ದಾವಣಗೆರೆ: ಭದ್ರಾ ಜಲಾಶಯ ಒಂದು ತಿಂಗಳ ಮುಂಚೆಯೇ ತುಂಬಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮೊಗದಲ್ಲಿ ಮಂದಹಾಸ ಕಂಡು ಬರುತ್ತಿದೆ ಎಂದು ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ. ಪವಿತ್ರಾ ರಾಮಯ್ಯ ಸಂತಸ ವ್ಯಕ್ತಪಡಿಸಿದರು.
ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಅನ್ನದಾತರ ಹಾಗೂ ಜನ ಸಾಮಾನ್ಯರ ಜೀವನಾಡಿಯಾದ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ವರ್ಷಧಾರೆಯ ಕಾರಣ ಭದ್ರೆ ತನ್ನ ಗತವೈಭವವನ್ನು ಮರಳಿ ಪಡೆದಿರುವ ಕಾರಣ ರೈತರಲ್ಲಿ ಸಂತಸ ಕಂಡು ಬರುತ್ತಿದೆ ಎಂದರು.
ಕಳೆದ 15 ದಿನಗಳ ಹಿಂದೆ ಎಡ ಮತ್ತು ಬಲ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಡೆಸಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದ್ದ ನೀರಿನ ಕೊರತೆಯ ಆತಂಕ ದೂರವಾಗಿದೆ. ಈ ಬಾರಿ ಒಂದು ತಿಂಗಳ ಮುಂಚೆಯೇ ಭದ್ರಾ ಜಲಾಶಯ ತುಂಬಿದೆ. ಪ್ರತಿ ಬಾರಿ ಆಗಸ್ಟ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುವುದು ವಾಡಿಕೆ. ಆದರೆ, ಈ ವರ್ಷ ಒಂದು ತಿಂಗಳ ಮುಂಚೆ ಜಲಾಶಯ ತುಂಬಿರುವುದು ವಿಶೇಷ ದಾಖಲೆಯಾಗಿದೆ ಎಂದರು.
ಈ ಬಾರಿಯೂ ಬೇಸಿಗೆ ಬೆಳೆಗೆ ನೀರು ಲಭ್ಯ ಆಗುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಬಾರಿ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಹರಿಸಿದಂತೆ ಮುಂಗಾರು ಬೆಳೆಗಳಿಗೆ ಕೂಡ ನೀರು ಹರಿಸುತ್ತೇವೆ. ನಾನು ಅ ಧಿಕಾರದಲ್ಲಿ ಇರುವವರೆಗೆ ರೈತರಿಗೆ ನೀರಿನ ವಿಚಾರದಲ್ಲಿ ತೊಂದರೆ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ನಿರ್ದೇಶಕ ವಿನಾಯಕ್, ಅ ಧೀಕ್ಷಕ ಅಭಿಯಂತರ ಚಂದ್ರಹಾಸ, ಕಾರ್ಯಪಾಲಕ ಅಭಿಯಂತರ ರವಿಚಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಇತರರು ಇದ್ದರು.
ಇದನ್ನೂ ಓದಿ : ಸಿನಿಮಾ ಕ್ಯೂ: ಆಗಸ್ಟ್ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!