Advertisement

ನೌಕರರಿಗೆ ಸಾಮಾಜಿಕ ಬಾಧ್ಯತೆ-ಬದ್ಧತೆ ಅಗತ್ಯ

03:47 PM Jul 01, 2019 | Team Udayavani |

ದಾವಣಗೆರೆ: ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವರು ಸದಾ ಸಮಾಜಮುಖೀಗಳಾಗಿ ಒಳ್ಳೆಯ ಕೆಲಸ ಮಾಡಬೇಕು ಎಂದು ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾನುವಾರ ಸೇವಾ ನಿವೃತ್ತಿ ಹೊಂದಿದ ಲೀಡ್‌ ಬ್ಯಾಂಕ್‌ ಕೆನರಾ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ. ಎರ್ರಿಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ತೊರೆಸಾಲ-ನೊರೆಹಾಲು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಗಳ ಮೂಲಕ ವೇತನ ಪಡೆಯುವಂತಹವರು ಸಾಮಾಜಿಕ ಬಾಧ್ಯತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಸರ್ಕಾರಿ ಸೇವೆಯಲ್ಲಿ ಇದ್ದಾಗ ಬರುವಂತಹ ಸಾರ್ವಜನಿಕರೊಂದಿಗೆ ಚೆನ್ನಾಗಿ ಮಾತನಾಡಿ ಅವರ ಕೆಲಸ ಮಾಡಿಕೊಡುವಂತಹ ಬದ್ಧತೆ ತೋರಬೇಕು. ಅಧಿಕಾರಿ, ಸಿಬ್ಬಂದಿ ಸಮಾಜಮುಖೀ ಚಿಂತನೆಯೊಂದಿಗೆ ಕೆಲಸ ಮಾಡಿದಲ್ಲಿ ನಿವೃತ್ತಿ ನಂತರವೂ ಸಮಾಜದಲ್ಲಿ ಒಳ್ಳೆಯ ಮನ್ನಣೆ, ಗೌರವ ದೊರೆಯುತ್ತದೆ ಎಂಬುದಕ್ಕೆ ಎನ್‌.ಟಿ. ಎರ್ರಿಸ್ವಾಮಿಯವರೇ ಸಾಕ್ಷಿ ಎಂದು ತಿಳಿಸಿದರು.

ಯಾವುದೇ ಕೆಲಸದಲ್ಲಿ ಇದ್ದಾಗ ಸಾರ್ವಜನಿಕರೊಟ್ಟಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಿಕೊಡದೇ ಹೋದಲ್ಲಿ ನಿವೃತ್ತಿ ನಂತರ ಎದುರಿಗೆ ಬಂದರೂ ಯಾರೂ ಗೌರವ ನೀಡುವುದಿಲ್ಲ. ಆಗ ಬಳಸುವಂತಹ ಭಾಷೆ, ಪದಗಳೇ ಬೇರೆ ರೀತಿಯದ್ದಾಗಿರುತ್ತವೆ ಎಂದು ಸೂಚ್ಯವಾಗಿ ಹೇಳಿದರು.

ಜಗಳೂರು ತಾಲೂಕಿನ ಸಣ್ಣ ಗ್ರಾಮದಲ್ಲಿ ಜನಿಸಿರುವ ಎನ್‌.ಟಿ. ಎರ್ರಿಸ್ವಾಮಿ ಬ್ಯಾಂಕ್‌ ಅಧಿಕಾರಿಯಾಗಿ ಹಲವಾರು ರೈತರು, ಮಹಿಳೆಯರಿಗೆ ಒಂದಲ್ಲ ಒಂದು ರೀತಿಯ ಸಹಾಯ ಮಾಡಿದ್ದಾರೆ. ಎಲ್ಲಿ ಕಷ್ಟ ಇರುತ್ತೆಯೋ ಅಲ್ಲಿ ಒಳ್ಳೆಯ ಸಾಹಿತ್ಯ, ಸಂಸ್ಕೃತಿ ಹೊರ ಹೊಮ್ಮುತ್ತದೆ ಎನ್ನುವುದಕ್ಕೆ ನಿದರ್ಶನದಂತೆ ಎರ್ರಿಸ್ವಾಮಿ ಕೆಲಸ ಮಾಡಿದ್ದಾರೆ. ನಿವೃತ್ತ ಜೀವನದಲ್ಲಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಸಮಾಜಮುಖೀಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

