Advertisement

ಮಡಿವಾಳ ಸಮಾಜದ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ

06:24 PM May 04, 2020 | Naveen |

ದಾವಣಗೆರೆ: ಕೋವಿಡ್ ವೈರಸ್‌ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವಾರು ಸಂಶಯಾಸ್ಪದರನ್ನು ಲಾಡ್ಜ್ ಮತ್ತು ಕಲ್ಯಾಣಮಂಟಪಗಳಲ್ಲಿ ಕ್ವಾರೆಂಟೈನ್‌ ನಲ್ಲಿರುವ ಬಟ್ಟೆಗಳನ್ನು ಶುಚಿ ಮಾಡಿಕೊಡಲು ಒತ್ತಾಯಿಸುತ್ತಿರುವ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಮಡಿವಾಳ ಸಮಾಜದವರ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಒತ್ತಾಯಿಸಿದೆ.

Advertisement

ಕ್ವಾರಂಟೈನ್‌ನಲ್ಲಿರುವರು ಬಳಸುವ ಬಟ್ಟೆ, ಹೊದಿಕೆ ಇತರೆ ಬಟ್ಟೆಗಳನ್ನು ಶುಚಿಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಬಟ್ಟೆ ಒಗೆಯಲಿಕ್ಕೆ ನೀಡುವುದೇ ಇಲ್ಲ ಎಂದು ಕೆಲವರು ಬೆದರಿಸುತ್ತಿದ್ದಾರೆ. ಬಟ್ಟೆ ಶುಚಿ ಮಾಡುವ ಕಾಯಕವನ್ನೇ ಆಧರಿಸಿ ಜೀವನ ನಡೆಸುತ್ತಿರುವ ಸಮಾಜದವರಿಗೆ ದಾರಿಯೇ ಕಾಣದಂತಾಗಿದೆ. ಜಿಲ್ಲಾಡಳಿತ ಮಡಿವಾಳ ಸಮಾಜದವರ ಆರೋಗ್ಯ ರಕ್ಷಣೆಗೆ ಗಮನ ನೀಡಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ, ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಕಾರ್ಯಾಧ್ಯಕ್ಷ ಆವರಗೆರೆ ಎಚ್‌.ಜಿ. ಉಮೇಶ್‌ ಒತ್ತಾಯಿಸಿದ್ದಾರೆ.

ಯಾವುದೇ ತರಹದ ಬಟ್ಟೆಗಳನ್ನು ಶುಚಿ ಮಾಡದೆ ಮನೆಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್, ಸ್ಯಾನಿಟೈಸರ್‌, ಹ್ಯಾಂಡ್‌ಗ್ಲೌಸ್‌ ಇತರೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಯಾವುದೇ ಸೋಂಕು ಇರದ, ಪರಿಚಯಸ್ಥ ವ್ಯಕ್ತಿಗಳ ಬಟ್ಟೆಗಳನ್ನು ಮಾತ್ರ ಇಸ್ತ್ರಿ ಮಾಡಿಕೊಡಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಹಲವಾರು ವಿಭಾಗದಿಂದ ಬಟ್ಟೆಗಳನ್ನು ಶುಚಿ ಮಾಡಿಕೊಡಲು ಒತ್ತಾಯ ಬರುತ್ತಿದೆ. ಜಿಲ್ಲಾ ಪಂಚಾಯತ್‌ ಮುಂಭಾಗದ ಸರ್ಕ್ನೂಟ್‌ ಹೌಸ್‌ ಪಕ್ಕದಲ್ಲಿನ ಧೋಬಿಘಾಟ್‌ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ಅಲ್ಲಿಯೇ ಕ್ವಾರೆಂಟೈನ್‌ನಲ್ಲಿರುವ ಬಟ್ಟೆಗಳನ್ನು ಶುಚಿ ಮಾಡಲು ಸುಸಜ್ಜಿತ ಯಂತ್ರವನ್ನು (ವಾಷಿಂಗ್‌ ಮಿಷಿನ್‌) ಕೂಡಲೇ ಅಳವಡಿಸಿಕೊಡಬೇಕೆಂದು ತಿಳಿಸಿದ್ದಾರೆ.

ಕೋವಿಡ್  ನಂತಹ ಮಾರಕ ರೋಗದಿಂದ ಅಂತರ ಕಾಯ್ದು ಕೊಳ್ಳಲು ಧೋಬಿಘಾಟ್‌ ಮತ್ತು ನಾಲೆಯಲ್ಲಿ ಮತ್ತು ಹಳ್ಳಗಳಲ್ಲಿ ಮಲಮೂತ್ರ ಮಿಶ್ರಣದ ಆಸ್ಪತ್ರೆ ಮತ್ತು ಲಾಡ್ಜ್ಗಳ ಬಟ್ಟೆಗಳನ್ನು ತೊಳೆಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಹೀಗಿರುವಾಗ ಕ್ವಾರೆಂಟೈನ್‌ನಲ್ಲಿರುವರ ಬಟ್ಟೆಗಳ ಶುಚಿ ಮಾಡಿಕೊಡುವುದು ಆರೋಗ್ಯದ ವಿಚಾರದಿಂದ ಕಷ್ಟ ಸಾಧ್ಯ ಎಂದು ತಿಳಿಸಿದ್ದಾರೆ.

ದಾವಣಗೆರೆ ನಗರ ಮತ್ತು ಜಿಲ್ಲಾದ್ಯಂತ ಸುಮಾರು 15 ಸಾವಿರಕ್ಕೂ ಹೆಚ್ಚು ಮಡಿವಾಳ ಸಮಾಜದವರು ಸಾಂಪ್ರದಾಯಿಕ ವೃತ್ತಿಯಾದ ಮಡಿ ಮಾಡುವ ಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೋವಿಡ್ ಮಹಾಮಾರಿ, ಲಾಕ್‌ ಡೌನ್‌ ನಡುವೆ ದಿನನಿತ್ಯದ ಬದುಕು ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಜೀವನ ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ತುರ್ತಾಗಿ ದಿನನಿತ್ಯ ಬಳಕೆಯ ಆಹಾರದ ಪದಾರ್ಥದ ಕಿಟ್‌ ವಿತರಣೆ ಮಾಡಬೇಕು. ಅಲ್ಲದೆ ಸರ್ಕಾರದಿಂದ ಹಾಗು ದಾನಿಗಳಿಂದ ಸಂಗ್ರಹಿಸುವ ದೇಣಿಗೆಯಲ್ಲಿ ಮಡಿವಾಳ
ಸಮಾಜದ ಬಡ ಕುಟುಂಬಗಳಿಗೆ ಹೆಚ್ಚಿನ ಧನಸಹಾಯ ಮಾಡಬೇಕು ಎಂದು ಸಂಘದ ಮಾಧ್ಯಮ ಸಲಹೆಗಾರ ಎಂ.ವೈ. ಸತೀಶ್‌, ಮಡಿಕಟ್ಟೆ ಸಮಿತಿ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ. ರವಿ, ಡೈಮಂಡ್‌ ಮಾಲತೇಶ್‌, ಗುತ್ಯೆಪ್ಪ, ಯುವಘಟಕದ ಅಧ್ಯಕ್ಷ ಕಿಶೋರ್‌ಕುಮಾರ್‌, ಕಾರ್ಯದರ್ಶಿ ಎನ್‌. ಪ್ರಮೋದ್‌ಕುಮಾರ್‌ ಇತರರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next