Advertisement

ಅಧ್ಯಕ್ಷ್ಯ ಗಾದಿಗೆ ಗುದ್ದಾಟ; ಯಾರಿಗೆ ಅದೃಅದೃಷ್ಠ ?

11:38 AM Nov 11, 2019 | Naveen |

„ರಾ. ರವಿಬಾಬು
ದಾವಣಗೆರೆ:
ದಾವಣಗೆರೆ ಜಿಲ್ಲಾ ಪಂಚಾಯತ್‌ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ 11 ರಂದು ನಡೆಯಲಿದ್ದು, ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಜಿ.ಪಂ. ಅಧ್ಯಕ್ಷರಾಗಿದ್ದ ಶೈಲಜಾ ಬಸವರಾಜ್‌ ರಾಜೀನಾಮೆ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮಧ್ಯಾಹ್ನ 12ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದೆ. 3ಕ್ಕೆ ಜಿಪಂ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.

Advertisement

ಇಳಿದ ಸದಸ್ಯ ಬಲ: ಈ ಮೊದಲು ಒಟ್ಟೂ 36 ಸದದ್ಯತ್ವ ಬಲ ಹೊಂದಿದ್ದ ಜಿಪಂನಲ್ಲಿ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ನಂತರ ಸದಸ್ಯತ್ವ ಬಲ 29ಕ್ಕೆ ಇಳಿದಿದೆ. ಜಿಪಂನಲ್ಲಿ 22 ಸದಸ್ಯರನ್ನು ಹೊಂದಿದ್ದ ಬಿಜೆಪಿ ಈಗ 18 ಸದಸ್ಯರನ್ನು ಹೊಂದಿದೆ. ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಿ. ರಶ್ಮಿ, ಕಂಚೀಕೆರೆ ಕ್ಷೇತ್ರದ ಡಿ. ಸಿದ್ದಪ್ಪ, ತೆಲಗಿ ಕ್ಷೇತ್ರದ ಕೆ.ಆರ್‌. ಜಯಶೀಲ, ಹಲವಾಗಲು ಕ್ಷೇತ್ರದ ಸುವರ್ಣ ಆರುಂಡಿ ನಾಗರಾಜ್‌ ಈಗ ಬಳ್ಳಾರಿ ಜಿಪಂ ಸದಸ್ಯರು.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ವೈ. ಸುಶೀಲಮ್ಮ(ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಪತ್ನಿ) ಬಳ್ಳಾರಿ ಜಿಪಂ ಸದಸ್ಯೆಯಾಗಿರುವುದರಿಂದ ಕಾಂಗ್ರೆಸ್‌ ಬಲ 8 ರಿಂದ 7ಕ್ಕೆ ಕುಸಿದಿದೆ. ನೀಲಗುಂದ ಕ್ಷೇತ್ರದ ಎಚ್‌.ಬಿ. ಪರಶುರಾಮ್‌, ಚಿಗಟೇರಿ ಕ್ಷೇತ್ರದ ಡಾ| ಮಂಜುನಾಥ್‌ ಉತ್ತಂಗಿ ಸಹ ಬಳ್ಳಾರಿ ಜಿಪಂ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ನಾಲ್ವರು ಪಕ್ಷೇತರರಲ್ಲಿ ಇಬ್ಬರು ಕಡಿಮೆಯಾಗಿದ್ದಾರೆ. ಹೊಸಕೆರೆ ಕ್ಷೇತ್ರದ ತೇಜಸ್ವಿ ಪಟೇಲ್‌, ತಾವರಕೆರೆ ಕ್ಷೇತ್ರದ ಎಂ. ಯೋಗೇಶ್‌ ಇಬ್ಬರು ಪಕ್ಷೇತರರು ಮಾತ್ರ ದಾವಣಗೆರೆ ಜಿಪಂನಲ್ಲಿದ್ದಾರೆ.ಈಗ ಒಟ್ಟಾರೆ 29 ಸದಸ್ಯತ್ವ ಬಲದ ಜಿಪಂನಲ್ಲಿ ಬಿಜೆಪಿ 18, ಕಾಂಗ್ರೆಸ್‌ 7, ಜೆಡಿಎಸ್‌ 2 ಹಾಗೂ ಇಬ್ಬರು ಪಕ್ಷೇತರರು ಇದ್ದಾರೆ.

ಮೂವರ ಮಧ್ಯೆ ಪೈಪೋಟಿ: ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹೊನ್ನಾಳಿ ತಾಲೂಕಿನ ಕುಂದೂರು ಕ್ಷೇತ್ರದ ದೀಪಾ ಜಗದೀಶ್‌, ಚನ್ನಗಿರಿ ತಾಲೂಕು ಹೊದಿಗೆರೆ ಕ್ಷೇತ್ರದ ಯಶೋಧಮ್ಮ ಮರುಳಪ್ಪ, ಜಗಳೂರು ತಾಲೂಕಿನ ಅಣಬೂರು ಕ್ಷೇತ್ರದ ಜೆ. ಸವಿತಾ ತೀವ್ರ ಪೈಪೋಟಿ ನಡೆಸಿದ್ದಾರೆ. ಪಕ್ಷದ ಮುಖಂಡರು ಸಹ ಅವರ ಪರ ಆಸ್ಥೆ ವಹಿಸಿದ್ದಾರೆ.

