Advertisement

ಧರ್ಮ ಪರಿಪಾಲನೆಯಿಂದ ನೆಮ್ಮದಿ

09:56 AM Jul 29, 2019 | Team Udayavani |

ದಾವಣಗೆರೆ: ಪ್ರತಿಯೊಬ್ಬರ ಜೀವನ ನೆಮ್ಮದಿಗೆ ಧರ್ಮ ಪರಿಪಾಲನೆ ಅತಿ ಮುಖ್ಯಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

Advertisement

ರೇಣುಕ ಮಂದಿರದಲ್ಲಿ 24ನೇ ವರ್ಷದ ಅಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಂಗಮ 2ನೇ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಹಣ ಗಳಿಕೆ ಶಾಶ್ವತವಲ್ಲ. ಗುಣ ಗಳಿಕೆ ನಿತ್ಯ ಶಾಶ್ವತ. ಹಣ ಸಂಪತ್ತಿಗಿಂತ ಗುಣ ಸಂಪತ್ತಿನ ಬೆಲೆ ದೊಡ್ಡದು. ಜೀವನ ನೆಮ್ಮದಿಗೆ ಧರ್ಮ ಪರಿಪಾಲನೆ ಮುಖ್ಯ ಎಂದು ತಿಳಿಸಿದರು.

ಅಸ್ತ್ರಗಳು ವೈರಿಗಳನ್ನು ನಾಶಗೊಳಿಸಬಹುದು. ಆದರೆ, ಯಾವುದೇ ಶಸ್ತ್ರ ಅಸ್ತ್ರ ಇಲ್ಲದೆ ಮನಸ್ಸನ್ನು ಶಿವಜ್ಞಾನದ ಬೋಧನೆಯೊಂದಿಗೆ ಪರಿಶುದ್ಧಗೊಳಿಸುವ ಶಕ್ತಿ ಗುರುವಿಗೆ ಇದೆ. ಜೀವನದ ಉನ್ನತಿಗೆ ಗುರು ಮಾರ್ಗದರ್ಶನ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಧರ್ಮ, ಸಂಸ್ಕೃತಿ, ಸದ್ಗುಣ ಮತ್ತು ಸಂಸ್ಕಾರ ನಾಡಿನ ನಿಜವಾದ ಆಸ್ತಿ. ಮನದ ಅಜ್ಞಾನ ಪರಿಹರಿಸಿ, ಶಿವಜ್ಞಾನದ ಬೆಳಕು ಬೀರಿ ಬದುಕನ್ನು ಪೂರ್ಣಸತ್ಪಥದತ್ತ ಕರೆದೊಯ್ಯುವಾತನೇ ನಿಜವಾದ ಗುರುನಾಥ ಎಂಬುದನ್ನು ಮರೆಯುವಂತಿಲ್ಲ . ಹಾಗಾಗಿ ಗುರುವನ್ನು ಯಾವ ಕಾರಣಕ್ಕೂ ಮರೆಯಬಾರದು ಎಂದು ತಿಳಿಸಿದರು.

ಪ್ರತಿಯೊಬ್ಬರ ಬಾಳಿಗೆ ಬೆಳಕು ನೀಡಬಲ್ಲ ಗುರು ಪರಶಿವನ ಸಾಕಾರ ರೂಪ ಎಂದು ರೇಣುಕ ಗೀತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವಪಥವನರಿಯಲು ಗುರು ತೋರಿದ ದಾರಿ ಮೊದಲು ಎಂದು ಬಸವಣ್ಣನವರು ಹೇಳಿದ್ದನ್ನು ಮರೆಯಲಾಗದು ಎಂದು ಜಗದ್ಗುರುಗಳು ತಿಳಿಸಿದರು.

Advertisement

ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿಲ್ಲದೇ ಅರಿವು ಪ್ರಾಪ್ತವಾಗದು. ಮಾಂಸಪಿಂಡ ಶರೀರವನ್ನು ಕಳೆದು ಮಂತ್ರಪಿಂಡ ಶರೀರವನ್ನಾಗಿ ಮಾಡುವ ಶಕ್ತಿ ಗುರುವಿನಲ್ಲಿದೆ. ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಗುರುವಿನ ಹಿರಿಮೆ ಅಪಾರವಾಗಿದೆ ಎಂದರು.

ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಜರುಗಲಿರುವ 28ನೇ ವರ್ಷದ ಶ್ರಾವಣ ಪೂಜಾನುಷ್ಠಾನ ಅಮಂತ್ರಣ ಪತ್ರಿಕೆಯನ್ನು ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಬಿಡುಗಡೆಗೊಳಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ, ಕೆ.ಬಿ. ಶಂಕರನಾರಾಯಣ, ದೇವರಮನೆ ಶಿವಕುಮಾರ್‌ ಇತರರು ಇದ್ದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪು ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಭಕ್ತಿಗೀತೆ, ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಶಿವನಗೌಡ ಪಾಟೀಲ್ ಸ್ವಾಗತಿಸಿದರು. ಎಸ್‌. ಮಲ್ಲಯ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next