Advertisement

ಸುಂದರ-ಹಸಿರು ನಗರ ನಿರ್ಮಾಣ

10:08 AM Jul 31, 2019 | Naveen |

ದಾವಣಗೆರೆ: ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣ ರೂಪುರೇಷೆಯಂತೆ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

Advertisement

ಮಂಗಳವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆ ಉದ್ಯಾನವನದಲ್ಲಿ ಮಹಾರಾಜ ಸೋಪ್ಸ್‌ ಸಿಬ್ಬಂದಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಪರಿಸರ ಸ್ನೇಹಿ, ಹಸರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಕೈಗಾರಿಕೋದ್ಯಮಿಗಳು ಇತರರಿಗೆ ಜಿಲ್ಲಾಡಳಿತ ಮಾಡಿರುವ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಮುಂದಾಗಿದ್ದಾರೆ. ಮಹಾರಾಜ ಸೋಪ್ಸ್‌ ಇಂಡಸ್ಟ್ರಿಸ್‌ನವರು ಜಿಲ್ಲಾ ಚಿಗಟೇರಿ ಆಸ್ಪತ್ರೆ ಪಾರ್ಕ್‌ಗಳ ಪುನಶ್ಚೇತನ ಮಾಡುತ್ತಿದ್ದಾರೆ. ಪಾರ್ಕ್‌ ಗಳ ಸ್ವಚ್ಛತೆ, ನಂತರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಸಾಕಷ್ಟು ಕೈಗಾರಿಕೋದ್ಯಮಿಗಳು ಉತ್ಸುಕತೆ ತೋರುತ್ತಿದ್ದಾರೆ. ಅವರ ಪರಿಸರ ಪ್ರೇಮ, ಸಾಮಾಜಿಕ ಕಳಕಳಿ ಇತರರಿಗೆ ಪ್ರೇರಣೆ. ಬೇರೆಯವರು ಸಹ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಕೈಗಾರಿಕೆ, ಉದ್ದಿಮೆಗಳು ತಮ್ಮ ಲಾಭದಲ್ಲಿನ ಶೇ.2 ರಷ್ಟನ್ನು ಸಾಮಾಜಿಕ ಸೇವಾ ಕಾರ್ಯಕ್ಕೆ ಮೀಸಲಿಡುತ್ತಾರೆ. ಆ ಹಣವನ್ನು ಇಂತಹ ರಚನಾತ್ಮಕ ಕಾರ್ಯಕ್ರಮಕ್ಕೆ ಬಳಕೆ ಮಾಡುತ್ತಾರೆ. ಮಹಾರಾಜ ಸೋಪ್ಸ್‌ ಇಂಡಸ್ಟ್ರಿಸ್‌ನವರು ಅದೇ ರೀತಿ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ. ಪಾರ್ಕ್‌ಗಳ ಸ್ವಚ್ಛತೆ, ಗಿಡ ನೆಡುವ ಜೊತೆಗೆ ನಿರ್ವಹಣೆಯನ್ನೂ ಮಾಡುವರು ಎಂದು ತಿಳಿಸಿದರು.

Advertisement

ಮಹಾರಾಜ ಸೋಪ್ಸ್‌ ಇಂಡಸ್ಟ್ರಿಸ್‌ ಮಾಲೀಕ ಡಾ| ರವಿರಾಜ್‌ ಮಾತನಾಡಿ, ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದ ಪಾರ್ಕ್‌ಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. 250 ಸಿಬ್ಬಂದಿ ಪಾರ್ಕ್‌ ಸ್ವಚ್ಛತೆ ಮಾಡಿದ್ದಾರೆ. ಪಾರ್ಕ್‌ನಲ್ಲಿ ಹೆಚ್ಚಾಗಿ ಹೂವಿನ ಗಿಡಗಳನ್ನು ನೆಡಲಾಗುವುದು. ಜಿಲ್ಲಾಡಳಿತದ ಆಶಯದಂತೆ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು.

ಮಹಾರಾಜ ಸೋಪ್ಸ್‌ ಇಂಡಸ್ಟ್ರಿಸ್‌ನಿಂದ ಸಾಕಷ್ಟು ಸಹಾಯ ಮಾಡಲಾಗುತ್ತಿದೆ. ಈಗ ಜಿಲ್ಲಾ ಆಸ್ಪತ್ರೆ ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದೆಯೂ ನಿರ್ವಹಣೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇವೆ. ಕೆಲವಾರು ಕಡೆ ಒಂದು ಹಂತದ ನಂತರ ನಿರ್ವಹಣೆಗೆ ಅವಕಾಶವೇ ನೀಡುವುದಿಲ್ಲ. ಆ ರೀತಿ ಆಗುವುದು ಬೇಡ ಎಂದರು.

ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ಎಚ್.ಡಿ. ವಿಶ್ವನಾಥ್‌, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನೆ, ಕೆ.ಟಿ. ಗೋಪಾಲಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next