Advertisement

ಸಂಸದ ಸಿದ್ದೇಶ್ವರ್‌ರಿಂದ ಬೆಳೆ ಹಾನಿ ವೀಕ್ಷಣೆ

11:42 AM May 05, 2019 | Naveen |

ದಾವಣಗೆರೆ: ಧಾರಾಕಾರವಾಗಿ ಈಚೆಗೆ ಸುರಿದ ಆನೆಕಲ್ಲು ಸಹಿತ ಮಳೆ, ಗಾಳಿಯಿಂದ ಬಾಳೆ, ಅಡಿಕೆ, ಭತ್ತ, ಪೊಪ್ಪಾಯಿ, ಮೆಕ್ಕೆಜೋಳದಂತಹ ಬೆಳೆಗಳು ಹಾನಿಯಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌, ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ದಾವಣಗೆರೆ ತಾಲೂಕಿನ ಎಲೆಬೇತೂರು, ಬಿ.ಕಲಪನಹಳ್ಳಿ, ಓಬಜ್ಜಿಹಳ್ಳಿ, ಪುಟಗನಾಳ್‌ ಹಾಗೂ ಹರಪನಹಳ್ಳಿ ತಾಲೂಕಿನ ಚಿಕ್ಕಮೇಗಳಗೆರೆ, ಹಿರೇಮೇಗಳಗೆರೆ, ಶ್ರೀಕಂಠಪುರ, ವಡ್ನಹಳ್ಳಿ ಮುಂತಾದ ಗ್ರಾಮಗಳಲ್ಲಿ ಬಾಳೆ, ಅಡಿಕೆ, ಮೆಕ್ಕೆಜೋಳ, ಭತ್ತದ ಗದ್ದೆ, ತೋಟಗಳಿಗೆ ತೆರಳಿ ರೈತರೊಂದಿಗೆ ಸಮಾಲೋಚನೆ ನಡೆಸಿ, ಬೆಳೆಹಾನಿಯ ಮಾಹಿತಿ ಪಡೆದರು.

ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಏ.29ರಂದು ದಾವಣಗೆರೆ ತಾಲೂಕಿನಲ್ಲಿ ಸುರಿದ ಆನೆಕಲ್ಲು ಸಹಿತ ಮಳೆ, ಗಾಳಿಗೆ ಅಡಿಕೆ, ತೆಂಗು, ಬಾಳೆ, ಕಬ್ಬು, ಮಕ್ಕೇಜೋಳ, ಪಪ್ಪಾಯಿ, ಭತ್ತ ಮುಂತಾದ ಬೆಳೆಗಳು ಹಾನಿಗೀಡಾಗಿದ್ದು, ರೈತರಿಗೆ ಕೋಟ್ಯಾಂತರ ರೂ. ನಷ್ಟವಾಗಿದೆ ಎಂದರು.

ಈ ಬಾರಿ ಯಾರೂ ಸಹ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಮಾಡಿಸಿಲ್ಲ. ಇದು ನಿಜಕ್ಕೂ ದುರಂತ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅಲ್ಪಸಲ್ಪ ಪರಿಹಾರ ದೊರಕಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಅದರಂತೆ ತಹಶೀಲ್ದಾರ್‌, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಪರಿಹಾರ ನಿಧಿ ಹೆಚ್ಚಿಸಲಿ: ಪ್ರಕೃತಿ ವಿಕೋಪ ಪರಿಹಾರ ನಿಧಿ ಈ ಹಿಂದೆ ಎಕರೆಗೆ 6 ಸಾವಿರವಿತ್ತು. ಈಗ 12ಸಾವಿರ ಮಾಡಿದ್ದಾರೆ. ಅದು ಕೂಡ ಕಡಿಮೆ ಆಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ನಾಶವಾದರೆ ಸೂಕ್ತ ಪರಿಹಾರವನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯ ನಾಮ್ಸ್‌ರ್ ಬದಲಾವಣೆ ಮಾಡಬೇಕು. ರೈತರು ಬೆಳೆಗೆ ಖರ್ಚು ಮಾಡಿದ ಹಣವಾದರೂ ಸಿಗುವಂತೆ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಪ್ರಕೃತಿ ವಿಕೋಪ ಪರಿಹಾರ ನಿಧಿ ಹೆಚ್ಚಳಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಿ. ನಾವು ಕೂಡ ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತೇವೆ ಎಂದರಲ್ಲದೇ, 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 15 ಸಾವಿರ ರೈತರು ಫಸಲ್ ಬೀಮಾ ಯೋಜನೆಯಡಿ ಬೆಳೆವಿಮೆ ಮಾಡಿಸಿದ್ದರು. ಆಗ ಅಧಿಕಾರಿಗಳು ಮಾಡಿದ ತಪ್ಪಿನಿಂದ ಹಣ ಸರಿಯಾಗಿ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ರೈತರು ವಿಮೆ ಮಾಡಿಸಿಲ್ಲ. ವಿಮೆ ಮಾಡಿಸಿದ್ದರೆ ತುಂಬಾ ಅನುಕೂಲ ಆಗುತ್ತಿತ್ತು ಎಂದರು.