Advertisement

ಖ್ಯಾತ ಹಾಸ್ಯ ವಾಗ್ಮಿ ವೈ.ವಿ. ಗುಂಡುರಾವ್‌ ಮಾತನಾಡಿ, ಎನ್‌.ಟಿ. ಎರ್ರಿಸ್ವಾಮಿ ಸಂಸ್ಕಾರ, ಸಂಸ್ಥೆ ಮತ್ತು ಸಮಾಜದ ಕಾರ್ಯ ಸಾಕಾರಗೊಳಿಸಿದ್ದಾರೆ. ಕೆನರಾ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕರಾಗಿದ್ದರೂ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದ ಜನರು, ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸ್ವಾವಲಂಬನೆಗೆ ಕಾರಣಕರ್ತರಾಗಿದ್ದಾರೆ. ಇಂದಿಗೂ ಅನೇಕರ ಮನೆಯಲ್ಲಿ ಅವರ ಫೋಟೋ ಇರುವುದು ಅವರ ಮಾಡಿರುವ ಒಳ್ಳೆಯ ಕೆಲಸದ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಖ್ಯಾತ ಸಾಹಿತಿ ಬಿ.ಎಲ್. ವೇಣು ಮಾತನಾಡಿ, ಹಿಂದೆ ಬ್ಯಾಂಕ್‌ ಅಧಿಕಾರಿಗಳು ಎಂದರೆ ಸಾಕಷ್ಟು ಗೌರವ ಇತ್ತು. ಈಗ ಕೆಲವಾರು ಬ್ಯಾಂಕ್‌ ಅಧಿಕಾರಿಗಳು ಜನರೊಂದಿಗೆ ಸರಿಯಾಗಿ ಸ್ಪಂದಿಸುವುದೇ ಇಲ್ಲ. ಮುಖ ಕೊಟ್ಟು ಮಾತನಾಡುವುದೂ ಇಲ್ಲ. ಬರೀ ಕಂಪ್ಯೂಟರ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ನಮ್ಮ ಹಣವನ್ನು ನಮಗೆ ಕೊಡಲಿಕ್ಕೆ ಇಲ್ಲ ಸಲ್ಲದ ಕಾನೂನು, ಸಬೂಬು ಹೇಳುತ್ತಾರೆ. ಮುಂದೆ ನಾವು ಬ್ಯಾಂಕ್‌ನಲ್ಲಿಡುವ ಹಣಕ್ಕೆ ನಾವೇ ಬಡ್ಡಿ ಕಟ್ಟುವ ಕಾಲ ಬರಬಹುದು. ಅಂತಹವರ ನಡುವೆಯೂ ಎನ್‌.ಟಿ. ಎರ್ರಿಸ್ವಾಮಿಯವರಂತಹ ಅಪರೂಪದ ವ್ಯಕ್ತಿಗಳು ಇದ್ದಾರೆ ಎಂಬುದು ಸಂತೋಷದ ವಿಷಯ ಎಂದರು.

ಎನ್‌.ಟಿ. ಎರ್ರಿಸ್ವಾಮಿ ಅಭಿನಂದನಾ ಬಳಗದ ಜಿ.ಎಸ್‌. ಸುಭಾಶ್ಚಂದ್ರಬೋಸ್‌ ಪ್ರಾಸ್ತಾವಿಕ ಮಾತುಗಳಾಡಿದರು. ಜಗಳೂರು ಶಾಸಕ ಎಸ್‌. ವಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ, ಎಂ. ಬಸವಪ್ಪ, ಎಸ್‌.ಆರ್‌. ಶ್ರೀನಿವಾಸಮೂರ್ತಿ, ಜಿ.ಬಿ.ಟಿ. ಮೋಹನ್‌ಕುಮಾರ್‌, ಎಚ್. ರಘುರಾಜ್‌, ಹುಸೇನ್‌ಮಿಯಾ ಸಾಬ್‌, ಬಿ. ದೇವೇಂದ್ರಪ್ಪ, ಓ.ಬಿ. ಕಲ್ಲೇಶಪ್ಪ ಹಾಗೂ ಎನ್‌.ಟಿ. ಎರ್ರಿಸ್ವಾಮಿ, ಸಾವಿತ್ರಿ ಎರ್ರಿಸ್ವಾಮಿ ಇದ್ದರು.

ಎಂ.ಡಿ. ಆಂಜನೇಯ ಸಂಗಡಿಗರು ಪ್ರಾರ್ಥಿಸಿದರು. ಡಿ.ಸಿ. ಮಲ್ಲಿಕಾರ್ಜುನ್‌ ಸ್ವಾಗತಿಸಿದರು. ಸಂಧ್ಯಾ ಸುರೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next