ದಾವಣಗೆರೆ: ಮಳೆ, ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ವಿತರಣೆಗೆ 20 ಲಕ್ಷ ರೂ. ಮೌಲ್ಯದ ದಿನಸಿ, ಬಿಸ್ಕತ್, ನೀರಿನ ಬಾಟಲಿ, ಮಹಿಳೆ ಮತ್ತು ಮಕ್ಕಳ ಬಟ್ಟೆ, ಬ್ಲ್ಯಾಂಕೆಟ್, ಫಿನಾಯಿಲ್, ಔಷಧಿ, ಜಾನುವಾರುಗಳಿಗೆ ಅಗತ್ಯ ವಸ್ತುಗಳೊಂದಿಗೆ ಬುಧವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಾಗಲಕೋಟೆ ಜಿಲ್ಲೆಯ ತೇರದಾಳ್, ಜಮಖಂಡಿ ಇತರೆ ಭಾಗಕ್ಕೆ ತೆರಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ್, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್.ಸಿ. ಜಯಮ್ಮ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಸಂಗ್ರಹಿಸಿದ ಅಗತ್ಯ ಸಾಮಗ್ರಿ ವಿತರಣೆಗೆ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಭಟ್ ನೇತೃತ್ವದ 15 ಜನರ ತಂಡ ಪ್ರಯಾಣ ಬೆಳೆಸಿತು.
ತಂಡವನ್ನ ಬೀಳ್ಕೊಟ್ಟು ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿನ ನೆರೆಯಿಂದ ಸಂತ್ರಸ್ತಗೊಂಡವರ ಪರಿಹಾರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್, ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ದಾವಣಗೆರೆ ವಿವಿಧ ಭಾಗದಲ್ಲಿ ದೇಣಿಗೆ ಸಂಗ್ರಹಿಸಲಾಯಿತು. ದಾನಿಗಳ ಊರೆಂಬ ಖ್ಯಾತಿಯ ದಾವಣಗೆರೆಯಲ್ಲಿ 20 ಲಕ್ಷ ಮೌಲ್ಯದ ದಿನಸಿ, ಬಿಸ್ಕತ್, ನೀರಿನ ಬಾಟಲಿ, ಮಹಿಳೆ ಮತ್ತು ಮಕ್ಕಳ ಬಟ್ಟೆ, ಬ್ಯಾಂಕೆಂಟ್, ಫಿನಾಯಿಲ್, ಔಷಧಿ, ಜಾನುವಾರುಗಳಿಗೆ ಅಗತ್ಯ ವಸ್ತುಗಳ ಜೊತೆಗೆ 5 ಲಕ್ಷ ನಗದು (2.75 ಲಕ್ಷದ ಚೆಕ್ ಒಳಗೊಂಡಂತೆ) ಸಂಗ್ರಹವಾಗಿದೆ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು. ದಾನಿಗಳಿಂದ ಸಂಗ್ರಹಿಸಿದಂತಹ ಅಗತ್ಯ ವಸ್ತುಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ಉದ್ದೇಶದಿಂದ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ನೇತೃತ್ವದಲ್ಲಿ 15 ಜನರ ತಂಡ ಜಮುಖಂಡಿ, ತೇರದಾಳ್ ಇತರೆ ಭಾಗಕ್ಕೆ ತೆರಳಲಿದೆ. ಬಹಳ ಅಚ್ಚುಕಟ್ಟಾಗಿ ಪ್ರತಿಯೊಬ್ಬ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ನೀಡಿದಂತಹ ದಾವಣಗೆರೆಯ ಪ್ರತಿಯೊಬ್ಬರು, ವ್ಯಾಪಾರಸ್ಥರು, ಸಂಘ- ಸಂಸ್ಥೆಗಳವರಿಗೆ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ. ದಾನಿಗಳ ಹೃದಯ ವಿಶಾಲತೆಗೆ ಸದಾ ಆಭಾರಿ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಗುರು ಇತರರು ಇದ್ದರು.
ಗೌತಮ್ ಜೈನ್, ಶಾಮನೂರು ಹರೀಶ್, ಗುತ್ತೂರು ಮಂಜುನಾಥ್, ಎಂ.ಬಿ. ಪ್ರಕಾಶ್, ಜಗದೀಶ್, ಸನ್ನಿ ಜೈನ್, ಕಿರಣ್ ಜೈನ್, ರಾಜು ನೀಲಾನಹಳ್ಳಿ ಇತರರು ಜಮಖಂಡಿ, ತೇರದಾಳಕ್ಕೆ ತೆರಳಿದರು.