Advertisement
ಕಳೆದ 9 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 52 ಮಂದಿಗೆ ಜೂನ್ 1ರಿಂದ ಕೆಲಸಕ್ಕೆ ಬರದಂತೆ ಸೂಚಿಸಲಾಗಿತ್ತು. ಇದರಿಂದ ನೊಂದ 6 ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಜಿಲ್ಲಾಸ್ಪತ್ರೆಯಲ್ಲೇ ದಾಖಲಿಸಲಾಗಿದೆ.
Related Articles
Advertisement
ಈ ಮಧ್ಯೆ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ| ನೀಲಾಂಬಿಕೆ, ಒಂದು ತಿಂಗಳ ಹಿಂದೆಯೇ ಜೂನ್ 1ರಿಂದ ಕೆಲಸಕ್ಕೆ ಬರದಂತೆ ಗುತ್ತಿಗೆ ನೌಕರರಿಗೆ ನೊಟೀಸ್ ನೀಡಿದ್ದರಂತೆ. ಶನಿವಾರ ಬೆಳಗ್ಗೆ ಎಲ್ಲಾ ವಿಭಾಗದ ಗುತ್ತಿಗೆ ನೌಕರರು ಜಿಲ್ಲಾಸ್ಪತ್ರೆಗೆ ತೆರಳಿ, ಸಹಿ ಮಾಡಲು ಹಾಜರಿ ಪುಸ್ತಕ ಕೇಳಿದಾಗ ಸಂಬಂಧಪಟ್ಟವರು ಅದನ್ನು ನೀಡಿಲ್ಲ. ಅಲ್ಲದೇ ನಿಮಗೆ ಹಾಜರಿ ಪುಸ್ತಕ ನೀಡದಂತೆ ಆಸ್ಪತ್ರೆಯ ಅಧೀಕ್ಷಕರು ಸೂಚಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಇದರಿಂದ ನೊಂದ ಗುತ್ತಿಗೆ ನೌಕರರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರಲ್ಲಿ ನೊಂದ ಆರು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಮಧ್ಯೆ ಗುತ್ತಿಗೆ ನೌಕರರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಬಳಿ ತೆರಳಿ, ತಮ್ಮ ಸಮಸ್ಯೆ ಗಮನಕ್ಕೆ ತಂದಾಗ, ಶಾಸಕರು ದೂರವಾಣಿ ಮೂಲಕ ಮಾತನಾಡಿ, ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯದಂತೆ ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ತಿಳಿಸಿದ್ದಾರೆ.
ಗುತ್ತಿಗೆ ನೌಕರರ ಮುಖಂಡರು ಜಿಲ್ಲಾಧಿಕಾರಿಯವರನ್ನೂ ಭೇಟಿಯಾಗಿ, ತಮ್ಮ ಸಮಸ್ಯೆ ತೋಡಿಕೊಂಡಿದ್ದು, ಅವರು ಸಹ ಆಸ್ಪತ್ರೆಯ ಡಿಎಸ್ ಅವರೊಂದಿಗೆ ಮಾತನಾಡಿ, ಸದ್ಯ ಗುತ್ತಿಗೆ ನೌಕರರನ್ನು ಡಿ ಗ್ರೂಪ್‌ನಲ್ಲಿ ಮುಂದುವರಿಸುವಂತೆ ಸೂಚಿಸಿದ್ದಾರೆ.
ಗುತ್ತಿಗೆ ನೌಕರರಿಗೆ ಎಆರ್‌ಎಸ್ ಫಂಡ್‌ನಿಂದ ಏಜೆನ್ಸಿಯವರಿಗೆ ಹಣ ಪಾವತಿ ಮಾಡುತ್ತಿದ್ದು, ಕೆಲವು ತಿಂಗಳಿಂದ ಆ ಫಂಡ್‌ನ ಕೊರತೆಯಿಂದಾಗಿ ಏಜೆನ್ಸಿಯವರಿಗೆ ಹಣ ನೀಡದೇ ಇರುವುದರಿಂದ ಗುತ್ತಿಗೆ ನೌಕರರಿಗೆ 4-5 ತಿಂಗಳ ವೇತನ ಸಹ ಸಿಗದಂತಾಗಿದೆ.
ಆದರೂ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರರು ಇಂದಲ್ಲಾ ನಾಳೆ ತಮ್ಮ ಕೆಲಸ ಕಾಯಂ ಮಾಡಬಹುದೆಂಬ ನಿರೀಕ್ಷೆಯಲ್ಲೇ ಕಾಲ ತಳ್ಳುತ್ತಿದ್ದಾರೆ. ಈ ಮಧ್ಯೆ ಕೆಲಸದಿಂದ ವಜಾಗೊಳಿಸಿದ್ದರಿಂದ ಕೆಲವರು ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