Advertisement

ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಸಹಕರಿಸಿ

11:27 AM Apr 20, 2020 | Naveen |

ದಾವಣಗೆರೆ: ದಾವಣಗೆರೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಮನವಿ ಮಾಡಿದ್ದಾರೆ.

Advertisement

ಭಾನುವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್‌ ವತಿಯಿಂದ ವಾದ್ಯಗೋಷ್ಠಿ ಕಲಾವಿದರು, ಆಟೋರಿಕ್ಷಾ ಚಾಲಕರಿಗೆ ಆಹಾರದ ಕಿಟ್‌ ವಿತರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್ ವೈರಸ್‌ ಹರಡದಂತೆ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ ಅನ್ನು ಸರಿಯಾಗಿ ಪಾಲಿಸುವ ಮೂಲಕ ದಾವಣಗೆರೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಶೀಘ್ರದಲ್ಲೇ ದಾವಣಗೆರೆ ಕೋವಿಡ್ ಮುಕ್ತ ಜಿಲ್ಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ಮೂವರಲ್ಲಿ ಕೋವಿಡ್ ಪಾಸಿಟಿವ್‌ ಕಂಡು ಬಂದಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಆರೋಗ್ಯಾಧಿಕಾರಿಗಳು ಒಳಗೊಂಡಂತೆ ಎಲ್ಲರ ಪರಿಶ್ರಮದಿಂದ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ನಂತರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ವರದಿಯಾಗಿಲ್ಲ ಎನ್ನುವುದು ನಿಜಕ್ಕೂ ಸಮಾಧಾನ ಮತ್ತು ಸಂತೋಷದ ವಿಷಯ. ದಾವಣಗೆರೆ ಜಿಲ್ಲೆ 2-3 ದಿನಗಳಲ್ಲಿ ಹಸಿರು ವಲಯ ಪಟ್ಟಿಗೆ ಸೇರ್ಪಡೆ ಆಗಬಹುದು ಎಂದರು.

ಕೋವಿಡ್ ವೈರಸ್‌ ಹರಡುವಿಕೆ ತಡೆಗಟ್ಟಲು ಜಾರಿಗೊಳಿಸಿರುವ ಲಾಕ್‌ಡೌನ್‌ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಪರಿಶ್ರಮ ಪಡುತ್ತಿದ್ದಾರೆ. ಸಾರ್ವಜನಿಕರು ಅವರಿಗೆ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು. ಅವಶ್ಯಕ ವಸ್ತುಗಳ ಖರೀದಿಗೆ ಬಂದಾಗಲೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಹೇಳಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೊಂದರೆಯಲ್ಲಿದ್ದವರಿಗೆ ನಮ್ಮ ಪಕ್ಷದ ಕಾರ್ಯಕರ್ತರು ಅನೇಕ ಕಡೆ ಆಹಾರದ ಕಿಟ್‌ ಒಳಗೊಂಡಂತೆ ಅಗತ್ಯ ವಸ್ತುಗಳ ವಿತರಣೆ ಮಾಡುತ್ತಿದ್ದಾರೆ. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್‌ ವಾದ್ಯಗೋಷ್ಠಿ ಕಲಾವಿದರು, ಆಟೋರಿಕ್ಷಾ ಚಾಲಕರಿಗೆ 200 ಆಹಾರದ ಕಿಟ್‌ ವಿತರಣೆ ಮಾಡಿದ್ದಾರೆ. ಸ್ಫೂರ್ತಿ ಸೇವಾ ಸಂಘದಿಂದ ದಾವಣಗೆರೆಯ ಅನೇಕ ಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಹಲವಾರು ಸಂಘ-ಸಂಸ್ಥೆಗಳು ಸಹ ಜನರ ನೆರವು ನೀಡುತ್ತಿವೆ. ಜಿಲ್ಲೆಯಲ್ಲಿನ 3.89 ಲಕ್ಷದಷ್ಟು ಬಿಪಿಎಲ್‌ ಕುಟುಂಬಗಳಿಗೆ 2 ತಿಂಗಳ ಪಡಿತರ ನೀಡಲಾಗುತ್ತಿದೆ. ವಲಸೆ ಕಾರ್ಮಿಕರು ಒಳಗೊಂಡಂತೆ ಎಲ್ಲರಿಗೂ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಬೇಕಾದರೂ ನೀಡಲಾಗುವುದು. ಜನರು ಆತುರ ಮಾಡಬಾರದು ಎಂದರು.

Advertisement

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್‌ ಮಾತನಾಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೊಂದರೆಯಲ್ಲಿರುವರಿಗೆ ಪ್ರತಿ ನಿತ್ಯ ಆಹಾರದ ಕಿಟ್‌ ನೀಡಲಾಗುತ್ತಿದೆ. ಈಗ 200ಕ್ಕೂ ಹೆಚ್ಚು ವಾದ್ಯಗೋಷ್ಠಿ ಕಲಾವಿದರು, ಆಟೋರಿಕ್ಷಾ ಚಾಲಕರಿಗೆ ಆಹಾರದ ಕಿಟ್‌ ವಿತರಣೆ ಮಾಡಲಾಗಿದೆ. ಸೋಮವಾರವೂ ಈ ಕಾರ್ಯ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ, ಬಾಡದ ಆನಂದರಾಜ್‌, ಎಚ್‌.ಆರ್‌. ಲಿಂಗರಾಜ್‌, ಅಣಬೇರು ಜೀವನಮೂರ್ತಿ, ಸತ್ಯನಾರಾಯಣಮೂರ್ತಿ, ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಎಸ್ಪಿ ಹನುಮಂತರಾಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next