Advertisement
ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2016ರ ಪರಿಣಾಮಕಾರಿ ಅನುಷ್ಠಾನ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಶನಿವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ಅಂಗವಿಕಲರಿಗೆ ಒಂದಿಷ್ಟು ಪಿಂಚಣಿ, ವಿದ್ಯಾರ್ಥಿ ವೇತನ, ಜೊತೆಗೆ ಸ್ವಲ್ಪ ಅನುಕಂಪ ತೋರಿಸಿದರೆ ಸಾಕು ಎಂಬ ಮನೋಭಾವ ಇತ್ತು. ಆದರೆ , ದೃಷ್ಟಿಕೋನ ಇಂದು ಬದಲಾಗಬೇಕಿದೆ ಎಂದರು.
Related Articles
Advertisement
5-6 ವರ್ಷಗಳ ಹಿಂದೆ ದಾವಣಗೆರೆಯ ಶ್ರವಣದೋಷದ ಮಗು ರಚಿಸಿದ ಹುಲಿಯ ಚಿತ್ರವನ್ನು ಅಂಚೆ ಇಲಾಖೆಯು ಸ್ಟಾ ್ಯಂಪ್ ಆಗಿ ಬಿಡುಗಡೆಗೊಳಿಸಿದೆ. ಈ ಬಾಲಕ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದೊಂದು ರಾಷ್ಟ್ರಮಟ್ಟದ ಸಾಧನೆಯಾಗಿದ್ದು, ಇಂತಹ ಪ್ರತಿಭೆ ಎಲ್ಲ ಅಂಗವಿಕಲ ಮಕ್ಕಳಲ್ಲೂ ಇದೆ. ಅದನ್ನು ನಾವು ಗುರುತಿಸಿ, ಪ್ರೋತ್ಸಾಹಿಸಿದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪ್ರತಿ ಅಂಗವಿಕಲ ವ್ಯಕ್ತಿ /ಮಗುವಿನ ಅವಶ್ಯಕತೆಗೆ ಪೂರಕವಾದ ಯೋಜನೆ ರೂಪಿಸಬೇಕು. ಎಲ್ಲರಿಗೂ ಒಂದೇ ರೀತಿಯ ವ್ಹೀಲ್ಚೇರ್, ಪರಿಕರ ನೀಡಿದರೆ ಆಗದು. ಜಿಲ್ಲೆಯಲ್ಲಿ ನೀಡಲಾದ ಯೋಜನೆಗಳ ಪುನರ್ ರೂಪಿಸಲು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಮುಖವಾಗಿ ಅಂಕಿ-ಅಂಶಗಳ ಸುಧಾರಣೆ ಆಗಬೇಕಿದೆ. ಅವು ನಿಖರವಾಗಿದ್ದಲ್ಲಿ ಸೂಕ್ತ ಯೋಜನೆ ಸಿದ್ಧಪಡಿಸಲು ಸಹಕಾರಿಯಾಗಲಿದೆ ಎಂದು ಆಯುಕ್ತರು ಹೇಳಿದರು.
ಅಂಗವಿಕಲ ವ್ಯಕ್ತಿಗಳ ಅವಶ್ಯಕತೆಗನುಗುಣವಾದ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚಿಂತನೆ ಆಗಬೇಕು. ಅಂಗವಿಕಲರ ಪುನರ್ವಸತಿಗಾಗಿ ದೇವರಾಜ ಅರಸು ಬಡಾವಣೆಯಲ್ಲಿ ಸಂಯುಕ್ತ ಪ್ರಾದೇಶಿಕ ಕೇಂದ್ರ (ಕಾಂಪೋಸಿಟ್ ರೀಜನಲ್ ಸೆಂಟರ್) ಇದೆ. ಅಲ್ಲಿ 19 ಅನುಭವಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಕೇಂದ್ರದಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸಲು ನಾಗನೂರಿನಲ್ಲಿ 7.5 ಎಕರೆ ಜಾಗ ಮಂಜೂರಾಗಿದೆ. ಕೇಂದ್ರದಲ್ಲಿ ಸಕಲ ಸೌಲಭ್ಯ ಒದಗಿಸಲು 60 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಆ ಕೇಂದ್ರದಿಂದ ಜಿಲ್ಲೆಗೆ ಮಾತ್ರವಲ್ಲ, ಸುತ್ತಮುತ್ತಲಿನ ಪ್ರದೇಶಗಳ ಅಂಗವಿಕಲರಿಗೂ ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಸೌಲಭ್ಯ ವಂಚಿತರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಆಸ್ಪತ್ರೆಗಳಲ್ಲಿ ವೈದ್ಯರು ಅಥವಾ ಇತರೆ ಅಧಿಕಾರಿಗಳು ಸೌಲಭ್ಯ ನೀಡುವಲ್ಲಿ ವಂಚನೆ, ವಿಳಂಬ ತೋರಿದಲ್ಲಿ ಆ ಬಗ್ಗೆ ಲಿಖೀತ ರೂಪದಲ್ಲಿ ತಮಗೆ ನೀಡಿದರೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಹಿಮೋಫೀಲಿಯಾ ರೋಗಿಗಳು ಸ್ವಸಹಾಯ ಗುಂಪು ರಚಿಸಿಕೊಂಡರೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯಾದ್ಯಂತ 2016ರ ಅಧಿನಿಯಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರವಾಸ ಕೈಗೊಂಡಿದ್ದು, ದಾವಣಗೆರೆ 24ನೇ ಜಿಲ್ಲೆಯಾಗಿದೆ. 2 ತಿಂಗಳಲ್ಲಿ ಬಾಕಿ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು. ಅಂಗವಿಕಲರ ಕುರಿತಾದ ವರದಿ, ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೌಲಭ್ಯ ನೀಡುವಲ್ಲಿ ಲೋಪ, ವಿಳಂಬ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶಶಿಧರ್, ಜಿಲ್ಲೆಯಲ್ಲಿ ಅಂಗವಿಕಲರ ಸಹಾಯವಾಣಿ (08192 263939) ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಲಹೆಗಾರ ಡಾ| ಸುರೇಶ್ ಹನಗವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕಿ ಭಾರತಿ ಬಣಕಾರ್ ಇದ್ದರು.