ಹಿಂಗಾರು ಮತ್ತು ಮುಂಗಾರಿನಲ್ಲಿ ಬೆಳೆಹಾನಿಯಾದ ಬೆಳೆಗಾರರಿಗೆ ರಾಜ್ಯ ಸರ್ಕಾರ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದರಿಂದ ರೈತರು ಮುಂದಿನ ದಿನಗಳಲ್ಲಿ ಬೀಜ, ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಲು ಅನುಕೂಲವಾಗುತ್ತದೆ. ಜೊತೆಗೆ ಗಾಳಿ, ಮಳೆಯಿಂದ ಹಾನಿಯಾದ ಮನೆಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಜಿಲ್ಲಾಧಿಕಾರಿಗಳು ದೊರಕಿಸಬೇಕು. ಜೊತೆಗೆ ಬೆಳೆ ಪರಿಹಾರಕ್ಕೆ ರೈತರು ಕೂಡ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ, ಹರಪನಹಳ್ಳಿ ತಾಲೂಕಿನ ತಹಶೀಲ್ದಾರ್‌ರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಬೆಳೆಹಾನಿ ಆಗಿರುವ ರೈತರ ಬೆಳೆಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು. ಹಾನಿಯನ್ನಾಧರಿಸಿ ವೈಜ್ಞಾನಿಕ ಪರಿಹಾರ ದೊರಕುವಂತೆ ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೇ, ಈ ಬಾರಿ ಮತ್ತೆ ಸಂಸದನಾಗಿ ಆಯ್ಕೆಯಾದರೆ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿ ಜನರಿಗೆ ಪರಿಹಾರ ದೊರಕಿಸುತ್ತೇನೆ ಎಂದರು. ಈ ವೇಳೆ ದಾವಣಗೆರೆ, ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಪಾರದರ್ಶಕವಾಗಿ ಸರ್ವೇ ಕಾರ್ಯ ನಡೆಯಲಿ
ಭದ್ರಾನಾಲೆಯ ಅಚ್ಚುಕಟ್ಟು ನೀರಾವರಿ ಪ್ರದೇಶದ ರೈತರಾದ ನಾವಿಂದು ಎಕರೆಗೆ 40ರಿಂದ 50 ಚೀಲ ಭತ್ತ ಬೆಳೆಯುವ ನಿರೀಕ್ಷೆಯಲ್ಲಿದ್ದೇವು. ಆದರೆ, ಈ ಬೆಳೆಹಾನಿಯಿಂದಾಗಿ ಎಕರೆಗೆ 10 ಕ್ವಿಂಟಾಲ್ ಕೂಡ ನಿರೀಕ್ಷೆ ಮಾಡುವುದು ಕಷ್ಟವಾಗಿದೆ. ಬೆಳೆ ನಷ್ಟದ ಜೊತೆಗೆ ಈ ಬಾರಿ ಸಾಲಮನ್ನಾ ತೊಡಕಿನಿಂದಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಬ್ಯಾಂಕ್‌ನಿಂದ ಸಾಲ ಸಿಗುವುದು ಕಷ್ಟವಾಗಿದೆ. ಹಾಗಾಗಿ ಬೆಳೆಹಾನಿಯಾದ ಪ್ರದೇಶಗಳಿಗೆ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳು