ದಾವಣಗೆರೆ: ಬೆಳೆದ ಬೆಳೆಗೆ ಸಿಗದ ದರ, ಅತಿವೃಷ್ಟಿ- ಅನಾವೃಷ್ಟಿ ಸಮಸ್ಯೆ, ಸೂಕ್ತ ಮಾರುಕಟ್ಟೆ ಕೊರತೆ… ಹೀಗೆ ಪ್ರತಿ ಬಾರಿ ರೈತರು ಬೆಳೆ ಕೈಗೆ ಸಿಕ್ಕಾಗ ಒಂದಲ್ಲ ಒಂದು ರೀತಿ ಸಂಕಷ್ಟಕ್ಕೀಡಾಗುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲ ರೈತರು ಸ್ವಂತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ರಾಣೆಬೆನ್ನೂರು ತಾಲೂಕು ಬಿಲ್ಲಹಳ್ಳಿ ಗ್ರಾಮದ ರೈತರಾದ ಕರಿಬಸಪ್ಪ, ಶಂಕ್ರಪ್ಪ ಸ್ವಂತ ಮಾರ್ಕೆಟ್ ವ್ಯವಸ್ಥೆ ಕಲ್ಪಿಸಿಕೊಂಡ ಸಹೋದರರು. ಇವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದು, ಹಣ್ಣುಗಳನ್ನು ಟ್ರ್ಯಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಬಂದು ದಾವಣಗೆರೆಯ ಶಿರಮಗೊಂಡನಹಳ್ಳಿ ರಸ್ತ ಬದಿಯ ಮರಗಿಡಗಳ ಕೆಳಗಡೆ ನೇರವಾಗಿ ಜನರಿಗೆ ಮಾರಾಟ ಮಾಡುವ ಮೂಲಕ ನೆಮ್ಮದಿ ಕಂಡುಕೊಂಡಿದ್ದಾರೆ.
ಮಧ್ಯವರ್ತಿಗಳ ಹಾವಳಿಯಿಲ್ಲ: ಸ್ವಂತ ಟ್ರ್ಯಾಕ್ಟರ್‌ನಲ್ಲಿ ಈ ರೀತಿ ಹಣ್ಣುಗಳನ್ನು ತಂದು ಜನರಿಗೆ ನಾವೇ ನೇರವಾಗಿ ಮಾರಾಟ ಮಾಡುವುದರಿಂದ ಅಲ್ಪಸ್ವಲ್ಪ ಹಣ ಉಳಿತಾಯ ಆಗುವ ಜೊತೆಗೆ ಒಂದಿಷ್ಟು ಲಾಭ ನಿರೀಕ್ಷಿಸಬಹುದಾಗಿದೆ. ಅದನ್ನು ಬಿಟ್ಟು ಮಾರುಕಟ್ಟೆಗೆ ಒಯ್ದರೆ ಮಧ್ಯವರ್ತಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಗುತ್ತದೆ. ನಮ್ಮ ತೋಟಕ್ಕೆ ನೇರವಾಗಿ ಖರೀದಿದಾರರು ಬಂದರೂ ಅತ್ಯಲ್ಪ ಬೆಲೆಗೆ ಕೇಳುತ್ತಾರೆ ಎನ್ನುತ್ತಾರೆ ರೈತ ಕರಿಯಪ್ಪ.
ಬೆಳೆಯ ಮಾಹಿತಿ: ಪಪ್ಪಾಯಿ ವರ್ಷದ ಬೆಳೆಯಾಗಿದ್ದು, ಮೂರೂವರೆ ಎಕರೆಯಲ್ಲಿ ಪಪ್ಪಾಯಿ ನಾಟಿ ಮಾಡಿದ್ದೇವೆ. ನಾಟಿ ಮಾಡಿದ 8 ತಿಂಗಳಲ್ಲಿ ಇದೀಗ ಮೊದಲ ಬೆಳೆ ಕೈಗೆ ಸಿಗುತ್ತಿದೆ. ಇದುವರೆಗೆ ಒಟ್ಟು 1ಲಕ್ಷ ರೂಪಾಯಿ ಖರ್ಚಾಗಿದ್ದು, ಈಗಾಗಲೇ 2 ದಿನದಲ್ಲಿ ಎರಡೂವರೆ ಟನ್ ಸಾಮರ್ಥ್ಯದ 1 ಲೋಡ್‌ನಂತೆ ಮೂರು ಟ್ರ್ಯಾಕ್ಟರ್ ಲೋಡ್ ಪಪ್ಪಾಯಿ ಮಾರಾಟ ಮಾಡಿದ್ದೇವೆ. ಕೆ.ಜಿಗೂ ಅಧಿಕ ದೊಡ್ಡ ಹಣ್ಣನ್ನು ಕೇವಲ 10 ರೂ. ಗೆ ಮಾರಾಟ ಮಾಡುತ್ತಿದ್ದೇವೆ. ಕೊಟ್ಟಿಗೆ ಗೊಬ್ಬರ ನೀಡಿ ಆರೈಕೆ ಮಾಡಿದರೆ ಇನ್ನೂ 14 ತಿಂಗಳವರೆಗೆ ಉತ್ತಮ ಬೆಳೆ ಬರುತ್ತದೆ. ಆಗ ಲಾಭವೂ ದೊರೆಯುತ್ತದೆ ಎನ್ನುತ್ತಾರೆ ರೈತ ಶಂಕ್ರಪ್ಪ.
