ದಾವಣಗೆರೆ: ಹೊನ್ನಾಳಿ ತಾಲೂಕಿನ 80 ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಬಾಕಿ ಇರುವ ಗ್ರಾಮದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ 18ನೇ ವಾರ್ಡ್‌ನಲ್ಲಿ ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾದವರಿಗೆ ಮಂಗಳವಾರ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ದಾವಣಗೆರೆ ಕಾರ್ಪೊರೇಟರ್‌ಗಳು ಕರೆದಾಗ ಬರಬೇಕಾಗಿದ್ದು ನನ್ನ ಕರ್ತವ್ಯ. ಹಾಗಾಗಿ ಬಂದಿದ್ದೇನೆ. ಹೊನ್ನಾಳಿಯಿಂದ ಒಬ್ಬನೇ ಬಂದಿದ್ದೇನೆ. ಕೆಲವರು ಮಾತ್ರ ಇರಬೇಕು. ಸಾಮಾಜಿಕ ಅಂತರ ಕಾಪಾಡಲು ಸಹ ಹೇಳಿದ್ದೇನೆ. ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ಅವರು ತಮ್ಮ ಕಾರ್ಯ ಸಮರ್ಥಿಸಿಕೊಂಡರು.
ಮಾಜಿ ಸಚಿವ ಜಮೀರ್ ಅಹ್ಮದ್ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಆಶಾ ಕಾರ್ಯಕರ್ತೆಯರಿಗೆ ಪರ್ಮೀಷನ್ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವವರ ಆತ್ಮಸ್ಥೈರ್ಯ ಕುಂದಿಸುವಂತಹ ಹೇಳಿಕೆ ನೀಡಬಾರದು. ಬದಲಿಗೆ ಆತ್ಮಸ್ಥೈರ್ಯ ತುಂಬುವ ಹೇಳಿಕೆ ನೀಡಬೇಕು ಎಂದರು. ಮೇಯರ್ ಅಜಯ್‌ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ನಗರಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಬಿಜೆಪಿಯ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಇತರರು ಇದ್ದರು.
ಪಡಿತರ ವಿತರಣೆಗೆ ಚಾಲನೆ: ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳ ಜನರ ಹಿತದೃಷ್ಟಿಯಿಂದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಹೊರಗಿನಿಂದ ಬಂದವರ ತೀವ್ರ ನಿಗಾವಹಿಸಿ ರಸ್ತೆಯಲ್ಲಿ ಅನಗತ್ಯವಾಗಿ ಜನರು ತಿರುಗಾಡದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಪಟ್ಟಣದ ತುಂಗಭದ್ರ ಬಡಾವಣೆ ಉತ್ತರ ಮತ್ತು ದಕ್ಷಿಣ ವಾರ್ಡ್‌ಗಳ ನ್ಯಾಯ ಬೆಲೆ ಅಂಗಡಿಗಳಿಗೆ ಮಂಗಳವಾರ ಭೇಟಿ ನೀಡಿ ಪಡಿತರ ವ್ಯವಸ್ಥೆಯನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಮಾಸ್ಕ್ಗಳನ್ನು ವಿತರಿಸಿ ಅವರು ಮಾತನಾಡಿದರು. ಜನರ ದಿನನಿತ್ಯದ ಜೀವನಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬಿಪಿಎಲ್ ಪಡಿತರದಾರರಿಗೆ ಮುಂಜಾಗ್ರತೆಗಾಗಿ 3 ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಡ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಪಡಿತರ ವಿತರಿಸಬೇಕೆಂದು ನ್ಯಾಯ ಬೆಲೆ ಅಂಗಡಿ
ಮಾಲೀಕರಿಗೆ ತಾಕೀತು ಮಾಡಿದರು.