Advertisement

ಮನಸ್ಸನ್ನು ಭಗವಂತನಿಗೆ ಅರ್ಪಿಸಿ: ಶ್ರೀ

12:56 PM Jul 31, 2019 | Team Udayavani |

ದಾವಣಗೆರೆ: ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರು ತಿಳಿಸಿದ್ದಾರೆ.

Advertisement

ರೇಣುಕ ಮಂದಿರದಲ್ಲಿ ನಡೆಯುತ್ತಿರುವ 24ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಂಗಮ 4ನೇ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಮುನ್ನಡೆದಾಗ ಜೀವನ ಸಾರ್ಥಕಗೊಳ್ಳುವುದು ಎಂದು ತಿಳಿಸಿದರು.

ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಏನೆಲ್ಲ ಅಮೂಲ್ಯ ಕೊಡುಗೆಗಳನ್ನು ಕೊಟ್ಟಿದ್ದಾರೆ. ಎಲ್ಲೆಡೆಯಲ್ಲಿ ತುಂಬಿರುವ ಪರಮಾತ್ಮ ನಮ್ಮ ಅಂತರಂಗದ ಮನೆಯಲ್ಲಿ ನೆಲೆಗೊಂಡಿದ್ದಾನೆ ಎಂದು ತಿಳಿಸಿದರು.

ಚಂದ್ರಕಾಂತ ಶಿಲೆಯಲ್ಲಿ ನೀರು, ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ, ಬೀಜದಲ್ಲಿ ಅಂಕುರ, ಎಳ್ಳಿನಲ್ಲಿ ಎಣ್ಣೆ, ಶರೀರದಲ್ಲಿ ಬೆಂಕಿ, ಹಾಲಿನಲ್ಲಿ ತುಪ್ಪ, ಸಹಜವಾಗಿ ಇರುವಂತೆ ಜೀವಾತ್ಮನಲ್ಲಿ ಪರಮಾತ್ಮ ನೆಲೆಗೊಂಡಿದ್ದಾನೆ. ದೇವರು ಎಲ್ಲರಲ್ಲಿಯೂ ಇದ್ದಾನೆ. ಆದರೆ, ಎಲ್ಲರೂ ದೇವರಲ್ಲಿ ಇಲ್ಲದ್ದಕ್ಕೆ ಸೋಲು ಅನುಭವಿಸುವಂತಾಗಿದೆ ಎಂದರು.

ದೇವನೊಬ್ಬ ನಾಮ ಹಲವು… ಎಂಬ ಪರಮ ಸತ್ಯ ಅರಿತಾಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತೀಯ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

Advertisement

ವೀರಶೈವ ಧರ್ಮದಲ್ಲಿ ಜೀವಾತ್ಮ ಪರಮಾತ್ಮನಾಗಲು ಭವಿ ಭಕ್ತನಾಗಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದನ್ನು ನಾವೆಲ್ಲಾ ಕಾಣಬಹುದು ಎಂದು ತಿಳಿಸಿದರು.

ಮಳಲಿಮಠದ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿ ಪರಮಾತ್ಮನನ್ನು ಇಷ್ಟಲಿಂಗ ಸ್ವರೂಪದಲ್ಲಿ ಪೂಜಿಸಿ ಕೃತಾರ್ಥರಾಗಲು ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇಷ್ಟಲಿಂಗಾರ್ಚನೆ ಮಾಡಿದರೆ ಸಕಲ ದೇವರನ್ನು ಪೂಜಿಸಿದಂತೆ. ಅಷ್ಟೇ ಅಲ್ಲದೇ ನಮ್ಮ ಅನಿಷ್ಠ ದೂರವಾಗಿ ಬದುಕು ಉಜ್ವಲಗೊಳ್ಳುತ್ತದೆ ಎಂದು ತಿಳಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್‌. ಬಸಪ್ಪ, ಡಾ| ಚಂದ್ರಶೇಖರ್‌ ಸುಂಕದ್‌, ದೇವರಮನೆ ಶಿವಕುಮಾರ್‌, ಟಿಂಕರ್‌ ಮಂಜಣ್ಣ ಇತರರು ಇದ್ದರು.

ಗದಗದ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಭಕ್ತಿಗೀತೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಸೌಮ್ಯ ಬಸವರಾಜ್‌ ಸ್ವಾಗತಿಸಿದರು. ವೀರಣ್ಣ ಶೆಟ್ಟರ್‌ ನಿರೂಪಿಸಿದರು. ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಹಾಗೂ ಇತರರಿಗೆ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next