ದಾವಣಗೆರೆ: ನೀರಿನ ಸಮಸ್ಯೆ ಸಂಬಂಧ ಈಗ ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಕ್ಸಮರ ಆರಂಭವಾಗಿದ್ದು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿಕೆ ಕೇವಲ ಪ್ರಚಾರ ಹಾಗೂ ಯಾರನ್ನೋ ಮೆಚ್ಚಿಸಲು ಎಂದು ಬಿಜೆಪಿ ತಿರುಗೇಟು ನೀಡಿದೆ.
ಉತ್ತರ ವಿಧಾನ ಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ 15 ದಿನವಾದರೂ ನೀರು ಸರಬರಾಗುತ್ತಿಲ್ಲ. ಮಳೆಗಾಲದಲ್ಲೇ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ನಮ್ಮ 21ನೇ ವಾರ್ಡ್‌ನಲ್ಲಿ 9 ದಿನಗಳ ನಂತರ ನೀರು ಪೂರೈಸಲಾಗಿದೆ. ಸಮೃದ್ಧ ನೀರಿದ್ದರೂ ನಾಗರಿಕರಿಗೆ ಸರಬರಾಜು ಮಾಡಲಾಗುತ್ತಿಲ್ಲ ಎಂಬುದಾಗಿ ದೂರಿದ್ದ ಪಾಲಿಕೆ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿಯವರಿಗೆ ಬಿಜೆಪಿ ಮುಖಂಡರು, ಶಾಸಕ ಎಸ್.ಎ.ರವೀಂದ್ರನಾಥ್ ಪ್ರತಿನಿತ್ಯ ಪಾಲಿಕೆ ಅಧಿಕಾರಿಗಳೊಂದಿಗೆ ನೀರಿನ ಸಮಸ್ಯೆ ಪರಿಹರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ, ದಕ್ಷಿಣ ಭಾಗವೆಂದು ಬೇಧ ಮಾಡದೇ ಇಡೀ ನಗರದ ನಾಗರಿಕರಿಗೆ ನೀರು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆದರೆ, ದಿನೇಶ್ ಕೆ.ಶೆಟ್ಟಿ ಕೇವಲ ಪ್ರಚಾರಕ್ಕಾಗಿ ಆರೋಪಿಸಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುಕುಂದಪ್ಪ ಮಾತನಾಡಿ, ದಿನೇಶ್ ಶೆಟ್ಟಿಯವರು ಪದೇ ಪದೇ ನಗರದ ಕುಂದುವಾಡ ಕೆರೆ ಹಾಗೂ ಟಿಬಿ ಸ್ಟೇಷನ್ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಕೆರೆಗಳಲ್ಲಿ ತೆಗೆದ ಮಣ್ಣು ಎಲ್ಲಿಗೆ ಹೋಗಿದೆ ಎಂಬುದು ಜನತೆಗೆ ಗೊತ್ತಿದೆ. ಕೇವಲ ಒಬ್ಬರಿಂದ ನಗರದ ಅಭಿವೃದ್ಧಿಯಾಗಿಲ್ಲ ಭದ್ರಾ ಡ್ಯಾಂನಿಂದ ನೀರು ತಂದವರು ಯಾರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಶಾಸಕ ರವೀಂದ್ರನಾಥ್ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಸಾರ್ವಜನಿಕರ ಸಮಸ್ಯೆ ಕೇಳಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಆರೋಪ ಮಾಡುವ ಮೊದಲು ಅದನ್ನು ತಿಳಿದುಕೊಳ್ಳಬೇಕು. ಪ್ರಚಾರಕ್ಕಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಮುಂದಿನ ಮಹಾನಗರ ಪಾಲಿಕೆಯಲ್ಲೂ ಸಹ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಜನರ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ರೀತಿ ಸ್ಪಂದನೆ ದೊರೆಯಲಿದೆ ಎಂದರು.
