಬಾಬುದಾರರು ಹಾಗೂ ಕೆಲವು ವರ್ತಕರೇ ಮುಂದೆ ನಿಂತು ಜಾತ್ರೆ ನಡೆಸುತ್ತಿದ್ದರು. ಎಲ್ಲರೂ ಅವರಿಗೆ ನಿಗದಿಪಡಿಸಿದ ಕೆಲಸ ಮಾಡುತ್ತಿದ್ದರು. ಈಗಲೂ ಅದೇ ಸಂಪ್ರದಾಯ, ಆಚರಣೆ ಮುಂದುವರೆದಿದೆ. ಈಚೆಗೆ ದೊಡ್ಡ ಮಟ್ಟದಲ್ಲಿ ಜಾತ್ರೆ ನಡೆಯುತ್ತಿದೆ.
ಮಳೆ ದೇವತೆ ಎಂದೇ ಕರೆಯಲ್ಪಡುವ ದಾವಣಗೆರೆ ದುಗ್ಗಮ್ಮ ದಾವಣಗೆರೆ ಮಾತ್ರವಲ್ಲ ಸುತ್ತಮುತ್ತಲಿನ ಜನರನ್ನು ಎಂದೆಂದೂ ಕೈ ಬಿಟ್ಟಿಲ್ಲ. ಮಳೆ ಬರದೇ ಹೋದಲ್ಲಿ ದೇವಸ್ಥಾನದ ಸುತ್ತ ವಾರದ ಸಂತೆ(ಭಾನುವಾರ ದಾವಣಗೆರೆಯಲ್ಲಿ ವಾರದ ಸಂತೆ) ನಡೆಸಿದರೆ ಮಳೆ ಬಂದೇ ಬರುತ್ತದೆ ಎಂಬ ಗಾಢನಂಬಿಕೆ ಇಲ್ಲಿನ ಜನರಲ್ಲಿದೆ. ಅನೇಕ ಬಾರಿ ಭಾನುವಾರದ ಸಂತೆ ನಡೆಸಿದ ಕೆಲ ದಿನಗಳ ಅಂತರದಲ್ಲಿ ಹದವಾದ ಮಳೆಯಾದ ಉದಾಹರಣೆಗಳು ಸಹ ಇವೆ ಎಂದು ಭಕ್ತಾದಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ದುಗ್ಗಮ್ಮ ಮಳೆ ತರಿಸುವ ತಾಯಿ ಎಂದೇ ಜನರು ಆರಾಧಿಸುತ್ತಾರೆ.