Advertisement

ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಅಧ್ಯಯನ ಅಗತ್ಯ

11:39 AM Feb 24, 2020 | Naveen |

ದಾವಣಗೆರೆ: ರಾಜ್ಯದಲ್ಲಿನ ಅನೇಕ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕತೆಯ ಬಗ್ಗೆ ಅಧ್ಯಯನ, ದಾಖಲೀಕರಣ ಆಗಬೇಕಾಗಿದೆ ಎಂದು ಪ್ರಗತಿಪರ ಚಿಂತಕ ಡಾ| ಸಿದ್ಧನಗೌಡ ಪಾಟೀಲ್‌ ಆಶಿಸಿದ್ದಾರೆ.

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ಡಾ|ಎಚ್‌.ಆರ್‌.ಸ್ವಾಮಿ ಅವರ ಕರ್ನಾಟಕದ ಕೊರಚರು… ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರಚರು ಎಂದರೆ ಇಂತಹವರು ಎಂದು ಬಿಂಬಿಸುವುದು ಕಂಡು ಬರುತ್ತಿದೆ. ಕೊರಚರು ಒಳಗೊಂಡಂತೆ ಎಲ್ಲಾ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಶೈಲಿಯ ಬಗ್ಗೆ ಸಮಗ್ರ ಅಧ್ಯಯನದ ಜೊತೆಗೆ ಅದರ ದಾಖಲೀಕರಣವೂ ಆಗಬೇಕಿದೆ ಎಂದು ತಿಳಿಸಿದರು.

ಅನೇಕ ಬುಡುಕಟ್ಟು ಜನಾಂಗಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದವರು. ಕಾಡುಗಳಲ್ಲಿ ತಮ್ಮ ಜೀವನ ನಡೆಸಿಕೊಂಡು ಬಂದವರ ನಾಗರಿಕತೆ ಪರಿಶೀಲನೆ ನಡೆಸಿದಾಗ ಒಟ್ಟು, ಕೂಡು ಕುಟುಂಬ ವ್ಯವಸ್ಥೆ ಕಂಡು ಬರುತ್ತಿದೆ. ಕಾಲಾನುಕ್ರಮೇಣ ಅಂತಹ ವಾತಾವರಣ ಕಡಿಮೆ ಆಗಿದೆ ಎಂದು ತಿಳಿಸಿದರು.

ಇಂದಿನ ದಿನಮಾನಗಳಲ್ಲಿ ಸಾಂಸ್ಕೃತಿಕತೆ ವೈಯಕ್ತಿಕ ಹಿತಾಸಕ್ತಿಯನ್ನ ವೈಭವೀಕರಿಸುತ್ತಿದೆ. ವಿಂಗಡಿತ ಜೀವನ ಶೈಲಿಗಿಂತಲೂ ಅವಿಭಜಿತ ಜೀವನಕ್ರಮದಲ್ಲಿ ಅಳಿಯಲಾಗದ ಕ್ರಮಗಳಿವೆ. ಸಾಮ್ರಾಜ್ಯಶಾಹಿತ್ವದ ಪರಾಕ್ರಮದ ಫಲವಾಗಿ ಎಲ್ಲವೂ ನಶಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತಕ್ಕೆ ಆಗಮಿಸಿದ ಆಂಗ್ಲರು ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಲೂಟಿಯಲ್ಲಿ ತೊಡಗಿದರು. ಕಾಡಿನಲ್ಲಿ ರೈಲು
ಮುಂತಾದ ಅಭಿವೃದ್ಧಿ ಕಾರ್ಯಗಳ ಪ್ರಾರಂಭಿಸಿದ ನಂತರ ಕಾಡುಗಳಲ್ಲಿ ಶತಶತಮಾನಗಳಿಂದ ವಾಸ ಮಾಡಿಕೊಂಡು ಬಂದಿದ್ದಂತಹ ಸಾವಿರಾರು ಬುಡಕಟ್ಟು ಕುಟುಂಬಗಳನ್ನು ಒಕ್ಕಲೆಬ್ಬಿಸಲಾರಂಭಿಸಿದರ ಪರಿಣಾಮ ಬುಡಕಟ್ಟು ಜನಾಂಗದವರು ತಿರುಗಿಬಿದ್ದರು. ಬಂಡಾಯವೆದ್ದರು. ಬದುಕಿಗಾಗಿ ಲೂಟಿ ಮಾಡಲಾರಂಭಿಸಿದರು. ಅಂತಹವರಲ್ಲಿ ಅನೇಕರು ಸ್ವಾತಂತ್ರ್ಯ ಚಳವಳಿಯಲ್ಲೂ ಧುಮುಕಿದ್ದರು ಎಂದು ತಿಳಿಸಿದರು.

Advertisement

ಸಂಶೋಧಕ ಡಾ| ಅರುಣ್‌ ಜೋಳದಕೂಡ್ಲಿಗಿ ಮಾತನಾಡಿ, ರಾಜ ಮಹಾರಾಜರ ಪರವಾಗಿ ಹೋರಾಡಿದ್ದರ ಫಲವಾಗಿ ಸೈನಿಕರಿಗೆ ನೀಡಲಾಗಿದ್ದ ಸಂಪತ್ತನ್ನು ದರೋಡೆಕೋರರು ಲೂಟಿ ಮಾಡುತ್ತಿದ್ದರು. ಯುದ್ಧಭೂಮಿ ಕೌಶಲ್ಯತೆ ಇಲ್ಲದ ದರೋಡೆಕೋರ ಪಡೆ ಬ್ರಿಟಿಷರ ಆಗಮನದ ನಂತರ ವಿಭಜಿತರಾಗತೊಡಗಿದರು. ಕ್ರಮೇಣ ಜೀವನಕ್ಕಾಗಿ ಲೂಟಿ, ದರೋಡೆಯಲ್ಲೇ ತೊಡಗಿಸಿಕೊಂಡರು. ಕೌಶಲ್ಯತೆಯ ಕೊರತೆ ಕಾರಣ ಅನೇಕರು ಸಮಾಜದ ಮುಖ್ಯವಾಹಿನಿಗೆ ಬರಲಿಕ್ಕೂ ಸಾಧ್ಯವಾಗದೇ ನರಳುವ ಸ್ಥಿತಿಯಲ್ಲಿ ಇರುವುದು ಕಂಡು ಬರುತ್ತಿದೆ ಎಂದರು. ಖ್ಯಾತ ಸಾಹಿತಿ ಪ್ರೊ| ಚಂದ್ರಶೇಖರ ತಾಳ್ಯ, ಡಾ| ಕೇಶವರೆಡ್ಡಿ ಹಂದ್ರಾಳ, ಡಾ| ತಾರಣಿ ಶುಭದಾಯಿನಿ, ಡಾ|
ಎಚ್‌.ಆರ್‌. ಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next