ಪಾಲಿಕೆಯಲ್ಲಿ ಕಾಂಗ್ರೆಸ್‌ನವರ ದುರಾಡಳಿತದಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಆದರೀಗ ಶಾಸಕ ಎಸ್.ಎ.ರವೀಂದ್ರನಾಥ್ ನೀರು ಸರಬರಾಜಿಗೆ ಬೇಕಾಗಿರುವ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಆ.23ರಿಂದಲೇ ಪಿಬಿ ರಸ್ತೆ ಮೇಲ್ಭಾಗದ ಜನರಿಗೆ ವಾರಕ್ಕೆರಡು ಬಾರಿ ಹಾಗೂ ಹಳೇ ಭಾಗಕ್ಕೆ ಆ.26ರಿಂದ ನೀರು ಬಿಡಲು ಈಗಾಗಲೇ ಕ್ರಮ ವಹಿಸಿದ್ದಾರೆ. ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಏನು ಕೆಲಸ ಮಾಡಿದ್ದಾರೆಂದು ಜನರಿಗೆ ಗೊತ್ತಿದೆ. ಆದ್ದರಿಂದ ಇನ್ನೊಬ್ಬರ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಮಾತನಾಡಿ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಜಲಸಿರಿ ಸಮರ್ಪಕವಾಗಿ ಜಾರಿಗೊಳ್ಳುತ್ತಿದೆ. ಆದರೆ, ನಗರದೆಲ್ಲೆಡೆ ಕಾಂಕ್ರೀಟ್ ರಸ್ತೆ ಮಾಡುವ ಮೊದಲೇ ಪೈಪ್ ಲೈನ್ ಕೆಲಸ ನಡೆಯಬೇಕಿತ್ತು. ತರಾತುರಿಯಲ್ಲಿ ತಮಗೆ ಅನುಕೂಲವಾಗಲು ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ. ಇದರಿಂದ ಸಿಮೆಂಟ್ ರಸ್ತೆ ಅಗೆದು ಕಾಮಗಾರಿ ನಡೆಸಬೇಕಾದಂತಹ ಅನಿವಾರ್ಯತೆ ಎದುರಾಗಿದೆ. ಸಾರ್ವಜನಕರ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಬೀದಿ ದೀಪ ಹಾಕಿಸುವುದು ಅಭಿವೃದ್ಧಿಯಲ್ಲ, ಪ್ರತಿಯೊಬ್ಬರಿಗೂ ಮೂಲ ಸೌಲಭ್ಯ ನೀಡುವುದು ಮುಖ್ಯ ಎಂದರು.
ಈ ಹಿಂದೆ ಬರಗಾಲದಲ್ಲಿ ನೀರಿನ ಸಮಸ್ಯೆ ತೀವ್ರವಾದಾಗ ಟ್ಯಾಂಕರ್ ಮೂಲಕ ಸರಬರಾಗುತ್ತಿತ್ತು. ವಿಚಿತ್ರವೆಂದರೆ ಆಯಾ ವಾರ್ಡ್‌ನ ಸದಸ್ಯರು ತಮ್ಮದೇ ಟ್ಯಾಂಕರ್‌ನಿಂದ ನೀರು ಪೂರೈಸಿ, ಹಣ ಮಾಡಿದರು. ಈ ಬಗ್ಗೆ ದಿನೇಶ್ ಶೆಟ್ಟಿ ಮಾತನಾಡಲಿ ಎಂದು ಸವಾಲು ಹಾಕಿದರು.
ನೀರಿನ ಪೂರೈಕೆಗಾಗಿ ಈ ಹಿಂದೆ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪಾಲಿಕೆ ಬಳಿ ಪ್ರತಿಭಟಿಸಿದ್ದಾರೆ. ಆಗ ಕಾಂಗ್ರೆಸ್‌ನವರು ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಲಿ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಪಿಸಾಳೆ ಕೃಷ್ಣ, ಅತಿಥ್ ಅಂಬರಕರ್, ಬಾತಿ ವೀರೇಶ್, ಮಂಜಣ್ಣ ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.