ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧೆಡೆ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ (ಡಾನ್ ಬಾಸ್ಕೋ ) ತಂಡ, ಗ್ರಾಮ ಪಂಚಾಯಿತಿ ಸದಸ್ಯ, ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಸರ್ಕಾರಿ ಪಿಯು ಪ್ರಾಚಾರ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅಂಗನವಾಡಿ ಮೇಲ್ವಿಚಾರಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಮತ್ತು ಹರಿಹರ ತಾಲೂಕಿನ ಗ್ರಾಮಗಳಲ್ಲಿ ಅಪ್ರಾಪ್ತೆ ಯರ ವಿವಾಹ ನಡೆಯಲಿದೆ ಎಂದು ಅಪರಿಚಿತರು ಮಕ್ಕಳ ಸಹಾಯವಾಣಿಗೆ ನೀಡಿದ ಮಾಹಿತಿ ಆಧಾರದಲ್ಲಿ ಮಕ್ಕಳ ಸಹಾಯವಾಣಿಯ ಕೊಲ್ಯಾಬ್ ಡಾನ್ ಬಾಸ್ಕೋದ ಸಂಯೋಜಕ ಟಿ.ಎಂ. ಕೊಟ್ರೇಶ್, ಕಾರ್ಯಕರ್ತ ಟಿ.ಎ. ಹರ್ಷದ್ ಬಾಲಕಿಯರ ವಯಸ್ಸಿಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಇಬ್ಬರೂ ಅಪ್ರಾಪ್ತ ವಯಸ್ಸಿನವರು ಎಂದು ತಿಳಿದು ಬಂದಿತು.
ಕೂಡಲೇ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್, ಹರಿಹರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ರಮೇಶ್, ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ, ಬನ್ನಿಕೋಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಆರ್. ಶೀಲಾ, ಗ್ರಾಮ ಪಂಚಾ ಯತಿ ಕಾರ್ಯದರ್ಶಿ ಮಂಜಪ್ಪ, ಅಂಗನವಾಡಿ ಮೇಲ್ವಿಚಾರಕಿ ಅನಿತಾ, ಕಾರ್ಯಕರ್ತೆ ಎಸ್.ವಿ. ಶಿವಲೀಲಾ ಇತರರು ಬಾಲಕಿಯರ ಮನೆಗೆ ತೆರಳಿ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ, ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಛಾಪಾ ಕಾಗದದಲ್ಲಿ ತಮ್ಮ ಮಕ್ಕಳಿಗೆ ೧೮ ವರ್ಷ ತುಂಬಿದ ಮೇಲೆ ಮದುವೆ ಮಾಡುವುದಾಗಿ, ಒಂದೊಮ್ಮೆ ಅಷ್ಟರೊಳಗೆ ಮದುವೆ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಮುಚ್ಚಳಿಕೆ ಬರೆಸಿಕೊಂಡು ನಡೆಯಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹ ತಡೆದಿದ್ದಾರೆ.
ಇದನ್ನೂ ಓದಿ: ಹೆಣ್ಣುಮಕ್ಕಳ ಲಿವ್-ಇನ್ ಸಂಬಂಧವನ್ನು ಕುಟುಂಬ ಒಪ್ಪಿಕೊಳ್ಳಬೇಕು: ಮಹಿಳಾ ಆಯೋಗ