Advertisement

ಗಡಿ ಕಾಯುವ ಸೈನಿಕರೇ ನಿಜವಾದ ಹೀರೋಗಳು

04:57 PM Jul 08, 2019 | Naveen |

ದಾವಣಗೆರೆ: ದೇಶದ ರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡಿರುವ ಸೈನಿಕರೇ ನಿಜವಾದ ಹೀರೋಗಳು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ.

Advertisement

ಭಾನುವಾರ ಶಿವಯೋಗಾಶ್ರಮದಲ್ಲಿ ದಾವಣಗೆರೆ ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಬೆಳ್ಳಿ ಹಬ್ಬ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತೆ ನೋಡಿಕೊಳ್ಳುವ ಸೈನಿಕರೇ ನಿಜವಾದ ಹೀರೋಗಳು ಎಂದರು.

ಸಿನಿಮಾಗಳಲ್ಲಿ ನಟಿಸುವ ನಟರನ್ನು ಹೀರೋಗಳೆಂದು ಭಾವಿಸಲಾಗುತ್ತದೆ.ಆದರೆ, ಅವರು ಕೇವಲ ಮೂರು ತಾಸಿನ ಚಿತ್ರದ ಪರದೆಗೆ ಮಾತ್ರ ಸೀಮಿತರು. ದೇಶದಲ್ಲಿ ಇಂದು ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದು ಸೈನಿಕರಿಂದ ಮಾತ್ರ. ಸರ್ವಸ್ವವನ್ನೂ ಬಿಟ್ಟು, ತ್ಯಾಗ ಮನೋಭಾವನೆಯೊಂದಿಗೆ ದೇಶದ ಗಡಿ ಕಾಯುವ ಸೈನಿಕರು ನಿಜವಾದ ಹೀರೋಗಳು ಎಂದು ತಿಳಿಸಿದರು.

ಸೈನಿಕರ ಜೊತೆಗೆ ರೈತರ ಹಾಗೂ ಶಿಕ್ಷಕರ ಸೇವೆಯೂ ಸ್ಮರಣೀಯವಾಗಿದೆ. ಸೈನಿಕರು, ರೈತರು, ಶಿಕ್ಷಕರು ದೇಶದ ರಕ್ಷಕರಾಗಿದ್ದಾರೆ. ಅನ್ನವಿಲ್ಲದೆ, ಶಿಕ್ಷಣವಿಲ್ಲದೆ, ದೇಶದ ರಕ್ಷಣೆ ಇಲ್ಲದೆ ನೆಮ್ಮದಿಯಿಂದ ಬದುಕುವುದು ಅಸಾಧ್ಯ. ಶಿಕ್ಷಕರು, ರೈತರು ಮತ್ತು ಸೈನಿಕರನ್ನು ನಾವು ನಮ್ಮ ಜೀವಮಾನದುದ್ದಕ್ಕೂ ಗೌರವಿಸಲೇಬೇಕು. ಸೈ ನಿಕರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಮನುಷ್ಯನ ಶಾಂತಿ, ನೆಮ್ಮದಿಗೆ ಸತ್ಸಂಗವೂ ಅಗತ್ಯವಾಗಿವೆ. ಸತ್ಸಂಗದಿಂದ ಒಳ್ಳೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ತೋರಿಸಿದ್ದೇ ತೋರಿಸುವ, ಹೇಳಿದ್ದೇ ಹೇಳುವ, ನೋಡಿದ್ದೇ ನೋಡುವ ಟಿವಿಯಲ್ಲಿನ ಧಾರವಾಹಿಗಳಿಂದ ಕೆಲ ಸಮಯ ದೂರವಿದ್ದು, ಸತ್ಸಂಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Advertisement

ವಿರಕ್ತಮಠದಲ್ಲಿ ಕಳೆದ 109 ವರ್ಷಗಳಿಂದ ಶ್ರಾವಣ ಮಾಸದ ಪ್ರವಚನ ನಡೆದುಕೊಂಡು ಬರುತ್ತಿದೆ. ಆ. 2ರಿಂದ 31ರವರೆಗೆ ಪ್ರತಿದಿನ ಸಂಜೆ ಶರಣರ ವಚನಗಳ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಮಾಜಿ ಸೈನಿಕ ವಿವಿಧೋದ್ದೇಶ ಸಂಘದ ಅಧ್ಯಕ್ಷ ಸತ್ಯಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ, ಸಂಘದ ಉಪಾಧ್ಯಕ್ಷ ಮನೋಹರ ಮಹೇಂದ್ರಪ್ಪ, ಕಾರ್ಯದರ್ಶಿ ಶಶಿಕಾಂತ್‌ ಇತರರು ಇದ್ದರು.

ಅಭಿರಾಮ್‌ ಪ್ರಾರ್ಥಿಸಿದರು. ಪ್ರತಿಕ್ಷಾ, ಅಂಜಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ನಿವೃತ್ತ ಯೋಧರಾದ ಶೇಖರಪ್ಪ, ಈಶಪ್ರಭು ಅವರನ್ನು ಸನ್ಮಾನಿಸಲಾಯಿತು. ಉಚಿತ ರಕ್ತ ತಪಾಸಣೆ ಶಿಬಿರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next