Advertisement

ಜಿಲ್ಲಾಸ್ಪತ್ರೆಯಿನ್ನು ಕೋವಿಡ್‌ಗೆ ಮಾತ್ರ ಸೀಮಿತ

04:14 PM May 10, 2020 | Naveen |

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಇನ್ನು ಮುಂದೆ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆಗೆ ಸೀಮಿತಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್‌ ಹೇಳಿದ್ದಾರೆ.

Advertisement

ಶನಿವಾರ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್ ಸೋಂಕಿತರ ಬಿಟ್ಟು ಬಾಕಿ ಅನಾರೋಗ್ಯ ಸಮಸ್ಯೆಗಳಿಗೆ ಬಾಪೂಜಿ, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಹೆರಿಗೆಗೂ ಕೂಡ ಬೇರೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ಕೋವಿಡ್  ನಿಂದಾಗಿ ಬೇರೆ ಕಾಯಿಲೆಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಬರಲು ಜಿಲ್ಲೆಯ ಜನರು ಭಯಬೀತರಾಗಿದ್ದರು. ಹಾಗಾಗಿ ಅವರಿಗೆ ಪ್ರತ್ಯೇಕವಾಗಿ ನಾನ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಎಲ್ಲ ಅಧಿಕಾರಿಗಳು ಸೇರಿ ಒಗ್ಗಟ್ಟಾಗಿ ಕೊರೊನಾ ಎದುರಿಸುವ ಕೆಲಸ ಮಾಡಬೇಕಾಗಿದೆ. ಪ್ರತಿನಿತ್ಯ ಡಿಸಿ-ಎಸ್‌ಪಿ ಜೊತೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಮುಖ್ಯಮಂತ್ರಿಗಳು ಸಹ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್‌ ಸ್ಥಾಪಿಸುವುದಾಗಿ ತಿಳಿಸಿದ್ದೆವು. ಇನ್ನೆರಡು ದಿನದಲ್ಲಿ ಆರಂಭಿಸಲು ವೈದ್ಯಕೀಯ ಶಿಕ್ಷಣ ಸಚಿವರು ಅನುಮತಿ ನೀಡಿದ್ದಾರೆ. ಕೋವಿಡ್‌ ಪರೀಕ್ಷೆಗೆ ಲ್ಯಾಬ್‌ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಕ್ರಮ ಪಾಲಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಹೆಚ್ಚು ತಪಾಸಣೆ ನಡೆಸಬೇಕು. ಜೊತೆಗೆ ನಗರಕ್ಕೆ ಬರುವ ಹಾಗೂ ಹೊರ ಹೋಗುವವರ ಬಗ್ಗೆ ನಿಗಾ ವಹಿಸಬೇಕು. ಕಂಟೈನ್‌ಮೆಂಟ್‌ ಝೋನ್‌ನಲ್ಲಿರುವ ಎಲ್ಲ ಜನರ ತಪಾಸಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಆದರೆ, ಸೋಂಕಿನ ಮೂಲ ಪತ್ತೆ ಆಗಿಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಈರುಳ್ಳಿ ವ್ಯಾಪಾರಿಯಿಂದ ಸೋಂಕು ವ್ಯಾಪಿಸಿದೆ ಎಂಬುದು ತಿಳಿದು ಬಂದಿದೆ. ಸದ್ಯದರಲ್ಲಿಯೇ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಮಾತನಾಡಿ, ಕೋವಿಡ್‌ಗಾಗಿ ಸಿಮೀತವಾಗಿವಾಗಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯವರು ನಾನ್‌ ಕೋವಿಡ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಾರದು. ಇದು ಸ್ಪಷ್ಟವಾದ ಮಾರ್ಗಸೂಚಿಯಾಗಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ಯಾವುದೇ ಆರೋಗ್ಯ ಸಿಬ್ಬಂದಿ, ವೈದ್ಯರು ನಾನ್‌ ಕೋವಿಡ್‌ ಆಸ್ಪತ್ರೆಗಳಲ್ಲಿ ಅದೇ ಸಮಯದಲ್ಲಿ ಕೆಲಸ ಮಾಡುವಂತಿಲ್ಲ. ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ರೋಗದ ಲಕ್ಷಣ ಇರುವವರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಗರದ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಲ್ಯಾಬ್‌ ಅನುಮತಿಗೆ ಎನ್‌ಎಬಿಎಲ್‌ ನಿಯಾಮಾನುಸಾರ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಡಾಳ್‌ ವಿರೂಪಾಕ್ಷಪ್ಪ, ಪ್ರೊ.ಎನ್‌.ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಎಸ್‌.ಎ. ರವೀಂದ್ರನಾಥ್‌, ಮೇಯರ್‌ ಬಿ.ಜಿ. ಅಜಯಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಸಿಇಒ ಪದ್ಮಾ ಬಸವಂತಪ್ಪ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next