ಭೇಟಿ ನೀಡಿ ಪಾರದರ್ಶಕವಾಗಿ ಸರ್ವೇ ಮಾಡಿ ವೈಜ್ಞಾನಿಕ ಪರಿಹಾರ ಸಿಗುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಈ ಬಗ್ಗೆ ಸರ್ಕಾರ ಕೂಡ ಗಂಭೀರ ಚಿಂತನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಹಿರೇಮೇಗಳೆಗೆರೆಯ ಪ್ರಗತಿಪರ ರೈತ ಮಹಾಬಲೇಶ್ವರಗೌಡ ಒತ್ತಾಯಿಸಿದರು.
ವಿದ್ಯುತ್‌ ಕಂಬಗಳನ್ನು ಸರಿಪಡಿಸಿ, ಪರಿಹಾರ ದೊರಕಿಸಿ
ದಾವಣಗೆರೆ ತಾಲ್ಲೂಕಿನ 5 ಹಳ್ಳಿಯೊಳಗೆ ಕೋಟ್ಯಾಂತರ ರೂ. ಬೆಳೆಹಾನಿಯಾಗಿದೆ. ಒಂದು ಅಡಿಕೆ ಮರಕ್ಕೆ 5 ಸಾವಿರ ರೂ.ನಷ್ಟ ಉಂಟಾಗಿದೆ. ಎಕರೆಗೆ 400ಕ್ಕೂ ಹೆಚ್ಚು ಮರಗಳು ನಾಶವಾಗಿವೆ. ಇನ್ನೂ ಕೆಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಅವುಗಳನ್ನು ಕೆಇಬಿಯವರು ತ್ವರಿತವಾಗಿ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಬಿ. ಕಲಪನಹಳ್ಳಿಯ ಎಂ.ಡಿ. ರವೀಂದ್ರ ಮನವಿ ಮಾಡಿದರು.
ಕೈಗೆ ಬರುವ ಮುನ್ನವೇ ಫಸಲು ನಾಶ
ಈ ಬಾರಿ ಎರಡೂವರೆ ಎಕರೆಯಲ್ಲಿ ಅಡಿಕೆ ತೋಟದ ನಡುವೆ ಬಾಳೆ ಬೆಳೆದಿದ್ದು, 2.5 ಲಕ್ಷ ರೂ. ಖರ್ಚು ಮಾಡಿದ್ದೇನೆ. ಬಾಳೆ ನಾಟಿ ಮಾಡಿ 7ತಿಂಗಳಾಗಿದೆ. ಶ್ರಾವಣಕ್ಕೆ ಬೆಳೆ ಬರುವ ನಿರೀಕ್ಷೆ ಇತ್ತು. ದೀಪಾವಳಿ ಒಳಗೆ ಕೊಯ್ಲು ಆಗಿದ್ದರೆ 7ರಿಂದ 8 ಲಕ್ಷ ಆದಾಯ ಬರುತ್ತಿತ್ತು. ಆದರೆ, ಸುರಿದ ಆನೆಕಲ್ಲು ಸಹಿತ ಅಕಾಲಿಕ ಮಳೆ, ಗಾಳಿಗೆ ಸಂಪೂರ್ಣ ಬಾಳೆ ಬೆಳೆ ಹಾನಿಯಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಬೆಳೆವಿಮೆ ಕೂಡ ಯಾವ ರೈತರು ಮಾಡಿಸಿಲ್ಲ. ಹಾಗಾಗಿ ಸರ್ಕಾರವೇ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಎಲೆಬೇತೂರು ಗ್ರಾಮದ ಬಾಳೆ ಬೆಳೆಗಾರ ಎಚ್.ಬಿ. ಹಳ್ಳಿಗೌಡ್ರ ನಾಗನಗೌಡ ಎಂದು ತಮ್ಮ ಅಳಲು ತೋಡಿಕೊಂಡರು.
Advertisement

Udayavani is now on Telegram. Click here to join our channel and stay updated with the latest news.

Next