ದೀಪಾ ಜಗದೀಶ್‌ ಹಾಗೂ ಯಶೋಧಮ್ಮ ಮರುಳಪ್ಪ ಕಳೆದ ಎರಡು ಅವಧಿಯಿಂದಲೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಗಳಾಗಿದ್ದಾರೆ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಆಯ್ಕೆ ಸಂದರ್ಭದಲ್ಲಿ ಯಶೋಧಮ್ಮ ಮರುಳಪ್ಪ ಆಯ್ಕೆ ಬಹುತೇಕ ಖಚಿತವಾಗಿತ್ತು. ಕೊನೆಯ ಹಂತದಲ್ಲಿ ಬಾಡ ಕ್ಷೇತ್ರದ ಶೈಲಜಾ ಬಸವರಾಜ್‌ಗೆ ಅದೃಷ್ಟ ಒಲಿದು ಬಂದಿತ್ತು. ಈ ಬಾರಿಯೂ ಯಶೋಧಮ್ಮ ಮರುಳಪ್ಪ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂದಿದ್ದಾರೆ. ಕಳೆದ ಬಾರಿ ಕಡೆಯ ಗಳಿಗೆಯಲ್ಲಿ ಅವಕಾಶ ಕೈ ತಪ್ಪಿರುವುದು ಅವರಿಗೆ ಈ ಬಾರಿ ಅವಕಾಶ ಮಾಡಿಕೊಡಲಿದೆ ಎಂಬ ಲೆಕ್ಕಾಚಾರ ಇದೆ. ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ತಮ್ಮ ತಾಲೂಕಿನ ಅಭ್ಯರ್ಥಿ ಪರ ಬ್ಯಾಟಿಂಗ್‌ ನಡೆಸಿದ್ದಾರೆ.

Advertisement

ದೀಪಾ ಜಗದೀಶ್‌ ಹೆಸರು ಸಹ ಕಡೇ ಗಳಿಗೆಯ ತನಕ ಮುಂಚೂಣಿಯಲ್ಲಿದ್ದು, ಅಂತಿಮ ಹಂತದಲ್ಲಿ ಅವಕಾಶ ಬೇರೆಯವರ ಪಾಲಾಗುತ್ತಿತ್ತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಮ್ಮ ಊರಿನ ಪ್ರತಿನಿಧಿಯ ಪರ ಪ್ರಬಲ ಧ್ವನಿ ಎತ್ತಿದ್ದಾರೆ. ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ ಹೊನ್ನಾಳಿ ತಾಲೂಕಿನವರೇ ಆಗಿದ್ದಾರೆ. ಒಂದೇ ತಾಲೂಕಿನವರಿಗೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನೀಡಿದರೆ ಹೇಗೆ… ಎಂಬ ಪ್ರಶ್ನೆ ಉದ್ಭವವಾಗುವ ಹಿನ್ನೆಲೆಯಲ್ಲಿ ದೀಪಾ ಜಗದೀಶ್‌ಗೆ ಮುಂದೆ ಅವಕಾಶ ಮಾಡಿಕೊಡಬಹುದು ಎಂಬ ಲೆಕ್ಕಾಚಾರ ಇದೆ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಪ್ರಭಾರ ಅಧ್ಯಕ್ಷರೂ ಆಗಿರುವ ಅನುಭವದ ಹಿನ್ನೆಲೆಯಲ್ಲಿ ಜೆ. ಸವಿತಾ ಕಲ್ಲೇಶಪ್ಪ ಸಹ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ದಾವೆದಾರರು. ಹಿಂದುಳಿದ ತಾಲೂಕಿನ ಪ್ರತಿನಿಧಿ… ಎಂಬುದು ಅವರಿಗೆ ಪ್ಲಸ್‌ ಪಾಯಿಂಟ್‌ ಆಗಬಹುದು. ಶಾಸಕ ಎಸ್‌.ವಿ. ರಾಮಚಂದ್ರ ತಮ್ಮ ತಾಲೂಕಿಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದಾಗಿ ಪ್ರಬಲವಾಗಿ ಪಟ್ಟು ಹಿಡಿಯಬಹುದು. ಇದಲ್ಲದೆ ದೊಣ್ಣೆಹಳ್ಳಿ ಕ್ಷೇತ್ರದ ಕೆ.ವಿ. ಶಾಂತಕುಮಾರಿ ಸಹ ರೇಸ್‌ನಲ್ಲಿದ್ದಾರೆ.

ಬಿಜೆಪಿ ಅಧಿಕ ಸ್ಥಾನ ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸಾಂಪ್ರದಾಯಿಕವಾಗಿ ಸ್ಪರ್ಧೆ ಮಾಡುವ ಸ್ಥಿತಿಯಲ್ಲಿದೆ. ಹಾಗಾಗಿ ಯಾವುದೇ ರಾಜಕೀಯ ಚಮತ್ಕಾರ ನಡೆಯುವ ಸಾಧ್ಯತೆಯೂ ಇಲ್ಲ. ಯಶೋಧಮ್ಮ ಮರುಳಪ್ಪ, ದೀಪಾ ಜಗದೀಶ್‌ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಯಶೋಧಮ್ಮ ಮರುಳಪ್ಪ ಅವರಿಗೆ ಪ್ರಥಮ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next