ಕೆಮಿಕಲ್ ಇಲ್ಲ: ಈ ರೈತರು ತರುವ ಹಣ್ಣುಗಳಿಗೆ ಯಾವುದೇ ರೀತಿಯ ರಾಸಾಯನಿಕ ಬಳಸುವುದಿಲ್ಲ. ಸ್ವಲ್ಪ ದ್ವಾರ್‌ಗಾಯಿ ಇದ್ದಾಗ ಹಣ್ಣುಗಳನ್ನು ಹರಿದು ಮಾರಾಟಕ್ಕೆ ತರುತ್ತಾರೆ. ಮಾರಾಟ ಮಾಡುವ ಸ್ಥಳಕ್ಕೆ ತರುವಷ್ಟರಲ್ಲಿ ಹಣ್ಣುಗಳು ಮಾಗಿ ತಿನ್ನಲು ರುಚಿಕರವಾಗಿರುತ್ತವೆ. ರಸ್ತೆ ಬದಿ ಸಂಚರಿಸುವ ಜನರು ರೈತರೇ ಮಾರಾಟ ಮಾಡುವುದನ್ನು ಗಮನಿಸಿ ಹೆಚ್ಚೆಚ್ಚು ಹಣ್ಣುಗಳನ್ನು ಕೊಂಡೊಯ್ಯುತ್ತಾರೆ.
ಜನರು ಜಾಗ್ರತೆ ವಹಿಸಲಿ: ವಾಹನಗಳು ವೇಗವಾಗಿ ಸಂಚರಿಸುವುದರಿಂದ ರಸ್ತೆ ಬದಿ ಹಣ್ಣು ಕೊಳ್ಳಲು ಬರುವ ಜನರು ತಮ್ಮ ವಾಹನಗಳನ್ನು ಒಂದು ಕಡೆ ವ್ಯವಸ್ಥಿತವಾಗಿ ನಿಲ್ಲಿಸಿ ರಸ್ತೆ ದಾಟುವಾಗ ಜಾಗ್ರತೆ ವಹಿಸಬೇಕು. ಇದರಿಂದ ಹೆಚ್ಚಿನ ಅನಾಹುತ ತಪ್ಪುವ ಜೊತೆಗೆ ಎಲ್ಲರೂ ಕ್ಷೇಮವಾಗಿರಬಹುದು ಎನ್ನುತ್ತಾರೆ ಈ ರೈತರು.
ಪರ್ಯಾಯ ಮಾರುಕಟ್ಟೆ ರೈತರಿಗೆ ಅನುಕೂಲ
ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ಲಾಭದ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ದಲ್ಲಾಳಿಗಳ ಹಾವಳಿಯಿಂದ ಮಾರುಕಟ್ಟೆಗಳಲ್ಲಿ ಬಾಯಿಗೆ ಬಂದ ದರದಲ್ಲಿ ಹಣ್ಣುಗಳು ಬಿಕರಿಯಾಗುತ್ತವೆ. ಇದರಿಂದ ಸಾಕಷ್ಟು ತೊಂದರೆ ಆಗುವುದರಿಂದ ಈ ರೀತಿ ಸ್ವ-ಮಾರುಕಟ್ಟೆಯ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಪಪ್ಪಾಯಿ ಬೆಳೆಗಾರ ಕರಿಯಪ್ಪ ತಿಳಿಸಿದರು.