ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರೆಲ್ಲರೂ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.
ಶನಿವಾರ ನಗರದ ಸೋಮೇಶ್ವರ ವಿದ್ಯಾಲಯದ ಮಂಜೂಷ ಸಭಾಂಗಣದಲ್ಲಿ ಡಿವೈಎಸ್ಪಿ ಡಾ| ಬಿ. ದೇವರಾಜ್ ರಚಿಸಿದ ಅಮೃತದ ಒರತೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶು ವೈದ್ಯಕೀಯದಲ್ಲಿ ಪದವಿ ಪಡೆದ ಡಾ| ದೇವರಾಜ್ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಅವರು ಇನ್ನೂ ಹೆಚ್ಚು ಹೆಚ್ಚು ಬರೆಯಲಿ ಎಂದು ಆಶಿಸಿದರು.
ನಮ್ಮ ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಅವರೆಲ್ಲರನ್ನೂ ಪ್ರೋತ್ಸಾಹಿಸುವ ಅಗತ್ಯವಿದೆ. ಇತ್ತೀಚೆಗೆ ಪೊಲೀಸ್ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಪೊಲೀಸರಿಗಾಗಿಯೇ ಕವಿಗೋಷ್ಠಿ ಆಯೋಜಿಸಲಾಗಿತ್ತು. ಅದೇ ರೀತಿ ದಾವಣಗೆರೆಯಲ್ಲಿಯೂ ಸಹ ಮುಂದಿನ ದಿನಗಳಲ್ಲಿ ಏರ್ಪಡಿಸಲಾಗುವುದು ಎಂದು ಹೇಳಿದರು.
ಉಡುಪಿಯ ಕರಾವಳಿ ಕಾವಲು ಪಡೆ ಪೊಲೀಸ್ ಅಧೀಕ್ಷಕ ಆರ್.ಚೇತನ್ ಮಾತನಾಡಿ, ಡಾ| ಬಿ. ದೇವರಾಜ್ ಬಹುಮುಖೀ ಪ್ರತಿಭೆ. ಎಲ್ಲ ರಂಗಗಳಲ್ಲೂ ಆಸಕ್ತಿ ಹೊಂದಿರುವ ಅವರು ತಾಯಿ, ಪ್ರೀತಿ, ಪ್ರೇಮ, ಪ್ರಕೃತಿ, ದೇಶಪ್ರೇಮ ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯವರು ಒಂದೇ ರೀತಿ ಇರುತ್ತಾರೆ ಎಂಬುದಾಗಿ ಸಮಾಜ ಭಾವಿಸುತ್ತದೆ. ಪೊಲೀಸರು ಮಾತ್ರವಲ್ಲ ವೈದ್ಯರು, ಉಪನ್ಯಾಸಕರು ಹೀಗೆ ಇವರೆಲ್ಲ ಹೀಗೆ ಇರಬೇಕು ಎಂದು ಸಮಾಜ ಬಯಸುತ್ತದೆ. ಅದನ್ನು ಮೀರಿದವರು ದೇವರಾಜ್. ಇಲಾಖೆಯಲ್ಲಿ ಇರುವ ಎಲ್ಲ ಪ್ರತಿಭೆಗಳಿಗೆ ಅವರು ಮಾದರಿಯಾಗಲಿ. ಅವರ ಅಮೃತ ಒರತೆ ಕವನ ಸಂಕಲನಕ್ಕೆ ನಾನೇ ಮುನ್ನುಡಿ ಬರೆದಿರುವೆ. ಮುಂದೆ ಕೂಡ ಅವರು ಸಾಕಷ್ಟು ಕೃತಿಗಳನ್ನು ರಚಿಸಲಿ ಎಂದು ಹಾರೈಸಿದರು.
ಸಾಹಿತಿ,ಕವಿ ಆನಂದ ಋಗ್ವೇದಿ ಮಾತನಾಡಿ, ಮನಸ್ಸಿನ ಭಾವ ಹೇಳಿಕೊಳ್ಳುವ ಮಾಧ್ಯಮವೇ ಕವಿತೆ. ಇಲ್ಲಿ ಪ್ರೀತಿ, ಸಂಕಟ, ಬಡತನ ಎಲ್ಲವನ್ನೂ ಒಳಗೊಂಡ ಮನುಷ್ಯ ಪ್ರೀತಿಯ ಕವಿತೆಗಳು ಇವಾಗಿವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಎ.ಎಚ್ ಶಿವಯೋಗಿಸ್ವಾಮಿ, ಜಾನಪದ ತಜ್ಞ ಡಾ| ಎಂ.ಜಿ ಈಶ್ವರಪ್ಪ, ಹಿರಿಯ ಪತ್ರಕರ್ತ ಬಿ.ಎನ್ ಮಲ್ಲೇಶ್, ಸೋಮೇಶ್ವರ ವಿದ್ಯಾಲಯದ ಕೆ.ಎಂ ಸುರೇಶ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.