ದಾವಣಗೆರೆ: ಯುವಕನೋರ್ವ ತನ್ನನ್ನು ಕೊಲೆ ಮಾಡಲಾಗಿದೆ ಎಂದು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪಲೋಡ್ ಮಾಡಿ ಕುಟುಂಬ ವರ್ಗದವರು, ಪೊಲೀಸರು ಸೇರಿ ಎಲ್ಲರನ್ನೂ ಯಾಮಾರಿಸಿದ ಪ್ರಸಂಗವೊಂದು ನಡೆದಿದೆ. ಪೊಲೀಸರು ಯುವಕನನ್ನು ಪತ್ತೆ ಹಚ್ಚಿ, ಠಾಣೆಗೆ ಕರೆತಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮೊಬೈಲ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದ ದಾವಣಗೆರೆಯ ಯಲ್ಲಮ್ಮ ನಗರದ 12ನೇ ಕ್ರಾಸ್ ನಿವಾಸಿ ಪರಶುರಾಮ ವಾಟ್ಸ್ ಆ್ಯಪ್‌ನಲ್ಲಿ ಫೋಟೋ ಹಾಕಿ ಎಲ್ಲರನ್ನೂ ಯಾಮಾರಿಸಿದ್ದ.
ಈಗಾಗಲೇ ದಾವಣಗೆರೆಯಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತಲೆ ಕೆಡಿಸಿಕೊಂಡಿರುವ ಪೊಲೀಸರಿಗೆ ಮತ್ತೂಂದು ಕೊಲೆಯ ವಿಚಾರ ಇನ್ನಷ್ಟು ತಲೆನೋವು ಉಂಟು ಮಾಡಿತ್ತು. ಆದರೆ ಪರಶುರಾಮ ವಾಟ್ಸ್ ಆ್ಯಪ್ ಮೂಲಕ ಕಳಿಸಿದ್ದ ಫೋಟೋವನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರು ಪ್ರಕರಣದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಯಲ್ಲಮ್ಮ ನಗರದ ಪರಶುರಾಮ್ ತರಕಾರಿ ವ್ಯಾಪಾರ ಮಾಡುತ್ತಿದ್ದ. ಮೊಬೈಲ್ ವಿಚಾರವಾಗಿ ತನ್ನ ಗೆಳೆಯರೊಂದಿಗೆ ಜಗಳ ಮಾಡಿಕೊಂಡಿದ್ದ. ಅವರು ತನಗೆ ಹೊಡೆಯಬಹುದು ಎಂದುಕೊಂಡಿದ್ದ ಪರಶುರಾಮ, ಶನಿವಾರ ದಾವಣಗೆರೆಯ ಹೊಳೆಹೊನ್ನೂರು ತೋಟದ ನಿರ್ಜನ ಪ್ರದೇಶಕ್ಕೆ ತೆರಳಿ ತನ್ನ ಮೈಮೇಲೆ ಕುಂಕುಮದ ನೀರು ಹಾಕಿಕೊಂಡು ತನಗೆ ಹೊಡೆದು ಕೊಲೆ ಮಾಡಲಾಗಿದೆ ಎನ್ನುವಂತೆ ತನ್ನದೇ ಮೊಬೈಲ್ನಲ್ಲಿ ಸೆಲ್ಫಿ ತೆಗೆದು ಕೆಲವರಿಗೆ ಫೋಟೋ ಫಾರ್ವರ್ಡ್ ಮಾಡಿದ್ದ. ಕೊನೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಕ್ಷಣ ಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಶುರಾಮನ ಫೋಟೋ ಹರಿದಾಡಿದೆ. ಅವನ ಕುಟುಂಬದವರಿಗೂ ವಿಷಯ ಮುಟ್ಟಿದೆ. ಕಂಗಾಲಾದ ಕುಟುಂಬದ ಸದಸ್ಯರು ಈತನಿಗಾಗಿ ಹುಡುಕಾಡಿ ನಂತರ ಬಡಾವಣಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಪರಶುರಾಮನ ಶವ ಪತ್ತೆಯಾಗಿಲ್ಲ. ಕೊನೆಗೆ ಸಂಜೆ 5 ಗಂಟೆ ಸುಮಾರಿಗೆ ಪರಶುರಾಮನ ಮೊಬೈಲ್ ಆನ್ ಆಗಿದೆ. ತಕ್ಷಣ ಆತ ಇರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬಯಲಿಗೆ ಬಂದಿದೆ. ಮೊಬೈಲ್ ವಿಚಾರವಾಗಿ ಗಲಾಟೆ ಮಾಡಿದ್ದ ರಾಣೆಬೆನ್ನೂರು ಸಮೀಪದ ಮೆಡ್ಲೇರಿ ಗ್ರಾಮದ ಯುವಕನನ್ನೂ ಪತ್ತೆ ಹಚ್ಚಿದ ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ.
ನನ್ನದೇ ಕೊಲೆಯಾಗಿದೆ ಎಂದು ಸುಳ್ಳು ಹೇಳುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದ ಪರಶುರಾಮನಿಗೆ ಪೊಲೀಸರು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.